Advertisement

Udupi: ಕಸ, ತ್ಯಾಜ್ಯ ಕೇಂದ್ರವಾದ ಕೆಎಸ್ಸಾರ್ಟಿಸಿ ಬಸ್‌ ತಂಗುದಾಣ-ಭದ್ರತೆ ಇಲ್ಲ

01:41 PM Feb 06, 2024 | Team Udayavani |

ಉಡುಪಿ: ಬನ್ನಂಜೆಯಲ್ಲಿರುವ ನೂತನ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದ ಪಾರ್ಕಿಂಗ್‌ ಪ್ರದೇಶ ಈಗ ತ್ಯಾಜ್ಯ ವಿಲೇವಾರಿ ಕೇಂದ್ರವಾಗಿ ಮಾರ್ಪಟ್ಟಿದೆ. ಬಸ್‌ ನಿಲ್ದಾಣದ ಹೊರಭಾಗದಲ್ಲಿರುವ ಡ್ರೈನೇಜ್‌ನಲ್ಲಿ ಕೊಳಚೆ ನೀರು ಶೇಖರಣೆಗೊಂಡು ರೋಗ-ರುಜಿನಗಳ ತಾಣವಾಗಿ ಮಾರ್ಪಟ್ಟಿದೆ.

Advertisement

ಇಲ್ಲಿಯೇ ರಿಕ್ಷಾ ನಿಲ್ದಾಣ ಸಹಿತ ವ್ಯಾಪಾರಸ್ಥರು ಕುಳಿತುಕೊಳ್ಳುವುದರಿಂದ ಸೊಳ್ಳೆಗಳ ಉತ್ಪತ್ತಿತಾಣವಾಗಿಯೂ ಪರಿವರ್ತನೆಯಾಗಿದೆ. ಇದು ಹೊರಭಾಗದ ಕಥೆಯಾದರೆ ಒಳಭಾಗದಲ್ಲಿ ನೈರ್ಮಲ್ಯ ಎಂಬುವುದೇ ಮರೀಚಿಕೆಯಾಗಿದೆ.

2022ರಲ್ಲಿ ಉದ್ಘಾಟನೆಗೊಂಡ ಬಸ್‌ ತಂಗು ದಾಣವನ್ನು ಹಗಲು ಹೊತ್ತಿನಲ್ಲಿ ಸಿಬಂದಿ ಸ್ವಚ್ಛತೆ ಮಾಡಿದರೂ ರಾತ್ರಿ ಬೆಳಗಾಗುವುದರಲ್ಲಿ ಮತ್ತೆ ಅಷ್ಟೇ ಪ್ರಮಾಣದಲ್ಲಿ ತ್ಯಾಜ್ಯದ ರಾಶಿ ಬಿದ್ದಿರುತ್ತದೆ.  ಪಾರ್ಕಿಂಗ್‌ ಹಾಗೂ ಮೇಲ್ಭಾಗದಲ್ಲಿ ಮಾತ್ರ
ತೆರೆದುಕೊಂಡಿರುವ ಈ ತಂಗುದಾಣದ ಇತರ ಭಾಗಗಳಲ್ಲಿ ಕಸಗಳ ದಾಸ್ತಾನು ಕಂಡು ಬರುತ್ತಿದೆ. ಅನ್ಯ ಜಿಲ್ಲೆಯಿಂದ ಆಗಮಿಸಿದವರು ಎಲ್ಲೆಂದರಲ್ಲಿ ಕೂತು ಊಟಮಾಡುವುದು, ನಿದ್ರಿಸುತ್ತಿರುತ್ತಾರೆ.

