Advertisement
ಶಿಕ್ಷಣ ಸಂಸ್ಥೆ ಸಹಿತ ಕೆಲವು ಖಾಸಗಿ ಸಂಸ್ಥೆಗಳಲ್ಲಷ್ಟೇ ಹೆಚ್ಚು ಚರ್ಚೆಯಾಗುತ್ತಿದ್ದ ಪದವೀಧರ ಕ್ಷೇತ್ರದ ಚುನಾವಣೆ ಈಗ ಮನೆ ಮನೆಗಳಲ್ಲೂ ಚರ್ಚೆ ಯಾಗುತ್ತಿದೆ. ಹೀಗೊಂದು ಚುನಾವಣೆ ನಡೆಯುತ್ತದೆ ಎಂಬುದೇ ಎಷ್ಟೋ ಪದವೀಧರರಿಗೆ ತಿಳಿದಿರಲಿಲ್ಲ. ಈ ಬಾರಿ ರಾಜ್ಯ, ರಾಷ್ಟ್ರೀಯ ನಾಯಕರು ಬಂದು ಸಭೆ ನಡೆಸುವುದು, ಶಿಕ್ಷಣ ಸಂಸ್ಥೆ, ಖಾಸಗಿ ಸಂಸ್ಥೆಗಳಿಗೆ ಪ್ರಮುಖರು ಭೇಟಿ ನೀಡಿ ಮತಯಾಚನೆ ನಡೆದಿದೆ.
ಪಕ್ಷದ ಅಧಿಕೃತ ಅಭ್ಯರ್ಥಿಗಳು ಮಾತ್ರವೇ ಸ್ಪರ್ಧಾ ಕಣದಲ್ಲಿದ್ದಿದ್ದರೆ ಈ ಚುನಾವಣೆ ಇಷ್ಟೊಂದು ಸದ್ದಾಗುತ್ತಿರಲಿಲ್ಲ. ಕಳೆದ ಬಾರಿಯಂತೆ ಸಾಮಾನ್ಯ ಚುನಾವಣ ಪ್ರಕ್ರಿಯೆಯಾಗಿ ಮುಗಿದು ಹೋಗುತಿತ್ತು. ಆದರೆ ಎರಡು ರಾಷ್ಟ್ರೀಯ ಪಕ್ಷಗಳ ಅಧಿಕೃತ ಅಭ್ಯರ್ಥಿಗಳಗೆ ಸೆಡ್ಡು ಹೊಡೆಯಲು ಎರಡೂ ಪಕ್ಷದಿಂದಲೂ ಒಬ್ಬೊಬ್ಬರು ಬಂಡಾಯದ ಧ್ವಜ ಹಾರಿಸಿದ್ದಾರೆ. ಅಷ್ಟು ಮಾತ್ರವಲ್ಲ ರಾಷ್ಟ್ರೀಯ ಪಕ್ಷಗಳಷ್ಟೇ ವ್ಯಾಪಕವಾಗಿ ಪ್ರಚಾರ ನಡೆಸುತ್ತಿದ್ದಾರೆ. ಈ ಮಧ್ಯೆ ಇನ್ನು ಕೆಲವು ಮಂದಿ ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದು, ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬಿರುಸಿನ ಮತಶಿಕಾರಿ ನಡೆಸಿದ್ದಾರೆ. ಇದು ನಾಲ್ವರ ನಡುವಿನ ಸ್ಪರ್ಧೆ
ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಆಯನೂರು ಮಂಜುನಾಥ್. ಅದೇ ಪಕ್ಷದಲ್ಲಿ ದಶಕಗಳಿಂದ ಇದ್ದು ಈ ಹಿಂದೆ ಪರಿಷತ್ ಚುನಾವಣೆಯಲ್ಲೂ ಸ್ಪರ್ಧೆ ಮಾಡಿದ್ದ ಎಸ್.