Advertisement

Udupi district ಧರ್ಮ, ಕಲೆ, ಸಂಸ್ಕೃತಿಯ ಪುಣ್ಯಭೂಮಿ: ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್

11:11 PM Oct 10, 2023 | Team Udayavani |

ಕೋಟ: ಉಡುಪಿ ಜಿಲ್ಲೆ ಅಷ್ಟಮಠಗಳಂತಹ ಧಾರ್ಮಿಕ ತಾಣಗಳು, ಕಲೆ, ಸಂಸ್ಕೃತಿ ಹಾಗೂ ಶ್ರೀಮಂತ ಪ್ರಕೃತಿ ಸೌಂದರ್ಯದ ಪುಣ್ಯಭೂಮಿಯಾಗಿದೆ. ಇಂತಹ ಮಣ್ಣಿನಲ್ಲಿ ಹುಟ್ಟಿದ ಡಾ| ಶಿವರಾಮ ಕಾರಂತರು ವಿಶ್ವಮಾನ್ಯ ವ್ಯಕ್ತಿಯಾಗಿ ಬೆಳೆದು ನಿಂತರು ಎಂದು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್ ತಿಳಿಸಿದರು.

Advertisement

ಅವರು ಮಂಗಳವಾರ ಕೋಟತಟ್ಟು ಗ್ರಾಮ ಪಂಚಾಯತ್‌, ಡಾ| ಶಿವರಾಮ ಕಾರಂತ ಟ್ರಸ್ಟ್‌ ಉಡುಪಿ, ಕಾರಂತ ಹುಟ್ಟೂರು ಪ್ರತಿಷ್ಠಾನ ವತಿಯಿಂದ ಕೋಟದಲ್ಲಿ ಆಯೋಜಿಸಲಾದ ಡಾ| ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಡಾ| ವಿದ್ಯಾಭೂಷಣ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಕಾರಂತರು ಬಹುಮುಖ ಪ್ರತಿಭೆ, ಮಹಾತ್ಮ ಗಾಂಧೀಜಿಯಿಂದ ಪ್ರೇರಿತರಾಗಿದ್ದರು ಎನ್ನುವುದು ಅತ್ಯಂತ ಹೆಮ್ಮೆಯ ವಿಚಾರ. ಅವರಲ್ಲಿನ ಸಾಮಾಜಿಕ ಹೋರಾಟದ ಗುಣ, ಪರಿಸರ ಕಾಳಜಿ ಇಂದಿನ ಜನಾಂಗಕ್ಕೆ ಮಾದರಿಯಾಗಿದೆ. ಕೋತಟ್ಟು ಗ್ರಾ.ಪಂ. ಅವರ ಹೆಸರಲ್ಲಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.

ಗಾಂಧೀ ಗ್ರಾಮಗಳಿಗೆ ಗೌರವ
ಈ ಸಂದರ್ಭ ಗಾಂಧೀ ಗ್ರಾಮ ಪುರಸ್ಕಾರ ಪಡೆದ ದ.ಕ. ಜಿಲ್ಲೆಯ ಗ್ರಾ.ಪಂ.ಗಳಾದ ಉಳಾçಬೆಟ್ಟು, ಪುತ್ತಿಗೆ, ಅಮ್ಮುಂಜೆ, ಉಪ್ಪಿನಂಗಡಿ, ಸವಣೂರು, ಬಳಂಜ, ಮರ್ಕಂಜ, ಕೆಮ್ರಾಲು, ಬೆಳ್ಮ, ಉಡುಪಿ ಬಡಗುಬೆಟ್ಟು ಗ್ರಾ.ಪಂ. ಮುಖ್ಯಸ್ಥರನ್ನು ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನರೇಂದ್ರ ಕುಮಾರ್‌ ಕೋಟ, ಗೀತಾನಂದ ಫೌಂಡೇಶನ್‌ ಪ್ರವರ್ತಕ ಆನಂದ ಸಿ. ಕುಂದರ್‌ ಅವರನ್ನು ರಾಜ್ಯಪಾಲರು ಗೌರವಿಸಿದರು.

