Advertisement
ಮುಂಜಾನೆಯಿಂದಲೇ ಸಮುದ್ರಸ್ನಾನಕ್ಕೆ ಕಡಲತೀರದ ಬಳಿ ಜನ ಸೇರಿದ್ದರು. ಮುಂಜಾನೆ 3 ಗಂಟೆ ಬಳಿಕ ದೇವಸ್ಥಾನದ ಬಾಗಿಲು ತೆರೆಯುತ್ತಿದ್ದಂತೆ ಸಮುದ್ರಸ್ನಾನಗೈದ ಭಕ್ತರು ಬಲರಾಮ ದೇವರ ದರ್ಶನ ಪಡೆದರು. ಬಹುತೇಕ ಶ್ರದ್ದಾಳುಗಳು ಗತಿಸಿದ ತಮ್ಮ ಹಿರಿಯರಿಗೆ ತಿಲತರ್ಪಣ ನಡೆಸುವ ಕಾರ್ಯಗಳು ಕಡಲತೀರದಲ್ಲಿ ಕಂಡು ಬರುತ್ತಿದ್ದವು. ಬೆಳಗ್ಗಿನಿಂದ ಸಂಜೆಯವರೆಗೆ ಸೀವಾಕ್ ಬಳಿಯಿಂದ ಮುಖ್ಯ ಬೀಚ್‌ವರೆಗೆ ಸುಮಾರು 1.5 ಕಿ.ಮೀ ದೂರ ಊದಕ್ಕೂ ಜನರ ಸ್ನಾನ ಮಾಡುತ್ತಿರುವು ಕಂಡು ಬಂತು. ವಡಭಾಂಡೇಶ್ವರ ಭಕ್ತವೃಂದದ ಸದಸ್ಯರು ಸ್ವಯಂ ಸೇವಕರಾಗಿ ನಿಂತು ದೇವಸ್ಥಾನಕ್ಕೆ ಬರುವ ಭಕ್ತರಿಗೆ ವ್ಯವಸ್ಥಿತವಾಗಿ ದೇವರ ದರ್ಶನ ಪಡೆಯುವಲ್ಲಿ ಸಹಕರಿಸಿದರು.
ಮುಂಜಾನೆಯಿಂದ ಸಮುದ್ರ ಮಧ್ಯೆ ಕರಾವಳಿ ಕಾವಲು ಪೋಲಿಸ್‌ಪಡೆಯ ಬೋಟ್‌ಗಳು ಅಲ್ಲದೆ ಓಶಿಯನ್ ಅಡ್ವೆಂಚರ್ ಬೋಟುಗಳು ರಕ್ಷಣಾ ಕಾರ್ಯಕ್ಕೆ ಸಜ್ಜಾಗಿದ್ದವು. ಜೀವರಕ್ಷಕ ಸಿಬಂದಿಗಳು ಜನರ ಮೇಲೆ ನಿಗಾ ವಹಿಸಿದ್ದರು. ಸಮುದ್ರಸ್ನಾನಕ್ಕೆ ಬರುವ ಜನಸಮೂಹ, ಸಮುದ್ರತೀರದಲ್ಲಿ ಅಪಾಯ ಸಂಭವಿಸದಂತೆ ಮತ್ತು ವಾಹನ ಸಂಚಾರಕ್ಕೆ ತೊಡಕಾಗದಂತೆ ಮಲ್ಪೆ ಪೊಲೀಸ್ ಠಾಣಾಧಿಕಾರಿ ಪ್ರವೀಣ್ ಆರ್. ನೇತೃತ್ವದಲ್ಲಿ 40ಕ್ಕೂ ಅಧಿಕ ಪೋಲಿಸರನ್ನು ನಿಯೋಜಿಸಲಾಗಿತ್ತು. ಮಾತ್ರವಲ್ಲದೆ ಬೀಚ್‌ನ ಸುತ್ತಮುತ್ತ, ಶೌಚಾಲಯ ಏರಿಯ, ದೇವಸ್ಥಾನ ಅಕ್ಕಪಕ್ಕ ಜನ ಸೇರುವಲ್ಲಿ ಹೆಚ್ಚಿನ ಭದ್ರತಾ ಸಿಬಂದಿಯನ್ನು ನೇಮಕ ಮಾಡಲಾಗಿತ್ತು. ಅಮಾವಾಸ್ಯೆಯ ಪ್ರಯುಕ್ತ ಮಲ್ಪೆ ಮೀನುಗಾರಿಕೆ ಬಂದರಿಗೆ ರಜೆ ಸಾರಲಾಗಿತ್ತು. ಸ್ನಾನಕ್ಕೆ ಸಾಕ್ಷಿ ಸಾಕ್ಷಿ ಕಲ್ಲು :
ಬಲರಾಮ ದೇವಸ್ಥಾನದ ಎಡಭಾಗದಲ್ಲಿರುವ ಸಾಕೇಶ್ವರ ಗುಡಿ ದರ್ಶನಕ್ಕೆ ಎಂದಿನಂತೆ ಭಕ್ತರ ಸರತಿ ಸಾಲು ಬಹುದೂರದವರೆಗಿತ್ತು. ಸಾಕೇಶ್ವರ ಗುಡಿಯೊಳಗಿರುವ ಸಾಕ್ಷಿ ಕಲ್ಲನ್ನು ಒಂದು ಸುತ್ತು ತಿರುಗಿಸಿ ನಮಿಸಿದರೆ ಸಮುದ್ರಸ್ನಾನ ಮಾಡಿದ್ದಕ್ಕೆ ಸಾಕ್ಷಿಯಾಗುತ್ತದೆ ಎಂದು ನಂಬಿಕೆ ಇದೆ. ಇದು ಹಿಂದಿನಿಂದ ನಡೆದು ಬಂದ ಪದ್ದತಿಯಾಗಿದ್ದು ಎಳ್ಳಮಾವಾಸ್ಯೆಯ ದಿನದಂದು ಮಾತ್ರ ಗುಡಿಯ ಬಾಗಿಲು ತೆರೆಯಲಾಗುತ್ತದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಟಿ. ಶ್ರೀನಿವಾಸ ಭಟ್ ತಿಳಿಸುತ್ತಾರೆ.