Advertisement

Kaup town: ಟ್ರಾಫಿಕ್‌ ಒತ್ತಡ, ಪಾರ್ಕಿಂಗ್‌ ಕಿರಿಕಿರಿ

02:19 PM Dec 20, 2024 | Team Udayavani |

ಕಾಪು: ಪುರಸಭೆಯಾಗಿ, ತಾಲೂಕು ಕೇಂದ್ರವಾಗಿ ಮೇಲ್ದರ್ಜೆಗೇರಿರುವ ಕಾಪು ವೇಗವಾಗಿ ಬೆಳೆಯುತ್ತಿದೆ. ಅದೇ ಹೊತ್ತಿಗೆ ಪೇಟೆಯಲ್ಲಿ ಟ್ರಾಫಿಕ್‌ ಜಾಮ್‌ ಮತ್ತು ಪಾರ್ಕಿಂಗ್‌ನ ಸಮಸ್ಯೆಯೂ ಉಲ್ಬಣಿಸುತ್ತಿದೆ.

Advertisement

ಕಾಪು ಪಡು, ಮಲ್ಲಾರು, ಉಳಿಯಾರಗೋಳಿ, ಮಜೂರು, ಮೂಳೂರು, ಉಚ್ಚಿಲ, ಬೆಳಪು, ಇನ್ನಂಜೆ, ಪಾಂಗಾಳ ಸಹಿತ ಸುತ್ತಲಿನ ಹತ್ತೂರಿಗೆ ಕಾಪು ಕೇಂದ್ರ ಸ್ಥಾನವಾಗಿದೆ. ಕಾಪು ಪೇಟೆಗೆ ಪ್ರತಿ ನಿತ್ಯ ಸಾವಿರಾರು ಮಂದಿ ಆಗಮಿಸುತ್ತಿರುತ್ತಾರೆ. ರಾಷ್ಟ್ರೀಯ ಹೆದ್ದಾರಿ 66ರ ಮಾತ್ರವಲ್ಲದೇ ಕಾಪು ಪೇಟೆಯ ಮೂಲಕವೂ ಸಾವಿರಾರು ವಾಹನಗಳು ಸಂಚರಿಸುತ್ತಿರುತ್ತವೆ. ವಿಪರೀತವಾದ ವಾಹನ ದಟ್ಟಣೆಯಿಂದ ಪೇಟೆಯಲ್ಲಿ ಆಗಾಗ ಟ್ರಾಫಿಕ್‌ ಜಾಮ್‌ ಉಂಟಾಗಿ ಜನ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಕಾಪು ಪೇಟೆಯ ಮೂಲಕವಾಗಿ ಹಾದು ಹೋಗುವ ಹಳೇ ಎಂ.ಬಿ.ಸಿ ರಸ್ತೆಯ ಇಕ್ಕೆಲಗಳಲ್ಲಿ ಕಾಪು ಪೊಲೀಸ್‌ ವೃತ್ತ ನಿರೀಕ್ಷಕರ ಕಚೇರಿ, ಕಾಪು ಪೊಲೀಸ್‌ ಠಾಣೆ, ಸರ್ವೀಸ್‌ ಬಸ್‌ ನಿಲ್ದಾಣ, ಮೂರನೇ ಮಾರಿಗುಡಿ, ವೀರಭದ್ರ ದೇವಸ್ಥಾನ, ಹೊಟೇಲ್‌ ಮತ್ತು ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳು, ರಿಕ್ಷಾ, ಟೆಂಪೋ, ಕಾರು ತಂಗುದಾಣಗಳು, ನೂರಾರು ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಸಂಕೀರ್ಣಗಳು, ರಾಷ್ಟ್ರೀಕೃತ, ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕ್‌ಗಳು, ಬಿಲ್ಲವ ಸಂಘ,ಕಾಪು ಮಾರುಕಟ್ಟೆ ಸಹಿತ ಹಲವಾರು ಕಟ್ಟಡಗಳಿವೆ.

