Advertisement
ಉಭಯ ಜಿಲ್ಲೆಯಲ್ಲೂ ಕಳೆದ ವರ್ಷ ಪೂರ್ಣ ಗುರಿ ಸಾಧಿಸಲು ಸಾಧ್ಯವಾಗಿಲ್ಲ. ಹೀಗಾಗಿ ಈ ವರ್ಷ ಒಂದು ಜಿಲ್ಲೆ ನಿರ್ದಿಷ್ಟ ಗುರಿಯನ್ನೇ ಕಡಿಮೆ ಮಾಡಿಕೊಂಡರೆ ಇನ್ನೊಂದು ಜಿಲ್ಲೆ ಯಥಾಸ್ಥಿತಿ ಕಾಪಾಡುವ ಪ್ರಯತ್ನ ನಡೆಸಿದೆ.
Related Articles
Advertisement
ಕಳೆದ ವರ್ಷ ಬೈಂದೂರು ತಾಲೂಕಿನಲ್ಲಿ ಶೇ.102.16, ಕಡಬದಲ್ಲಿ ಶೇ.103.74ರಷ್ಟು ಗುರಿ ಸಾಧಿಸಲಾಗಿತ್ತು. ನಿರ್ದಿಷ್ಟ ಗುರಿಗಿಂತ ಅಧಿಕ ಮಾನವ ದಿನ ಸೃಜಿಸಲಾಗಿದೆ. ಪುತ್ತೂರಿನಲ್ಲಿ ಶೇ.99.27 ಹಾಗೂ ಸುಳ್ಯದಲ್ಲಿ ಶೇ.97ರಷ್ಟು ಗುರಿ ಸಾಧನೆಯಾಗಿತ್ತು.
ಗುರಿ ಸಾಧನೆ ಕಷ್ಟ ಯಾಕೆ?
ನರೇಗಾದಡಿ ವೈಯಕ್ತಿಕ ಕಾಮಗಾರಿ ಮಿತಿಯಿದೆ. 1.20 ಲಕ್ಷಕ್ಕಿಂತ ಅಧಿಕ ರೂ.ಗಳ ಕಾಮಗಾರಿ ನೀಡುವುದಿಲ್ಲ. ಹೀಗಾಗಿ ನಿರ್ದಿಷ್ಟ ಮೊತ್ತ ಮುಗಿದ ಬಳಿಕ ವೈಯಕ್ತಿಕ ಕಾಮಗಾರಿ ಪಡೆಯಲು ಸಾಧ್ಯವಾಗುವುದಿಲ್ಲ. ಉಭಯ ಜಿಲ್ಲೆಯಲ್ಲಿ ಬಹುತೇಕರು ಬೇರೆ ಕಡೆಗಳಿಗೆ ಕೂಲಿ ಮಾಡಲು ಹೋಗಲು ಬಯಸುವುದಿಲ್ಲ. ಹೀಗಾಗಿ ಗುರಿ ಸಾಧನೆ ಕಠಿನವಾಗುತ್ತಿದೆ.
ಕೆಲವು ಕಾಮಗಾರಿಗಳು ನರೇಗಾದಡಿಯಲ್ಲೇ ನಡೆದು ಶೇ. 40ರಷ್ಟು ಯಂತ್ರೋಪಕರಣ ಬಳಸಿದರೂ ಅದಕ್ಕೆ ಪೂರಕವಾಗಿ ಬಿಲ್ ಪಾವತಿ ತತ್‌ಕ್ಷಣ ಆಗುವುದಿಲ್ಲ. ಕೂಲಿ ಕಾರ್ಮಿಕರಿಗೆ ನೇರವಾಗಿ ಅವರ ಖಾತೆಗೆ ಹಣ ಜಮೆ ಆಗಲಿದೆ. ಆದರೆ ಯಂತ್ರಗಳನ್ನು ಬಳಸಬಾರದು ಎಂಬ ತಾಂತ್ರಿಕ ಕಾರಣದಿಂದ ಗುತ್ತಿಗೆದಾರರಿಗೆ ಬಿಲ್ ಪಾವತಿ ಆಗುವುದಿಲ್ಲ. ಹೀಗಾಗಿ ಅನೇಕರು ನರೇಗಾದಡಿ ವರ್ಕ್‌ಲೋಡ್ ಪಡೆಯಲು ಮುಂದಾಗದಿರುವುದು ಗುರಿ ಸಾಧಿಸಲು ತೊಡಕಾಗುತ್ತಿದೆ.