ನಿಲ್ದಾಣದಲ್ಲಿ ಮದ್ಯದ ಬಾಟಲಿಗಳು
ಮೇಲ್ಭಾಗದ ಕೊಠಡಿಗಳಿಗೆ ಬೀಗ ಜಡಿಯಲಾಗಿದ್ದು, ಅಲ್ಲಿಯೂ ತ್ಯಾಜ್ಯಗಳು ದಾಸ್ತಾನುಗೊಂಡಿವೆ. ಮದ್ಯದ ಬಾಟಲಿಗಳು ಕೂಡ ದಿನಂಪ್ರತಿ ಬೆಳಗ್ಗೆ ಕಂಡುಬರುತ್ತಿದೆ. ರಾತ್ರಿವೇಳೆ ಇಲ್ಲಿ ಮದ್ಯ ಪಾರ್ಟಿ ನಡೆಯುತ್ತಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ಹೊರಗಿನ ವ್ಯಕ್ತಿಗಳು ರಾತ್ರಿಯಾಗುತ್ತಿದ್ದಂತೆಯೇ ನಿಲ್ದಾಣದೊಳಗೆ ಪ್ರವೇಶಿಸಿ ಪಾರ್ಟಿ ಮಾಡುತ್ತಿದ್ದಾರೆ. ಇಡೀ ಬಸ್‌ ನಿಲ್ದಾಣದಲ್ಲಿ ಧೂಳಿನ ವಾತಾವರಣ ಕಂಡುಬರುತ್ತಿದೆ.

ಬೇಕಿದೆ ಹೆಚ್ಚುವರಿ ಸಿಬಂದಿ
ಬಸ್‌ ತಂಗುದಾಣದ ನಿರ್ವಹಣೆಯನ್ನು ಖಾಸಗಿ ಏಜೆನ್ಸಿಯೊಂದು ವಹಿಸಿಕೊಂಡಿದ್ದು, ಮೂರು ಮಂದಿಯನ್ನಷ್ಟೇ ನೇಮಕ ಮಾಡಲಾಗಿದೆ. ಆದರೆ ಬೃಹತ್‌ ಕಟ್ಟಡವಾದ ಇದರ ನಿರ್ವಹಣೆಗೆ ಮತ್ತಷ್ಟು ಸಿಬಂದಿಯ ಅಗತ್ಯವೂ ಎದುರಾಗಿದೆ.
ಜತೆಗೆ ಇಂತಿಷ್ಟು ಅವಧಿಗೆ ಸ್ವತ್ಛತೆ ಮಾಡುವ ಅನಿವಾರ್ಯತೆಯೂ ಎದುರಾಗಿದೆ. ಈ ನಡುವೆ ಕಟ್ಟಡದ ಪಾರ್ಕಿಂಗ್‌ ಪ್ರದೇಶದಲ್ಲಿ ಕಸದ ರಾಶಿ ಹಾಕಿ ಒಣಕಸ ಹಾಗೂ ಹಸಿಕಸವನ್ನು ಸಿಬಂದಿ ಬೇರ್ಪಡಿಸಿ ನಗರಸಭೆಯವರಿಗೆ ನೀಡುತ್ತಿದ್ದಾರೆ. ಇದಕ್ಕಾಗಿ ಕಸವನ್ನೆಲ್ಲ ಒಂದೆಡೆ ದಾಸ್ತಾನು ಹಾಕುವುದರಿಂದ ಪ್ರಯಾಣಿಕರಿಗೂ ಸಮಸ್ಯೆ ಉಂಟಾಗುತ್ತಿದೆ.

Advertisement

ರಾತ್ರಿ 10 ಗಂಟೆಯ ಬಳಿಕ ಬಸ್‌ ಸಮಯ ಸಹಿತ ಇತರ ಮಾಹಿತಿ ಕೇಳಬೇಕೆಂದರೆ ಯಾರು ಇರುವುದಿಲ್ಲ. ಪ್ರಯಾಣಿಕರು ತಂಗುದಾಣಕ್ಕೆ ತೆರಳಿ ಹಿಂದಿರುಗುವ ಸ್ಥಿತಿ ನಿರ್ಮಾಣವಾಗುತ್ತಿದೆ. ಕೆಲವು ಮಂದಿ ಅಲ್ಲಿಯೇ ರಾತ್ರಿ ಕಳೆದು ಮರುದಿನ ವಾಪಾಸಾಗುವ ಘಟನೆಗಳೂ ನಡೆಯುತ್ತಿವೆ ಎನ್ನುತ್ತಾರೆ ಸ್ಥಳೀಯರು.