ಸಮಸ್ಯೆಗೆ ಹತ್ತಾರು ಕಾರಣಗಳು
750-800 ಮೀಟರ್‌ ವ್ಯಾಪ್ತಿಯೊಳಗೆ ಹರಡಿರುವ ಪುಟ್ಟ ಪೇಟೆಯ ಒಳಗೇ ನೂರಾರು ಅಂಗಡಿಗಳು, ಜವುಳಿ ಮಳಿಗೆಗಳು, ಹೊಟೇಲ್‌ಗ‌ಳಿವೆ. ಪೇಟೆಗೆ ಬರುವವರು ರಿಕ್ಷಾ, ಕಾರುಗಳಲ್ಲೇ ಬರುತ್ತಾರೆ, ಹತ್ತಾರು ಸಂಖ್ಯೆಯಲ್ಲಿ ಟೆಂಪೋಗಳು ಬರುತ್ತವೆ.

ಪೇಟೆಯ ಮೂಲಕವಾಗಿ ಸಾಗುವ ವಾಹನ ಸವಾರರು ಮತ್ತು ಪೇಟೆಯಲ್ಲಿ ವ್ಯವಹಾರಕ್ಕೆ ಬರುವ ಗ್ರಾಹಕರು ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಹೋಗುತ್ತಾರೆ.

Advertisement

ಕಾಪು ಪೇಟೆಯಲ್ಲಿ ಅಲ್ಲಲ್ಲಿ ಕೆಲವು ಅಂಗಡಿಗಳು, ಮಳಿಗೆಗಳ ಮಾಲಕರು ತಮ್ಮ ಅಂಗಡಿಗಳ ಮುಂದೆ ವಾಹನ ನಿಲುಗಡೆಗೆ ಅವಕಾಶವಿಲ್ಲ ಎಂಬ ಫಲಕಗಳನ್ನು ಹಾಕುವುದರಿಂದ ಜನ ರಸ್ತೆಯಲ್ಲೇ ವಾಹನ ನಿಲ್ಲಿಸಿ ಹೋಗುತ್ತಾರೆ.

ಯಶಸ್ಸು ಕಾಣದ ಪ್ರಯತ್ನಗಳು
ಪೇಟೆಯ ಟ್ರಾಫಿಕ್‌ ಮತ್ತು ಪಾರ್ಕಿಂಗ್‌ ಸಮಸ್ಯೆ ಬಗೆಹರಿಸಲು ಹಲವು ವರ್ಷಗಳಿಂದಲೂ ಪ್ರಯತ್ನ ಜಾರಿಯಲ್ಲಿದೆ. ಈ ಹಿಂದೆ ಕಾರ್ಕಳ ಎಎಸ್‌ಪಿಯಾಗಿದ್ದಾಗ ಕೆ. ಅಣ್ಣಾಮಲೈ ಅವರು ಏಕಮುಖ ಸಂಚಾರ, ರಸ್ತೆ ಪಕ್ಕದಲ್ಲಿ ಆವರ್ತನಾ ಪದ್ಧತಿಯಂತೆ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಿಕೊಡುವುದು, ಪೇಟೆಗೆ ಪ್ರವೇಶಿಸಿಲು ಮತ್ತು ನಿರ್ಗಮಿಸಲು ಪ್ರತ್ಯೇಕ ರಸ್ತೆಗಳ ಬಳಕೆ ಸಹಿತವಾದ ಹಲವು ಪರಿಹಾರ ಸೂತ್ರಗಳನ್ನು ಹುಡುಕಿದ್ದರು. ಆದರೆ ಅವರ ನಿರ್ಗಮನದ ಬಳಿಕ ಅದು ನಿಂತು ಹೋಗಿತ್ತು!

