Advertisement
ಶ್ರೀಕೃಷ್ಣ ಮಠದ ರಥಿಬೀದಿ ಸುತ್ತ ಮುತ್ತಲಿನ ಪರಿಸರವಲ್ಲದೆ ನಗರದ ಬಹುತೇಕ ಪ್ರಮುಖ ಸ್ಥಳಗಳು ಹಾಗೂ ಉಡುಪಿ ನಗರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳೆಲ್ಲ ವಿದ್ಯುತ್ ದೀಪಗಳಿಂದ ಅಲಂಕೃತವಾಗಿವೆ. ಬುಧವಾರ ಮಧ್ಯರಾತ್ರಿಯ ಬಳಿಕ ಕಾಪುವಿನ ದಂಡತೀರ್ಥದಲ್ಲಿ ಮಿಂದು ಬರುವ ಶ್ರೀಗಳ ಸ್ವಾಗತಕ್ಕೆ ದಂಡತೀರ್ಥ ಮಠದಿಂದ ಉಡುಪಿ ವರೆಗೆ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ವಿದ್ಯುದ್ದೀಪಗಳ ಅಲಂಕಾರವನ್ನು ಅಳವಡಿಸಲಾಗಿದೆ. ಇದು ಈ ಬಾರಿಯ ವಿಶೇಷ.
Related Articles
Advertisement
ವೈಭವದ ಮೆರವಣಿಗೆಪ್ರತೀ ಬಾರಿ ಪರ್ಯಾಯ ಉತ್ಸವ ದಲ್ಲಿ ಸ್ವಾಮೀಜಿಗಳ ಮೆರವಣಿಗೆ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಆ ಮೆರವಣಿಗೆಯ ವೈಭವವನ್ನು ಸವಿಯಲು ಸಾವಿರಾರು ಮಂದಿ ಅದು ಹಾದು ಹೋಗುವ ದಾರಿಯ ಇಕ್ಕೆಲಗಳಲ್ಲಿ ಸೇರುತ್ತಾರೆ. ಈ ಬಾರಿಯೂ ವೈಭವದ ಮೆರವಣಿಗೆಗೆ ನಗರ ಸಿದ್ಧವಾಗಿದೆ. ಹುಲಿವೇಷದಿಂದ ಹಿಡಿದು ರಾಜ್ಯದ ವಿವಿಧ ಜನಪದ ಕಲಾ ತಂಡಗಳು, ಭಜನಾ ತಂಡಗಳು, ಕಂಬಳದ ಕೋಣ, ಪರಶುರಾಮ, ಅಯೋಧ್ಯಾ ರಾಮಮಂದಿರದಂತಹ ಸ್ತಬ್ಧಚಿತ್ರಗಳು ಮೆರವಣಿಗೆಯ ರಂಗನ್ನು ಹೆಚ್ಚಿಸಲಿವೆ.
ಉತ್ಸವದಲ್ಲಿ ಪಾಲ್ಗೊಳ್ಳುವ ಒಂದು ಲಕ್ಷ ಮಂದಿ ಭಕ್ತಗಳಿಗೆ ಗುರುವಾರ ಮಧ್ಯಾಹ್ನ ಭೋಜನ ವ್ಯವಸ್ಥೆ ಕಲ್ಪಿಸಲಾಗಿದೆ. ಅನ್ನ, ಸಾರು, ಮಟ್ಟು ಗುಳ್ಳದ ಸಾಂಬಾರು, ಸುವರ್ಣಗಡ್ಡೆ ಪಲ್ಯ, ಪಾಯಸ, ಹಯಗ್ರೀವ ಮಡ್ಡಿ, ಮೈಸೂರು ಪಾಕ್, ಕಡಿ, ಜಿಲೇಬಿ, ಸಾಟು, ಮೋಹನಲಾಡು ಇರಲಿದೆ. ವಿದೇಶಗಳಿಂದ ಈಗಾಗಲೇ ಕೆಲವು ಅತಿಥಿಗಳು ಆಗಮಿಸಿದ್ದು, ಸುಮಾರು 300 ಮಂದಿ ವಿದೇಶಿಗರು ಪಾಲ್ಗೊಳ್ಳುವ ಸಂಭವವಿದೆ. ಗುರು ವಾರ ಬೆಳಗ್ಗೆ ಮತ್ತು ಸಂಜೆಯ ದರ್ಬಾರ್‌ನಲ್ಲಿ ದರ್ಬಾರ್ ಸಮ್ಮಾನವಲ್ಲದೆ ಕೃಷ್ಣಾನುಗ್ರಹ ಪ್ರಶಸ್ತಿ ಸಹಿತ ಸುಮಾರು 20 ಮಂದಿ ಗಣ್ಯರನ್ನು ಗೌರವಿಸಲಾಗುತ್ತದೆ. ಪರ್ಯಾಯದಲ್ಲಿ ಏನೇನು?