ಭದ್ರತೆ ಇಲ್ಲ
ತಂಗುದಾಣದಲ್ಲಿ ಒಬ್ಬರಷ್ಟೇ ಹೋಂ ಗಾರ್ಡ್‌ ಇದ್ದಾರೆ. ನರ್ಮ್ ಬಸ್‌ ತಂಗುದಾಣ ಹಾಗೂ ನೂತನ ಕೆಎಸ್ಸಾರ್ಟಿಸಿ ಬಸ್‌ ತಂಗುದಾಣ ಎರಡರಲ್ಲಿಯೂ ಇವರು ಸೇವೆ ಮಾಡಬೇಕು! ಇಲ್ಲಿಗೆ ಕನಿಷ್ಠ ಇಬ್ಬರನ್ನಾದರೂ ಭದ್ರತಾ ಸಿಬಂದಿಯ ನೇಮಕ ಆಗಬೇಕು. ಈಗಾಗಲೇ ನಿಲ್ದಾಣದಲ್ಲಿ 12 ಸಿಸಿ ಕೆಮರಾಗಳಿದ್ದು, ಹೆಚ್ಚುವರಿಯಾಗಿ 6 ಕೆಮರಾ ಅಳವಡಿಕೆ ಮಾಡಬೇಕೆಂದು ಪೊಲೀಸ್‌ ಇಲಾಖೆ ಕೂಡ ಈಗಾಗಲೇ ಸೂಚನೆ ನೀಡಿದೆ.

ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ
ಬಸ್‌ ತಂಗುದಾಣದೊಳಗೆ ಶೌಚಾಲಯವಿದ್ದರೂ ಜನರು ಹೊರಭಾಗಕ್ಕೆ ತೆರಳಿ ಮೂತ್ರವಿಸರ್ಜನೆ ಮಾಡುವ ಘಟನೆಗಳೂ ನಡೆಯುತ್ತಿವೆ. ಚಾಲಕರು, ನಿರ್ವಾಹಕರು ಸಹಿತ ಸಿಬಂದಿ ಇವರಿಗೆ ಎಚ್ಚರಿಕೆ ನೀಡುತ್ತರಾದರೂ ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿವೆ. ಸೂಕ್ತ ಭದ್ರತಾ ಸಿಬಂದಿ ನೇಮಕ ಮಾಡಿದರಷ್ಟೇ ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಸಾಧ್ಯವಿದೆ. ಈಗಾಗಲೇ ರಾತ್ರಿ ವೇಳೆ ಮೋಜು ಮಸ್ತಿ ಮಾಡುವವರ ಬಗ್ಗೆ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ಕೂಡ ನೀಡಲಾಗಿದೆ ಎನ್ನುತ್ತಾರೆ ಕೆಎಸ್ಸಾರ್ಟಿಸಿ ಸಿಬಂದಿಯೊಬ್ಬರು.

ಸಿಬಂದಿ ಕೊರತೆ
ಪಾರ್ಕಿಂಗ್‌ ನಿರ್ವಹಣೆ, ಟಿಸಿ ಸಹಿತ ಕೆಎಸ್ಸಾರ್ಟಿಸಿಯ ಸಿಬಂದಿಗಳ ಸಂಖ್ಯೆ ಇರುವುದು ಕೇವಲ 5 ಮಂದಿ ಮಾತ್ರ. ಇದರ ಜತೆಗೆ ನರ್ಮ್ ಬಸ್‌ ತಂಗುದಾಣವನ್ನೂ ನೋಡಿಕೊಳ್ಳಬೇಕಾದ ಹೊಣೆಗಾರಿಕೆಯೂ ಇವರಿಗಿದೆ. ಹೆಚ್ಚುವರಿ ಸಿಬಂದಿ ನೇಮಕ ಮಾಡಿದರೆ ಸಮಸ್ಯೆ ತಕ್ಕಮಟ್ಟಿಗಾದರೂ ಪರಿಹಾರ ಕಾಣುವ ಸಾಧ್ಯತೆಗಳಿವೆ. ಕನಿಷ್ಠ ಇಬ್ಬರು ಸೆಕ್ಯೂರಿಟಿ ಗಾರ್ಡ್‌ಗಳನ್ನು ನೇಮಕ ಮಾಡುವ ಅಗತ್ಯವೂ ಎದುರಾಗಿದೆ.