ಮುಂದೆ ಕಾಪು ಪೊಲೀಸ್‌ ಠಾಣೆಗೆ ಎಸ್ಸೈಗಳಾಗಿ ಬಂದ ಒಂದಿಬ್ಬರು ಅಧಿಕಾರಿಗಳು ಮತ್ತೆ ಟ್ರಾಫಿಕ್‌ ಸಮಸ್ಯೆಗೆ ಪರಿಹಾರ ಕಂಡು ಹುಡುಕುವ ಪ್ರಯತ್ನ ನಡೆಸಿದ್ದರಾದರೂ ಪೂರಕ ಸಹಕಾರ ಸಿಗಲಿಲ್ಲ. ಸಂಚಾರದ ಒತ್ತಡ ಮತ್ತು ಪಾರ್ಕಿಂಗ್‌ ಸಮಸ್ಯೆ ಬಗೆಹರಿಸಲು ಕಾಪು ಅಭಿವೃದ್ಧಿ ಸಮಿತಿ ಕೂಡ ಪ್ರಯತ್ನ ನಡೆಸಿತ್ತು. ಪಾರ್ಕಿಂಗ್‌ ಕುರಿತಾಗಿ ನೀಲ ನಕಾಶೆಯನ್ನು ಸಿದ್ಧಪಡಿಸಿ ಪುರಸಭೆ, ಪೊಲೀಸ್‌ ಇಲಾಖೆ, ಆರ್‌ಟಿಒ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಹಸ್ತಾಂತರಿಸಲಾಗಿತ್ತು. ಕೊನೇ ಕ್ಷಣದಲ್ಲಿ ಯಾವುದೋ ಕಾರಣಕ್ಕೆ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ.

ಈ ಬಾರಿಯಾದರೂ ಬಗೆಹರಿದೀತೇ?
ಕಾಪು ಅಭಿವೃದ್ಧಿ ಸಮಿತಿಯು ಟ್ರಾಫಿಕ್‌ ನಿರ್ವಹಣೆ ಮತ್ತು ಪಾರ್ಕಿಂಗ್‌ ಸಮಸ್ಯೆಗೆ ಸಂಬಂಧಿಸಿ ಎಂಜಿನಿಯರ್‌ ತ್ರಿವಿಕ್ರಮ್‌ ಭಟ್‌ ಅವರ ಮೂಲಕವಾಗಿ ನೀಲ ನಕಾಶೆ ತಯಾರಿಸಿ ಇಲಾಖೆಗೆ ನೀಡಿದೆ. ಸಂಬಂಧಪಟ್ಟ ಇಲಾಖೆಗಳಿಂದ ಪೂರಕ ಸ್ಪಂದನೆ ದೊರಕಿದೆ. ಪೊಲೀಸ್‌ ಇಲಾಖೆ, ಲೋಕೋಪಯೋಗಿ ಇಲಾಖೆ ಮತ್ತು ಪುರಸಭೆ ಮೌಖೀಕ ಒಪ್ಪಿಗೆ ಸೂಚಿಸಿದೆ. ಜನಪ್ರತಿನಿಧಿಗಳು ಕೂಡ ಬೆಂಬಲಿಸಿದ್ದಾರೆ. ಎಲ್ಲರ ಬೆಂಬಲ ಪಡೆದು ಪಾರ್ಕಿಂಗ್‌ ಸಮಸ್ಯೆ ನಿವಾರಣೆಗೆ ವಿವಿಧ ವ್ಯವಸ್ಥೆಗಳನ್ನು ಜೋಡಿಸಲು ಕಾಪು ಅಭಿವೃದ್ಧಿ ಸಮಿತಿ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.

