ಬೆಂಗಳೂರು: ಚೈತನ್ಯ ಮಹಾಪ್ರಭು ಭಗವದ್ಗೀತೆಯ ಮೇಲಿನ ಭಕ್ತಿಯಿಂದ ಲಕ್ಷಾಂತರ ಪ್ರತಿಗಳನ್ನು 70ಕ್ಕೂ ಹೆಚ್ಚು ಭಾಷೆಗಳಲ್ಲಿ ಮುದ್ರಿಸಿ, ವಿತರಿಸಿದ್ದಾರೆ. ಇದರಿಂದಾಗಿ ಅವರನ್ನು ಆಧುನಿಕ ಯುಗದ ಭಾರತದ ಸಂಸ್ಕೃತಿ ಮತ್ತು ಪರಂಪರೆಯ ಶ್ರೇಷ್ಠ ರಾಯಭಾರಿ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಹೇಳಿದರು.
ರಾಜಾಜಿನಗರದಲ್ಲಿ ರವಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ| ನಾ. ಮೊಗಸಾಲೆಯವರ ವಿಶ್ವಂಭರ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಚೈತನ್ಯ ಮಹಾಪ್ರಭು ಗೀತೆಯ ಸಂದೇಶಗಳನ್ನು ಪಾಶ್ಚಿಮಾತ್ಯ ದೇಶಗಳಿಗೆ ಕೊಂಡೊಯ್ದರು. ಅಲ್ಲಿ ಶ್ರೀ ಕೃಷ್ಣನ ಬೋಧನೆಗಳನ್ನು ಸ್ವೀಕರಿಸಲು ಪ್ರಪಂಚದ ಮೂಲೆ ಮೂಲೆಯ ಜನರನ್ನು ಪ್ರೇರೇಪಿಸಿದರು. ಅವರ ಬೋಧನೆಗಳು ಆಧ್ಯಾತ್ಮಿಕ ಸಮಾನತೆ, ಸಹೋದರತ್ವ ಮತ್ತು ಸ್ವಾತಂತ್ರ್ಯದ ತತ್ವಗಳನ್ನು ಆಧರಿಸಿವೆ ಎಂದರು.
ಡಾ| ಮೊಗಸಾಲೆ ಅವರು ಚೈತನ್ಯ ಮಹಾಪ್ರಭುಗಳ ಜೀವನ ಕುರಿತು ಕನ್ನಡದಲ್ಲಿ ಬರೆದಿರುವುದು ಶ್ಲಾಘನೀಯ. ನಿಸ್ಸಂಶಯವಾಗಿ ಈ ಪುಸ್ತಕವು ಭಾರತೀಯ ಕನ್ನಡ ಸಾಹಿತ್ಯದ ಪ್ರಮುಖ ಪುಸ್ತಕವಾಗಿದ್ದು, ಇದು ಚೈತನ್ಯ ಮಹಾಪ್ರಭುಗಳ ಚಿಂತನೆಗಳನ್ನು ಸಾರ್ವಜನಿಕರಿಗೆ ಹರಡಲು ಸಹಾಯ ಮಾಡುತ್ತದೆ ಎಂದರು.
ವ್ಯಾಸರಾಜ ಮಠದ ಪೀಠಾಧಿಪತಿ ವಿದ್ಯಾಶ್ರೀಶ ತೀರ್ಥ ಸ್ವಾಮಿಜಿ, ನಿರ್ದೇಶಕ ಪ್ರಕಾಶ್ ಬೆಳವಾಡಿ, ಮೈಸೂರು ಇಸ್ಕಾನ್ ಅಧ್ಯಕ್ಷ ಸ್ತೋಕಾ ಕೃಷ್ಣ ಸ್ವಾಮಿ, ಬೆಂಗಳೂರು ಇಸ್ಕಾನ್ ನ ಉಪಾಧ್ಯಕ್ಷ ಚಂಚಲಪತಿ ದಾಸ್, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ| ಮಲ್ಲೇಪುರಂ ವೆಂಕಟೇಶ್ ಇತರರಿದ್ದರು.