ಪಿ. ದಿನೇಶ್ ಟಿಕೆಟ್ ಸಿಗದೆ ಬಂಡಾಯ ನಿಂತಿದ್ದಾರೆ. ಬಿಜೆಪಿ ಅಧಿಕೃತ ಅಭ್ಯರ್ಥಿ ಡಾ| ಧನಂಜಯ ಸರ್ಜಿ. ಅದೇ ಪಕ್ಷ ಮಾಜಿ ಶಾಸಕರಾದ ಕೆ. ರಘಪತಿ ಭಟ್ ಟಿಕೆಟ್‌ಗಾಗಿ ಪ್ರಯತ್ನಿಸಿ ಕೊನೆಗೆ ಬಂಡಾಯದ ಪ್ರತಿಸ್ಪರ್ಧಿಯಾಗಿ ಕಣದಲ್ಲಿದ್ದಾರೆ. ಬಂಡಾಯದ ಮೂಲಕ ಒಬ್ಬರು ಕರಾವಳಿಯಲ್ಲಿ ಹೆಚ್ಚು ಸದ್ದು ಮಾಡಿದರೆ, ಇನ್ನೊಬರು ಮಲೆನಾಡು ಭಾಗದಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ಈ ಮಧ್ಯೆ ಪಕ್ಷದ ಅಧಿಕೃತ ಅಭ್ಯರ್ಥಿಗಳಿಬ್ಬರು ಪಕ್ಷದ ಸಂಘಟನೆಯ ನೆಲೆಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ.
Related Articles
ರಾಜ್ಯ ನಾಯಕರು, ರಾಷ್ಟ್ರಮಟ್ಟದ ನಾಯಕರು ಜಿಲ್ಲೆ ಜಿಲ್ಲೆಗೆ ಭೇಟಿ ನೀಡಿ ಸಭೆ ನಡೆಸುವುದು, ಅನಂತರ ನಿರಂತರ ಜಿಲ್ಲಾ ನಾಯಕರು, ಜನ ಪ್ರತಿನಿಧಿಗಳು ಅಲ್ಲಲ್ಲಿ ಸಭೆ ಮಾಡುವುದು ಮೇಲಿಂದ ಮೇಲೆ ಸಂಸ್ಥೆಗಳಿಗೆ ಭೇಟಿ ನೀಡುವುದು. ಮತದಾರರಿಗೆ ಪದೇಪದೆ ದೂರವಾಣಿ ಕರೆ ಮಾಡುವುದು, ಅವರ ಮನೆಗಳಿಗೆ ಭೇಟಿ ನೀಡುವುದು ಹೀಗೆ ಪರಿಷತ್ ಚುನಾವಣೆಯಲ್ಲಿ ಇಷ್ಟೊಂದು ಸಭೆ ನಡೆದಿರುವುದು ನಾವ್ಯಾರು ಈವರೆಗೂ ನೋಡಿರಲಿಲ್ಲ ಎನ್ನುತಾರೆ ಬಿಜೆಪಿ ಮತ್ತು ಕಾಂಗ್ರೆಸ್‌ನ ಹಿರಿಯ ಕಾರ್ಯಕರ್ತರು.
Advertisement
ಹಿಂದೆಲ್ಲ ಅಭ್ಯರ್ಥಿಗಳು ಜಿಲ್ಲೆಗೆ ಒಮ್ಮೆ ಆಗಮಿಸಿ ಪತ್ರಿಕಾಗೋಷ್ಠಿ ನಡೆಸಿ, ಜಿಲ್ಲಾ ಕಚೇರಿಗೆ ಭೇಟಿ ನೀಡಿ ವಾಪಸ್ ಆಗುತ್ತಿದ್ದರು. ಆದರೆ ಈ ಬಾರಿ ಅಭ್ಯರ್ಥಿಗಳೇ ನಿರಂತರ ಪ್ರಚಾರ ನಡೆಸಿದ್ದಾರೆ. ಅನಂತರ ಅವರ ಪರವಾಗಿ ಸಾಲುಸಾಲು ಪತ್ರಿಕಾಗೋಷ್ಠಿಗಳು ನಡೆದಿವೆ. ಮತದಾರರನ್ನು ಸೆಳೆಯಲು ನಾನಾ ತಂತ್ರಗಳನ್ನು ಈ ಬಾರಿ ಬಳಸಲಾಗಿದೆ.