ಜ. 17ರ ಮಧ್ಯರಾತ್ರಿ ಬಳಿಕ 1.30ಕ್ಕೆ ದಂಡತೀರ್ಥ ಮಠದಲ್ಲಿ ತೀರ್ಥಸ್ನಾನ ಮಾಡಿ ಪರ್ಯಾಯ ಶ್ರೀಗಳು ಜ. 18 ರ ಪ್ರಾತಃಕಾಲ 2 ಗಂಟೆಗೆ ಉಡುಪಿ ಜೋಡುಕಟ್ಟೆಗೆ ಆಗಮಿಸುವರು. ಮಠದ ಪಟ್ಟದ ದೇವರನ್ನು ಚಿನ್ನದ ಪಲ್ಲಕ್ಕಿಯಲ್ಲಿ ಇರಿಸಿಕೊಂಡು ಅದರ ಹಿಂದೆ ಪುಷ್ಪಾಲಂಕೃತ ಮೆರವಣಿಗೆಯಲ್ಲಿ ಪೇಟವನ್ನು ಧರಿಸಿ ಪರ್ಯಾಯ ಪೀಠಾರೂಢರಾಗುವ ಸ್ವಾಮೀಜಿಯವರು ರಥಬೀದಿಯತ್ತ ತೆರಳುವರು. ಮುಂಜಾವ 4.30ಕ್ಕೆ ರಥಬೀದಿಯ ಪ್ರವೇಶದಲ್ಲಿಯೇ ವಾಹನದಿಂದ ಇಳಿದು ಕನಕನ ಕಿಂಡಿಯ ಮೂಲಕ ದೇವರ ದರ್ಶನ ಪಡೆದು ನವಗ್ರಹದಾನ ಪ್ರದಾನ ಮಾಡುವರು. ಅಲ್ಲಿಂದ ಶ್ರೀಚಂದ್ರಮೌಳೀಶ್ವರ, ಶ್ರೀಅನಂತೇಶ್ವರ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಮಾಡಿ ಶ್ರೀಕೃಷ್ಣಮಠವನ್ನು ಪ್ರವೇಶಿಸುವರು. ಮಧ್ವಸರೋವರದಲ್ಲಿ ಪಾದ ಪ್ರಕ್ಷಾಳನ ಮಾಡಿ ಶ್ರೀಕೃಷ್ಣ, ಮುಖ್ಯಪ್ರಾಣ, ಮಧ್ವಾಚಾರ್ಯರ ದರ್ಶನ ಮಾಡುವರು. 5.50ಕ್ಕೆ ಮಧ್ವಾಚಾರ್ಯರ ಕಾಲದಿಂದ ಬಂದ ಅಕ್ಷಯಪಾತ್ರೆಯನ್ನು ಸ್ವೀಕರಿಸಿ ಸರ್ವಜ್ಞ ಪೀಠಾರೋಹಣ ಮಾಡುವರು. ಬಡಗುಮಾಳಿಗೆಯಲ್ಲಿ ಬೆಳಗ್ಗೆ 6 ಗಂಟೆಗೆ ಗಂಧದ್ಯುಪಚಾರ, 6.30ಕ್ಕೆ ರಾಜಾಂಗಣದಲ್ಲಿ ನಡೆಯುವ ಪರ್ಯಾಯ ದರ್ಬಾರ್ ಸಭೆಯಲ್ಲಿ ಪಾಲ್ಗೊಂಡು ಅನುಗ್ರಹ ಸಂದೇಶ ನೀಡುವರು. 