ವಿಟ್ಲ: ಉಡುಪಿ-ಕಾಸರಗೋಡು 400 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣ ಕಂಪೆನಿಗಳ ಸಿಬಂದಿ ಯಂತ್ರಗಳ ಸಹಿತವಾಗಿ ಅಡ್ಯನಡ್ಕ ಕೊಲ್ಲಪದವು ಭಾಗಕ್ಕೆ ಆಗಮಿಸಿ ವಿದ್ಯುತ್ ಗೋಪುರ ನಿರ್ಮಾಣಕ್ಕೆ ಮುಂದಾಗಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಕೊಲ್ಲಪದವು ಕೊಡುಂಜಡ್ಕದಲ್ಲಿ ರೈತರ ಕೃಷಿ ಭೂಮಿಯಲ್ಲಿ ವಿದ್ಯುತ್ ಗೋಪುರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕಂಪೆನಿಯ ಅಧಿಕಾರಿಗಳು ಕೆಲವು ನಿವೃತ್ತ ಪೊಲೀಸ್ ಅಧಿಕಾರಿಗಳ ಜತೆಗೆ ಆಗಮಿಸಿದ್ದರು. ಗೋಪುರದ ಅಡಿಪಾಯ ಮಾಡುವ ನಿಟ್ಟಿನಲ್ಲಿ ಜೆಸಿಬಿ, ಮರ ಕಡಿಯುವವರನ್ನು ಕರೆತರಲಾಗಿತ್ತು.
ಇದನ್ನು ಗಮನಿಸಿದ ಸ್ಥಳೀಯರು ಅವರನ್ನು ಹಾಗೂ ವಾಹನಗಳನ್ನು ಕೊಲ್ಲಪದವು ಜಂಕ್ಷನ್‌ನಲ್ಲಿ ತಡೆದರು. ಪುಣಚ ಗ್ರಾಮ ಪಂಚಾಯತ್ ಸದಸ್ಯರು ಸ್ಥಳಕ್ಕೆ ಆಗಮಿಸಿ ಕಾಮಗಾರಿಗೆ ಪಂಚಾಯತ್ ಅನುಮತಿ ನೀಡದಿರುವಾಗ ಕಾಮಗಾರಿಯನ್ನು ಹೇಗೆ ನಡೆಸಲು ಸಾಧ್ಯ ಎಂದು ಪ್ರಶ್ನಿಸಿದರು.
ಪುತ್ತೂರು ಶಾಸಕರು ಕಾಮಗಾರಿಯನ್ನು ನಡೆಸುವಂತೆ ಹೇಳಿದ ಕಾರಣ ನಾವು ಗುರುತು ಹಾಕುವ ನಿಟ್ಟಿನಲ್ಲಿ ಸ್ಥಳಕ್ಕೆ ಆಗಮಿಸಿರುವುದಾಗಿ ಕಂಪೆನಿಯವರು ಹೇಳಿಕೊಂಡಿದ್ದಾರೆ.
ಸ್ಥಳದಲ್ಲಿ ಜನ ಸೇರಿ ಸ್ವಲ್ಪ ಸಮಯ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಬಂಟ್ವಾಳ ತಹಶೀಲ್ದಾರ್ ಬಂದರೂ ಜಿಲ್ಲಾಡಳಿತ ರೈತರ ಸಭೆಯನ್ನು ನಡೆಸಿ ರೈತರಿಗೆ ಸಮರ್ಪಕ ಮಾಹಿತಿ ನೀಡಿ, ರೈತರ ಸಮಸ್ಯೆಯನ್ನು ದಾಖಲಿಸಿಕೊಳ್ಳದೇ ಹೋದಲ್ಲಿ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಸ್ಥಳದಲ್ಲಿ ಸೇರಿದ ಹೋರಾಟಗಾರರು ಎಚ್ಚರಿಕೆ ನೀಡಿದರು.
ಜಿಲ್ಲಾಡಳಿತಕ್ಕೆ ರೈತ ಸಂಘ, ಮಾಜಿ ಶಾಸಕರು, ಪುತ್ತಿಲ ಪರಿವಾರದಿಂದ ಒತ್ತಡ ಹೋಗುತ್ತಿದ್ದಂತೆ ಕಂಪೆನಿಯವರು ಸ್ಥಳದಿಂದ ಕಾಲ್ಕಿತ್ತರು.