ವೈಯಕ್ತಿಕ ಕಾಮಗಾರಿ
ಬಿಪಿಎಲ್ ಕಾರ್ಡ್‌ದಾರರು ಗ್ರಾ.ಪಂ. ನಿಂದ ನೀಡುವ ಉದ್ಯೋಗ ಚೀಟಿ ಹೊಂದಿದ್ದಲ್ಲಿ ನರೇಗಾದಡಿ ವೈಯಕ್ತಿಕ ಕಾಮಗಾರಿ ನಡೆಸಲು ಅವಕಾಶವಿದೆ. ಆದರೆ ಕಾಮಗಾರಿ ವೇಳೆಯಲ್ಲಿ ಯಂತ್ರೋಪಕರಣಗಳನ್ನು ಬಳಸುವಂತಿಲ್ಲ. ಯಂತ್ರೋಪಕರಣ ಬಳಸಿದರೆ ಅನುದಾನ ತಡೆ ಹಿಡಿಯಲಾಗುತ್ತದೆ.
ಏನೇನು ಕಾರ್ಯ?
ನರೇಗಾದಡಿ ಮನೆಯ ಆವರಣದ ಖಾಲಿ ಜಾಗದಲ್ಲಿ ಪೌಷ್ಟಿಕ ತೋಟ ನಿರ್ಮಾಣ ಮಾಡಿಕೊಳ್ಳಲು ಅವಕಾಶವಿದೆ. ಜತೆಗೆ ಜಮೀನಿನಲ್ಲಿ ನಿರ್ದಿಷ್ಟ ಬಗೆಯ ತೋಟಗಾರಿಕೆ ಬೆಳೆ ಬೆಳೆಯಲು ಅವಕಾಶವಿದೆ. ಮನೆಯ ಶೌಚಗುಂಡಿ, ತೆರೆದ ಬಾವಿ, ಕೋಳಿ ಶೆಡ್ ಹೀಗೆ ಹಲವಾರು ಕಾಮಗಾರಿಗಳನ್ನು ಮಾಡಿಕೊಳ್ಳಬಹುದು. ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಿ, ಒಪ್ಪಿಗೆ ಪಡೆದು ಕಾಮಗಾರಿ ಆರಂಭಿಸಬಹುದಾಗಿದೆ.
ಕೂಲಿ ಪಾವತಿ ಹೇಗೆ?
ಈ ಹಿಂದೆ ನೆರೇಗಾದಡಿ 289 ರೂ.ಗಳ ದಿನಗೂಲಿ ನೀಡಲಾಗುತಿತ್ತು. 2024ರ ಎಪ್ರಿಲ್ 1ರಿಂದ ಅದನ್ನು 309 ರೂ.ಗೆ ಏರಿಸಲಾಗಿದೆ. ಪ್ರತಿ ವಾರಾಂತ್ಯಕ್ಕೆ ಕೂಲಿಯನ್ನು ಆಯಾ ಕಾರ್ಮಿಕರ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ.
ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷದಿಂದ ನರೇಗಾದಡಿ ಶಾಲಾ ಮೈದಾನ ಮತ್ತು ಕಾಂಪೌಂಡ್‌ಗಳನ್ನು ಹೆಚ್ಚೆಚ್ಚು ನಿರ್ಮಿಸಲಾಗುತ್ತಿದೆ. 2023-24ರಲ್ಲಿ 125 ಶಾಲಾ ಕಾಂಪೌಂಡ್ ಹಾಗೂ 29 ಆಟದ ಮೈದಾನ ನಿರ್ಮಾಣ ಗುರಿ ಹೊಂದಲಾಗಿದ್ದು, ಅದರಲ್ಲಿ 110 ಕಾಂಪೌಂಡ್, 24 ಆಟದ ಮೈದಾನ ಪೂರ್ಣಗೊಂಡಿದೆ. 2024-25ರಲ್ಲಿ ಹಿಂದಿನ ವರ್ಷದ ಬಾಕಿ ಹೊರತುಪಡಿಸಿ 60 ಶಾಲೆಗಳ ಕಾಂಪೌಂಡ್ ಹಾಗೂ 35 ಆಟದ ಮೈದಾನ ನಿರ್ಮಾಣದ ಗುರಿ ಹೊಂದಲಾಗಿದೆ.
ನರೇಗಾದಡಿ ಗುರಿ ಸಾಧನೆಗೆ ಬೇಕಾದ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಸ್ಥಳೀಯ ವಾಗಿ ಉದ್ಯೋಗ ಚೀಟಿ ಹೊಂದಿರುವವರು ಕಾಮಗಾರಿ ಪಡೆದು ಕೆಲಸ ಮಾಡದೇ ಇದ್ದಾಗ ಗುರಿ ಸಾಧನೆ ಕಷ್ಟವಾಗುತ್ತದೆ. ಈ ಬಾರಿ ಶಾಲಾ ಆವರಣ ಗೋಡೆ ನಿರ್ಮಾಣ ಆದ್ಯತೆಯಾಗಿ ಪರಿಗಣಿಸಿದ್ದೇವೆ. -ಪ್ರತೀಕ್ ಬಾಯಲ್, ಸಿಇಒ, ಜಿಪಂ ಉಡುಪಿ
-ರಾಜು ಖಾರ್ವಿ ಕೊಡೇರಿ