2ನೇ ಅಂತಸ್ತು ಕಾಮಗಾರಿಪೂರ್ಣ
ಒಂದನೇ ಅಂತಸ್ತಿನಲ್ಲಿ ಕೆಲವು ಅಂಗಡಿಗಳು
ಈಗಾಗಲೇ ಕಾರ್ಯಾಚರಿಸುತ್ತಿವೆ. ಈಗಾಗಲೇ ಎರಡನೇ ಫ್ಲೋರ್‌ನ ಕಾಮಗಾರಿ ಪೂರ್ಣಗೊಂಡಿದ್ದು, ಇಲ್ಲಿಯೂ ಅಂಗಡಿ, ಲಾಡ್ಜ್, ಥಿಯೇಟರ್‌, ಹೊಟೇಲ್‌ ಸಹಿತ  ಇನ್ನಿತರ ವ್ಯವಹಾರ ಮಾಡಲು ಅವಕಾಶವಿದ್ದು, ಈಗಾಗಲೇ ಟೆಂಡರ್‌ ಕೂಡ ಕರೆಯಲಾಗಿದೆ. ಎಲ್ಲ ಮಳಿಗೆಗಳೂ ಕಾರ್ಯಾಚರಣೆ ನಡೆಸಿದರೆ ವ್ಯಾಪಾರವೂ ಉತ್ತಮವಾಗುವ ಸಾಧ್ಯತೆಗಳಿವೆ. ಕೆಳಭಾಗದಲ್ಲಿ ಪ್ರಸ್ತುತ ಕೆಎಸ್ಸಾರ್ಟಿಸಿಯವರೇ ಪಾರ್ಕಿಂಗ್‌ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದಾರೆ.

ಕಾರ್ಯಾಚರಿಸದ ಎಸ್ಕಲೇಟರ್‌
ನಿಲ್ದಾಣದಲ್ಲಿ ಅಳವಡಿಸಿರುವ ಎಸ್ಕಲೇಟರ್‌ ಉದ್ಘಾಟನೆಯ ದಿನ ಹಾಗೂ ಅಧಿಕಾರಿಗಳ ಭೇಟಿಯ ಸಮಯದಲ್ಲಿ ಮಾತ್ರ
ಕಾರ್ಯಾಚರಣೆ ಮಾಡುತ್ತಿದೆ. ಉಳಿದ ದಿನ ಅದನ್ನು ಆನ್‌ ಮಾಡುವ ಗೋಜಿಗೂ ಹೋಗುವುದಿಲ್ಲ. ಹಿರಿಯರು, ವೃದ್ಧರು ಮೆಟ್ಟಲು ಹತ್ತಿಕೊಂಡೇ ನಿಲ್ದಾಣಕ್ಕೆ ತೆರಳುವಂತಾಗಿದೆ.

ಅಗತ್ಯ ಕ್ರಮ
ಬಸ್‌ ತಂಗುದಾಣವನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿರುವ ಬಗ್ಗೆ ಸಂಬಂಧಪಟ್ಟ ಗುತ್ತಿಗೆ ಸಂಸ್ಥೆಯವರಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಪೂರ್ಣ ಪ್ರಮಾಣದಲ್ಲಿ ಬಸ್‌ ತಂಗುದಾಣ ಕಾರ್ಯಾಚರಣೆ ಆರಂಭವಾದ ಬಳಿಕ ಭದ್ರತೆ ಸಹಿತ ಹೆಚ್ಚುವರಿ ಸಿಬಂದಿ ನೇಮಕಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು.
ರಾಜೇಶ್‌ ಶೆಟ್ಟಿ, ವಿಭಾಗೀಯ
ನಿಯಂತ್ರಣಾಧಿಕಾರಿ, ಕೆಎಸ್ಸಾರ್ಟಿಸಿ ಮಂಗಳೂರು

*ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next