Advertisement

ಪ್ರಿಯಾಂಕಾ ಬಾಣ ಇಲ್ಲದಿದ್ದರೆ ಮೈತ್ರಿ ಹೊಸ ಸೂತ್ರ

03:13 AM Mar 17, 2019 | Team Udayavani |

ಉಡುಪಿ: ಅಜ್ಜಿಯ ಸಂಬಂಧ ಮೊಮ್ಮಗಳಿಗೆ ತಳಕು ಹಾಕುತ್ತಿದೆಯೇ ? ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಕಾಂಗ್ರೆಸ್‌ಗೆ ದಕ್ಕಿಸಿಕೊಳ್ಳುವತ್ತ ಜಿಲ್ಲಾ ಘಟಕಗಳು ಕಾರ್ಯನಿರತರಾಗಿರುವ ಹೊತ್ತಿನಲ್ಲೇ ಇಂಥದೊಂದು ಅಭಿಪ್ರಾಯ ಕೇಳಿಬರುತ್ತಿದೆ. ಕೊನೆಯ ಹಂತದಲ್ಲಿ ಈ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲೂಬಹುದು. ಈ ಬಗ್ಗೆ ಪಕ್ಷದ ಮೂಲಗಳನ್ನು ಕೇಳಿದರೆ, ಇಲ್ಲ ಎಂದು ತಳ್ಳಿ ಹಾಕಲು ಮನಸ್ಸು ಮಾಡುತ್ತಿಲ್ಲ. ತಳ್ಳಿ ಹಾಕಲಾಗದು ಎಂದಷ್ಟೇ ಉತ್ತರಿಸುತ್ತವೆ. 

Advertisement

ಈ ಲೆಕ್ಕಾಚಾರದ ಹಿಂದೆ ಕೆಲಸ ಮಾಡುತ್ತಿರುವುದು ಏನಾದರೂ ಮಾಡಿ ಮೈತ್ರಿ ಪಕ್ಷಗಳು ಗರಿಷ್ಠ ಸ್ಥಾನ ಪಡೆಯ ಬೇಕೆಂಬುದು. ಪ್ರಿಯಾಂಕಾ ಕರೆತಂದರೆ ಕರಾವಳಿ ಮತ್ತು ಆಸುಪಾಸಿನ ನಾಲ್ಕೈದು ಕ್ಷೇತ್ರಗಳ ಮೇಲೆ ಪರಿಣಾಮ ಬೀರಬಹುದು. ಯಾಕೆಂದರೆ, ಚಿಕ್ಕಮಗಳೂರಿನಿಂದ 1978ರಲ್ಲಿ ಸ್ಪರ್ಧಿಸಿ ಇಂದಿರಾ ಗಾಂಧಿ ಗೆಲುವು ಸಾಧಿಸಿದ್ದರು. ಈ ಕ್ಷೇತ್ರಕ್ಕೂ ಕಾಂಗ್ರೆಸ್‌ಗೂ ಭಾವನಾತ್ಮಕ ಸಂಬಂಧವಿದೆ. ರಾಷ್ಟ್ರ ಮಟ್ಟದಲ್ಲಿ ಮೈತ್ರಿಗಳ ಬಿರುಕು ಹೆಚ್ಚುತ್ತಿರು ವಾಗ ರಾಜ್ಯದ ಮೈತ್ರಿಯನ್ನು ಉಳಿಸಿಕೊಳ್ಳುವುದು ಉಭಯ ಪಕ್ಷಗಳಿಗೂ ಅನಿವಾರ್ಯ. ಇದರಿಂದ ರಾಷ್ಟ್ರ ಮಟ್ಟದ ಒಟ್ಟು ಸ್ಥಾನ ಗಳಿಕೆಗೆ ಕೊಂಚ ನೆರವಾಗಬಹುದೆಂಬ ಆಶಾವಾದವೂ ಇದೆ.

ಜೆಡಿಎಸ್‌ ಬಿಗಿಯಲ್ಲಿ ರಾಜಿ?
ಏತನ್ಮಧ್ಯೆ ಜೆಡಿಎಸ್‌ ಪಡೆದುಕೊಂಡ ಉಡುಪಿ- ಚಿಕ್ಕಮಗಳೂರು, ಉತ್ತರ ಕನ್ನಡ, ತುಮಕೂರು ಕ್ಷೇತ್ರಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡುವ ಚರ್ಚೆಯೂ ಚಾಲ್ತಿಯಲ್ಲಿದೆ. ತುಮಕೂರಿನಿಂದ ದೇವೇಗೌಡರು ಸ್ಪರ್ಧಿಸಿದರೆ ಅಚ್ಚರಿ ಘಟಿಸ ಬಹುದು. ಇಲ್ಲದಿದ್ದರೆ ಮೈತ್ರಿ ಅಭ್ಯರ್ಥಿ ಗೆಲ್ಲು ವುದು ಕಷ್ಟವೆಂಬ ಮಾತಿದೆ. ಉಡುಪಿ-ಚಿಕ್ಕಮಗ ಳೂರು, ಉತ್ತರ ಕನ್ನಡದ ಸ್ಥಿತಿ ಇದಕ್ಕಿಂತ ಕನಿಷ್ಠ ಎಂಬುದು ಜೆಡಿಎಸ್‌ಗೂ ತಿಳಿದಿದೆ. ಇದನ್ನೇ ಬಳಸಿಕೊಳ್ಳುವ ಸಾಧ್ಯತೆ ಇರುವ ಕಾಂಗ್ರೆಸ್‌, ಪ್ರಿಯಾಂಕಾ ಪ್ರಯೋಗ ನಡೆಸಲು ಮುಂದಾಗಬಹುದು. ಕಾಂಗ್ರೆಸ್‌ ಒಂದು ವೇಳೆ ದುರ್ಬಲ ಗೊಂಡರೆ ತನ್ನ ನೇತೃತ್ವದ ಸರಕಾರದ ಭವಿಷ್ಯಕ್ಕೂ ಅಪಾಯವಿರುವ ಕಾರಣ ಕೊನೆ ಕ್ಷಣದಲ್ಲಿ ಜೆಡಿಎಸ್‌ ಬಿಗಿ ಸಡಿಲಿಸುವ ಸಂಭವವಿದೆ ಎನ್ನಲಾಗಿದೆ.