10.30ಕ್ಕೆ ಚತುರ್ಥ ಪರ್ಯಾಯದ ಪ್ರಥಮ ಮಹಾಪೂಜೆಯನ್ನು ಸ್ವಾಮೀಜಿ ನೆರವೇರಿಸಲಿದ್ದಾರೆ. ಮಧ್ಯಾಹ್ನ ಅನ್ನಸಂತರ್ಪಣೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಸಂಜೆಯ ದರ್ಬಾರ್ ಸಭೆ 4.30ಕ್ಕೆ ನಡೆಯಲಿದೆ. ರಾತ್ರಿ ಬ್ರಹ್ಮರಥೋತ್ಸವ, ಜ. 19ರಂದು ಸೌರ ಮಧ್ವನವಮಿ ಆಚರಣೆ ನಡೆಯಲಿದೆ. ಜ. 18ರಿಂದ 24ರ ವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವದ ಸಂಭ್ರಮವನ್ನು ಹೆಚ್ಚಿಸಲಿವೆ. ಕಿನ್ನಿಮೂಲ್ಕಿಯಿಂದಲೇ ಪರ್ಯಾಯ ಮೆರವಣಿಗೆ
ಇದೇ ಮೊದಲ ಬಾರಿಗೆ ಪರ್ಯಾಯ ಮೆರ ವಣಿಗೆಯು ಜೋಡುಕಟ್ಟೆ ಬದಲಾಗಿ ಕಿನ್ನಿಮೂಲ್ಕಿ ಸ್ವಾಗತ ಗೋಪುರದಿಂದ ಹೊರಡಲಿದೆ. ಬುಧವಾರ (ಜ. 17) ಮಧ್ಯರಾತ್ರಿ ಬಳಿಕ 2 ಗಂಟೆಗೆ ಪರ್ಯಾಯ ಮೆರವಣಿಗೆಗೆ ಪುತ್ತಿಗೆ ಶ್ರೀಪಾದರು ಕಿನ್ನಿಮೂಲ್ಕಿ ಸ್ವಾಗತ ಗೋಪುರದ ಬಳಿ ಚಾಲನೆ ನೀಡುವರು. ಅಲ್ಲಿಂದ ಶ್ರೀಪಾದರು ಜೋಡುಕಟ್ಟೆಗೆ ಆಗಮಿಸುವರು. ಪಟ್ಟದ ದೇವರು, ಶ್ರೀಪಾದರ ಮೆರವಣಿಗೆಯು ಸಂಪ್ರದಾಯ ದಂತೆ ಜೋಡುಕಟ್ಟೆಯಿಂದಲೇ ಆರಂಭ ವಾಗಲಿದೆ. ಕಿನ್ನಿಮೂಲ್ಕಿಯಿಂದ ಪರ್ಯಾಯ ಮೆರವಣಿಗೆ ಆರಂಭ ಇದೇ ಮೊದಲು. ಪುತ್ತಿಗೆ ಶ್ರೀಪಾದರು ತಮ್ಮ 2ನೇ ಪರ್ಯಾಯದಲ್ಲಿ ಗುರುಗಳಾದ ಶ್ರೀ ಸುಧೀಂದ್ರತೀರ್ಥ ಶ್ರೀಪಾದರ ಸ್ಮರಣಾರ್ಥ ಕಿನ್ನಿ ಮೂಲ್ಕಿಯಲ್ಲಿ ಸ್ವಾಗತಗೋಪುರ ನಿರ್ಮಿ ಸಿದ್ದರು. ಈ ಬಾರಿ ಪರ್ಯಾಯದಲ್ಲಿ ಭಗವದ್ಗೀತೆ ಮತ್ತು ರಾಮಾಯಣಕ್ಕೆ ಸಂಬಂಧಿಸಿದ ಸ್ತಬ್ಧಚಿತ್ರಗಳು ಹೆಚ್ಚಿರು ವುದ ರಿಂದ ಮೆರವಣಿಗೆಯ ಸವಿ ಯನ್ನು ನೆರೆದ ಭಕ್ತರಿಗೆ ಕಣ್ತುಂಬಿ ಕೊಳ್ಳಲು ಅನುಕೂಲ ವಾಗುವಂತೆ ಈ ಮಾರ್ಪಾಡು ಮಾಡಲಾಗಿದೆ ಎಂದು ಸ್ವಾಗತ ಸಮಿತಿ ತಿಳಿಸಿದೆ.