ಉಡುಪಿ: ರಾಮ ಮಂದಿರ ನಿರ್ಮಾಣವಾಗಿದೆ. ಇನ್ನು ರಾಮರಾಜ್ಯದ ಪರಿಕಲ್ಪನೆಯಡಿ ನಾವು ಸಾಗಬೇಕು. ಈ ನಿಟ್ಟಿನಲ್ಲಿ ಮನೆಯಿಲ್ಲದವರಿಗೆ ಮನೆ ನಿರ್ಮಿಸಿಕೊಡುವುದು ಉತ್ಕೃಷ್ಟ ಸೇವೆಯಾಗಿದೆ. ಬಡವರಿಗೆ ಸೂರು ಕಲ್ಪಿಸುವ ಮೂಲಕ ಅಯೋಧ್ಯೆಯ ಶ್ರೀ ರಾಮ ದೇವರಿಗೆ ಸೇವೆ ಸಲ್ಲಿಸಿದಂತಾಗುತ್ತದೆ ಎಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.
ರಾಮರಾಜ್ಯದ ಕಲ್ಪನೆಯಡಿ ಬಡವರಿಗೆ ಮನೆ ನಿರ್ಮಿಸುವ ಅಭಿಯಾನದಡಿ ಆಸರೆ ಚಾರಿಟೆಬಲ್ ಟ್ರಸ್ಟ್‌ವತಿಯಿಂದ ಗುಂಡಿಬೈಲು ಪಾಡಿಗಾರಿನಲ್ಲಿ ಮನೆ ನಿರ್ಮಾಣಕ್ಕೆ ಮಂಗಳವಾರ ಶಿಲಾನ್ಯಾಸ ನೆರವೇರಿಸಿ ಶ್ರೀಪಾದರು ಆಶೀರ್ವದಿಸಿದರು.
ಸಮಾಜದಲ್ಲಿ ಸೇವಾ ಪ್ರವೃತ್ತಿ ಹೆಚ್ಚಾಗಬೇಕು. ಮನೆಯಿಲ್ಲದವರನ್ನು ಗುರುತಿಸಿ ಮನೆ ನಿರ್ಮಿಸಿಕೊಡುವ ಮೂಲಕ ರಾಮರಾಜ್ಯದ ಸಂಕಲ್ಪ ಸಾಕಾರ ಮಾಡುವ ನಿಟ್ಟಿನಲ್ಲಿ ಶ್ರಮಿಸಬೇಕು. ರಾಮಮಂದಿರ ನಿರ್ಮಾಣವಾಗಿ ದೇವರ ಪ್ರಾಣಪ್ರತಿಷ್ಠೆಯೂ ನಡೆದಿದೆ. ರಾಮ ರಾಜ್ಯವೂ ಆಗಬೇಕು. ಬಡವರ ಸೇವೆಯೇ ಶ್ರೀ ರಾಮ ದೇವರ ಸೇವೆ ಎಂದರು.
ಆಸರೆ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ವಂಸತ ಭಟ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಲಕ್ಷ್ಮೀ ಎಲೆಕ್ಟ್ರಿಕಲ್ ಮಾಲಕ ರಾಜ್‌ಗೋಪಾಲ್ ಭಟ್ ಅವರು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಕಲಶ ಪೂಜೆಯ ಸಂದರ್ಭದಲ್ಲಿ ಮಾಡಿದ ಸಂಕಲ್ಪದಂತೆ ಆಸರೆ ಚಾರಿಟೆಬಲ್ ಟ್ರಸ್ಟ್ ಮೂಲಕ ಮನೆ ಕಟ್ಟಿಕೊಡಲು ನಿರ್ಧರಿಸಿದ್ದರು. ರಾಜ್‌ಗೋಪಾಲ್ ದಂಪತಿಯನ್ನು ಶ್ರೀಪಾದರು ಸಮ್ಮಾನಿಸಿದರು.
ಮಾಜಿ ಶಾಸಕ ಕೆ. ರಘುಪತಿ ಭಟ್, ಟ್ರಸ್ಟ್‌ನ ಕೋಶಾಧಿಕಾರಿ ಸತೀಶ್ ಕುಲಾಲ್, ನಗರಸಭೆ ಸದಸ್ಯೆ ಗೀತಾ ಶೇಟ್, ಪ್ರಮುಖರಾದ ಮಂಜುನಾಥ್ ಹೆಬ್ಬಾರ್, ಸಂದೀಪ್ ಸನಿಲ್, ಸಂಧ್ಯಾ ರಮೇಶ್, ಸಂಧ್ಯಾ ಪ್ರಭು, ಸಂತೋಷ ಕಿಣಿ, ಮುರಳೀಧರ್ ರಾವ್ ಗುಂಡಿಬೈಲು ಹಾಗೂ ಫಲಾನುಭವಿ ಮಾಲಾಶ್ರೀ ಭಟ್ ಪಾಡಿಗಾರು ಉಪಸ್ಥಿತರಿದ್ದರು. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ ನಿರೂಪಿಸಿದರು.