ಪರ್ಯಾಯ ಮಾರ್ಗ
ಇದಲ್ಲದೆ, ಜೆಡಿಎಸ್‌- ಕಾಂಗ್ರೆಸ್‌ ಪಕ್ಷದ ಜಂಟಿ ಅಭ್ಯರ್ಥಿಯನ್ನೂ ನಿಲ್ಲಿಸುವ ಚಿಂತನೆಯೂ ಪ್ರಗತಿ ಯಲ್ಲಿದೆ. ಎರಡು ಜಿಲ್ಲೆಗಳ ಸಮ್ಮಿಶ್ರವಾದ ಈ ಕ್ಷೇತ್ರದಲ್ಲಿ, ಜೆಡಿಎಸ್‌-ಕಾಂಗ್ರೆಸ್‌ ಕೂಟವು ಹೊಸ ಸಮ್ಮಿಶ್ರ ನೀತಿ ಜಾರಿಗೊಳಿಸುವ ಲಕ್ಷಣವಿದೆ. ಕಾಂಗ್ರೆಸ್‌ ಅಭ್ಯರ್ಥಿಯು ಜೆಡಿಎಸ್‌ ಟಿಕೆಟ್‌ನಿಂದ ಸ್ಪರ್ಧಿಸುವ ಲೆಕ್ಕಾಚಾರವೂ ನಡೆದಿದೆ. ಇದಕ್ಕೆ ಪೂರಕ ಎಂಬಂತೆ  ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಕಾಂಗ್ರೆಸ್‌ನ ಪ್ರಮೋದ್‌ ಮಧ್ವರಾಜರ ನಡುವೆ ಶನಿವಾರ ಮಾತುಕತೆ ನಡೆದಿದೆ. ಜೆಡಿಎಸ್‌ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ಮೊದಲಿಗೆ ಮಾಜಿ ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆ ತಮ್ಮ ಅಭ್ಯರ್ಥಿಯಾದರೆ ಉತ್ತಮ ಎಂದಿತ್ತು. ಆದರೆ ಹೆಗ್ಡೆಯವರು ಪ್ರಸ್ತಾವವನ್ನು ನಿರಾಕರಿಸಿದಾಗ 2 ನೇ ಆಯ್ಕೆಗೆ ಈ ಹೊಸ ಸೂತ್ರ ಎನ್ನಲಾಗಿದೆ.

ಕಾಂಗ್ರೆಸ್‌ ವಿಶ್ವಾಸದಲ್ಲಿ ಜೆಡಿಎಸ್‌ ಸ್ಪರ್ಧೆ
“ಜೆಡಿಎಸ್‌ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟು ಕೊಟ್ಟರೂ ಅಚ್ಚರಿಪಡಬೇಕಿಲ್ಲ.  ದೇವೇಗೌಡ, ವಿಶ್ವನಾಥ್‌, ಕುಮಾರಸ್ವಾಮಿಯವರು ಏನು ನಿರ್ಧಾರ ತಳೆಯುತ್ತಾರೆಂದು ಹೇಳ ಲಾಗದು. ಸಮ್ಮಿಶ್ರ ಸರಕಾರವೆಂದರೆ ಕೊಡು ಕೊಳ್ಳುವಿಕೆಯೂ ಸಹಜ’ ಎಂಬ ಜೆಡಿಎಸ್‌ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಧರ್ಮೇಗೌಡರ ಹೇಳಿಕೆ ಹೊಸ ಸೂತ್ರಕ್ಕೆ ಪೂರಕವಾಗಿದೆ. ಇದು ಹೌದಾದರೆ ಪ್ರಮೋದ್‌ ಮಧ್ವರಾಜ್‌ ಮೈತ್ರಿ ಪಕ್ಷಗಳ ಪರವಾಗಿ ಸ್ಪರ್ಧಿಸಲೂಬಹುದು. 

Advertisement

ಮುಖ್ಯಮಂತ್ರಿ ನನ್ನನ್ನು ಕರೆದು ಮಾತನಾಡಿದ್ದು ಹೌದು. ಕಾಂಗ್ರೆಸ್‌ ಅಭ್ಯರ್ಥಿಗೆ ಜೆಡಿಎಸ್‌ ಟಿಕೆಟ್‌ ಕೊಡಲು ತಮ್ಮ ಆಕ್ಷೇಪವಿಲ್ಲ ಎಂದು ಹೇಳಿದ್ದಾರೆ. ಉಭಯ ಜಿಲ್ಲೆಗಳ ಕಾಂಗ್ರೆಸ್‌ ನಾಯಕರನ್ನು ಕರೆದು ಅವರೇ ಮಾತನಾಡುತ್ತಾರೆ. 
ಪ್ರಮೋದ್‌ ಮಧ್ವರಾಜ್‌, ಕಾಂಗ್ರೆಸ್‌ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next