ಪಂಚ ದಾರಿಗಳಲ್ಲೂ ಪಾರ್ಕಿಂಗ್‌!
ರಾಷ್ಟ್ರೀಯ ಹೆದ್ದಾರಿ 66ರಿಂದ ಕಾಪು ಪೇಟೆಗೆ ಬರಲು ಐದು ದಾರಿಗಳಿವೆ. ರಾ.ಹೆ. 66ರ ಕೆ 1 ಹೊಟೇಲ್‌ ಜಂಕ್ಷನ್‌, ಕಾಪು ಬಸದಿ ಬಳಿಯಲ್ಲಿರುವ ಜನಾರ್ದನ ದೇವಸ್ಥಾನ ದ್ವಾರ, ಕಾಪು ಮಾರಿಗುಡಿ ರಸ್ತೆ, ಮಯೂರ ಹೊಟೇಲ್‌ ರಸ್ತೆ ಮತ್ತು ಪೊಲಿಪು ಮಸೀದಿ ಜಂಕ್ಷನ್‌ ಮೂಲಕವಾಗಿ ವಾಹನಗಳು ಕಾಪು ಪೇಟೆಗೆ ಪ್ರವೇಶಿಸಬಹುದಾಗಿದೆ. ಆದರೆ ಇದರಲ್ಲಿ ಯಾವ ದಾರಿಗಳೂ ವಾಹನಗಳ ಪೇಟೆ ಪ್ರವೇಶಕ್ಕೆ ಮುಕ್ತವಾಗಿಲ್ಲ. ಎಲ್ಲ ಕಡೆ ರಸ್ತೆಯ ಇಕ್ಕೆಲಗಳು ಅಂಗಡಿಗಳವರು ಮತ್ತು ಅಲ್ಲಿಗೆ ಬರುವ ಗ್ರಾಹಕರ ವಾಹನಗಳ ಪಾರ್ಕಿಂಗ್‌ ಸ್ಥಳಗಳಾಗಿವೆ.

ಜತೆಗೂಡಿ ಕೆಲಸ ಮಾಡಿದರೆ ಸುಲಭ
ಅಭಿವೃದ್ಧಿ ಸಮಿತಿ ಮೂಲಕ ನಡೆಸಿದ ಸರ್ವೆ ವರದಿಯನ್ನು ಪುರಸಭೆ, ಪೊಲೀಸ್‌, ಲೋಕೋಪಯೋಗಿ ಇಲಾಖೆಗೆ ಸಲ್ಲಿಸಲಾಗಿದೆ. ನೀರಿನ ಪೈಪ್‌ಲೈನ್‌, ವಿದ್ಯುತ್‌ ಲೈನ್‌, ಚರಂಡಿ, ಸೂಚನಾ ಫಲಕಗಳಿಗೆ, ರಸ್ತೆ ಮತ್ತು ರಸ್ತೆಯ ಭುಜಗಳಿಗೆ ಹಾಗೂ ಸಾರ್ವಜನಿಕ ಸ್ವತ್ತುಗಳಿಗೆ ಹಾನಿಯಾಗದಂತೆ, ರಸ್ತೆ ಸಂಚಾರಕ್ಕೆ ಅವಕಾಶ ಕೊಡಬೇಕು, ಪಾರ್ಕಿಂಗ್‌ ವ್ಯವಸ್ಥೆಯೂ ಬೇಕು ಎಂದು ಸಲಹೆ ನೀಡಿದೆ. ಎಲ್ಲರೂ ಜತೆಗೂಡಿ ಕೆಲಸ ಮಾಡಬೇಕಾಗಿದೆ.
– ದೇವಿಪ್ರಸಾದ್‌ ಶೆಟ್ಟಿ, ಅಧ್ಯಕ್ಷರು, ಕಾಪು ಅಭಿವೃದ್ಧಿ ಸಮಿತಿ

ಎಲ್ಲರ ಸಹಕಾರ ಅಗತ್ಯ
ಕಾಪು ಹೊಸ ಮಾರಿಗುಡಿಯ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಹೀಗಾಗಿ ಟ್ರಾಫಿಕ್‌ ಒತ್ತಡ ಮತ್ತು ಪಾರ್ಕಿಂಗ್‌ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಬೇಕು. ಕಾಪು ಪುರಸಭೆ, ಪೊಲೀಸ್‌ ಇಲಾಖೆ ನಡೆಸುವ ಪ್ರಯತ್ನಕ್ಕೆ ಕಾಪು ಪೇಟೆಯ ನಾಗಕರಿಕರು, ವ್ಯಾಪಾರಸ್ಥರು ಮತ್ತು ಪೇಟೆಗೆ ಬರುವ ಗ್ರಾಹಕರಿಂದಲೂ ಸಹಕಾರ, ಸ್ಪಂದನೆ ದೊರಕಬೇಕಿದೆ.
-ಸುರೇಶ್‌ ಶೆಟ್ಟಿ, ಗುರ್ಮೆ ಶಾಸಕರು, ಕಾಪು

-ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next