ಅಹಂಕಾರಜನ್ಯ ಸುಖವಾಗಲೀ, ದುಃಖವಾಗಲೀ ಶಾಶ್ವತವಲ್ಲ. ನಶ್ವರವಾದ ವಿಚಾರಕ್ಕೆ ದುಃಖಪಡಬೇಕಾದ ಅಗತ್ಯವಿಲ್ಲ. ಕೋಟಿಗಟ್ಟಲೆ ರೂ. ಬಂದಾಗ ಶಾಶ್ವತ ಎಂದು ತಿಳಿದುಕೊಂಡು ಖುಷಿಪಡುತ್ತೇವೆ.
ಎಲ್ಲ ದುಃಖಕ್ಕೆ ಕಾರಣ ನಮ್ಮದೇ ಚಿಂತನೆಯ ಕಾಲಘಟ್ಟಕ್ಕೆ ಹೋಲಿಸಿ ನೋಡುವುದು. ಜಗತ್ತಿನ ಯಾವುದೇ ವಿಚಾರ ಬಹಳ ಗಂಭೀರ ಅಲ್ಲ. ಅಣುಬಾಂಬು ಹಾಕಿದ ದಿನ ಎಲ್ಲ ಮುಗಿಯಿತು ಎಂದು ತಿಳಿದಿದ್ದೆವು. ಕಾಲ ಬದಲಾದಾಗ ಜಗತ್ತು ತನ್ನದೇ ಆದ ಕ್ರಮದಲ್ಲಿ ಹೋಗುತ್ತಿದೆ. ಇತ್ತೀಚಿನ ಉದಾಹರಣೆ ಅಂದರೆ ಕೊರೊನಾ ಕಾಲಘಟ್ಟ. ಈಗ ಕೊರೊನಾದಿಂದ ಪಟ್ಟ ನೋವು ನೆನಪಿದೆಯೆ? ಆದರೆ ಆಗ ಅದುವೇ ದೊಡ್ಡ ಸಮಸ್ಯೆ. ತುರ್ತು ಪರಿಸ್ಥಿತಿ ಕಾಲದಲ್ಲಿ ಇಡೀ ದೇಶದಲ್ಲಿ ಅದರದ್ದೇ ಮಾತು ಕೇಳಿಬರುತ್ತಿತ್ತು.
ಅನಂತರ ಎಷ್ಟೆಲ್ಲ ರಾಜಕೀಯ ಏರುಪೇರುಗಳನ್ನು ದೇಶ ಕಂಡಿತು? ಕಡಿಮೆ ಕಾಲದಲ್ಲಿ ಚಿಂತನೆ ಮಾಡಿದ್ದರಿಂದ ನಮಗೆ ಆ ಕಾಲಘಟ್ಟದಲ್ಲಿ ದುಃಖವಾಗುತ್ತದೆ. ದೊಡ್ಡ ಕಾಲದಲ್ಲಿ ನಿಂತು ನೋಡಿದರೆ ಯಾವುದೂ ದೊಡ್ಡದಾಗಿ ಕಾಣದು. ಕಡಿಮೆ ಕಾಲದ ಪರಿಧಿಯಿಂದ ದೊಡ್ಡ ಕಾಲದ ಪರಿಧಿಗೆ ನಾವು ಚಿಂತನೆ ನಡೆಸಬೇಕು. ನಾವು ಒಂದು ಮನೆಯನ್ನೇ ಸರ್ವಸ್ವ ಎಂದು ತಿಳಿಯುತ್ತೇವೆ. ನಾವೇ ಇಲ್ಲವೆಂದಾದಾಗ ಎಲ್ಲವೂ ಶೂನ್ಯವಾಗಿ ಕಾಣುತ್ತದೆ. ವಿಸ್ತೃತ ಕಾಲದಲ್ಲಿ ಯೋಚನೆ ಮಾಡು ಎನ್ನುತ್ತಾನೆ ಕೃಷ್ಣ. ಮನಸ್ಸಿನ ವಿವಿಧ ಪದರಗಳಲ್ಲಿ ಶ್ರೇಷ್ಠವೆನಿಸಿದ ಬುದ್ಧಿಗೆ ಆದ್ಯತೆ ಕೊಟ್ಟು ನೋಡಬೇಕು.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811