ಕುಂದಾಪುರ ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಬೈಂದೂರಿನ ಗುರುರಾಜ್‌ ಗಂಟಿಹೊಳೆ, ಕಾಪುವಿನ ಗುರ್ಮೆ ಸುರೇಶ್‌ ಶೆಟ್ಟಿ, ಉಡುಪಿಯ ಯಶಪಾಲ್‌ ಸುವರ್ಣ, ಕಾರಂತ ಪ್ರತಿಷ್ಠಾನದ ಗೌರವಾಧ್ಯಕ್ಷ ಆನಂದ ಸಿ. ಕುಂದರ್‌, ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯ, ಪತ್ರಕರ್ತ ಯು.ಎಸ್‌. ಶೆಣೈ, ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾ ಕುಮಾರಿ, ಕೋಟತಟ್ಟು ಪಿಡಿಒ ರವೀಂದ್ರ ರಾವ್‌ ಮೊದಲಾದವರಿದ್ದರು.

Advertisement

ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸ್ವಾಗತಿಸಿ, ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ಸತೀಶ್‌ ಬಾರಿಕೆರೆ ವಂದಿಸಿದರು. ಶಿಕ್ಷಕ ಸತೀಶ್‌ ವಡ್ಡರ್ಸೆ ಮತ್ತು ನರೇಂದ್ರ ಕುಮಾರ್‌ ಕೋಟ ಕಾರ್ಯಕ್ರಮ ನಿರೂಪಿಸಿದರು.

ಜ್ಞಾನಪೀಠದಷ್ಟೇ ಶ್ರೇಷ್ಠ
ಡಾ| ವಿದ್ಯಾಭೂಷಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ| ಶಿವರಾಮ ಕಾರಂತರ ಹೆಸರಲ್ಲಿ ಕೊಡಮಾಡಿದ ಈ ಪ್ರಶಸ್ತಿ ನನಗೆ ಜ್ಞಾನಪೀಠದಷ್ಟೇ ಶ್ರೇಷ್ಠವಾದದ್ದು. ಡಾ| ಕಾರಂತರು ನನ್ನ ಬಾಳಿನ ಬೆಳಕು. ಅವರ ಚಿಂತನೆ ನನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿದೆ ಎಂದರು.

ರಾಜ್ಯಪಾಲರ ಕನ್ನಡ ಪ್ರೇಮ; ಯಕ್ಷಗಾನ ಶೈಲಿಯ ಗೌರವ
“ಎಲ್ಲರಿಗೂ ನಮಸ್ಕಾರಗಳು, ನಿಮ್ಮೆಲ್ಲರನ್ನು ನಾನು ಆದರದಿಂದ ಸ್ವಾಗತಿಸುತ್ತೇನೆ…’ ಎಂದು ರಾಜ್ಯಪಾಲರು ಕನ್ನಡದಲ್ಲಿ ಮಾತು ಆರಂಭಿಸಿದಾಗ ಸಭೆ ಚಪ್ಪಾಳೆಯೊಂದಿಗೆ ಸಂಭ್ರಮಿಸಿತು. ರಾಜ್ಯಪಾಲರಿಗೆ ಯಕ್ಷಗಾನದ ಕಸೆ ಸೀರೆಯನ್ನು ಹೋಲುವ ಶಾಲು, ಯಕ್ಷಗಾನದ ಕಿರೀಟ ತೊಡಿಸಿ, ಕಾರಂತರ “ಹತ್ತು ಮನಸ್ಸಿನ ಹುಚ್ಚು ಮುಖಗಳು’ ರೇಖಾ ಚಿತ್ರದ ಬೆಳ್ಳಿಯ ಫಲಕವನ್ನು ನೀಡಿ ಗೌರವಿಸಲಾಯಿತು. ಕಿರೀಟ ತೊಟ್ಟ ರಾಜ್ಯಪಾಲರು ಸಂಭ್ರಮಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next