Advertisement

Explainer: ವಯನಾಡ್‌ ಲೋಕಸಮರ-ಪ್ರಿಯಾಂಕಾ ವಿರುದ್ಧ ಮಾಜಿ ಪತ್ರಕರ್ತ, ಕೌನ್ಸಿಲರ್‌ ಅಖಾಡಕ್ಕೆ

01:25 PM Oct 28, 2024 | Team Udayavani |

ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಚುನಾವಣೆ ನವೆಂಬರ್‌ 13ರಂದು ನಡೆಯಲಿದ್ದು, ಚುನಾವಣ ಅಖಾಡ ಈಗಾಗಲೇ ರಂಗೇರಿದೆ. ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಿರುದ್ಧ ಸ್ಪರ್ಧಿಸಲು ಸಿಪಿಐನ ಮಾಜಿ ಶಾಸಕ, ಎರಡು ಬಾರಿ ಕೌನ್ಸಿಲ(ಬಿಜೆಪಿ)ರ್‌ ಆಗಿದ್ದ ಮಹಿಳೆ, ತಮಿಳು-ಸಿಖ್‌ ಮಹಿಳೆ ಹುರಿಯಾಳಾಗಲು ಮುಂದಾಗಿದ್ದಾರೆ.

Advertisement

2019ರಿಂದ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ವಯನಾಡ್‌ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದು, 2024ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ವಯನಾಡು ಮತ್ತು ಉತ್ತರಪ್ರದೇಶದ ರಾಯ್‌ ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಎರಡೂ ಕ್ಷೇತ್ರಗಳಲ್ಲಿ ಜಯಗಳಿಸಿದ್ದ ರಾಹುಲ್‌ ಗಾಂಧಿ ರಾಯ್‌ ಬರೇಲಿ ಕ್ಷೇತ್ರವನ್ನು ಉಳಿಸಿಕೊಂಡು, ವಯನಾಡ್‌ ಲೋಕಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ ತೆರವಾಗಿದ್ದ ಕ್ಷೇತ್ರಕ್ಕೆ ನ.13ರಂದು ಚುನಾವಣೆ ನಡೆಯಲಿದೆ.

ಈ ಬಾರಿಯ ಚುನಾವಣೆಯಲ್ಲಿ ಐದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇವೆ ಎಂಬ ನಿರೀಕ್ಷೆ ಇರುವುದಾಗಿ ಪ್ರಿಯಾಂಕಾ ಗಾಂಧಿ ಅಭಿಪ್ರಾಯವ್ಯಕ್ತಪಡಿಸಿದ್ದು, ಪಕ್ಷದ ಕಾರ್ಯಕರ್ತರು ಎಲ್ಲಾ ಬೂತ್‌ ಮಟ್ಟದಲ್ಲಿಯೂ ಈಗಾಗಲೇ ಪ್ರಚಾರ ಕಾರ್ಯ ಪೂರ್ಣಗೊಳಿಸಿದ್ದಾರೆ. ನಮಗೆ ಎಲ್ಲೆಡೆಯಿಂದಲೂ ಉತ್ತಮ ಸ್ಪಂದನೆ ದೊರಕಿದೆ ಎಂದು ತಿಳಿಸಿದ್ದಾರೆ.

2009ರಿಂದ ವಯನಾಡ್‌ ಲೋಕಸಭಾ ಕ್ಷೇತ್ರವಾದ ನಂತರ ಮತದಾರರು ಯುಡಿಎಫ್‌ (United Democratic Front)ಗೆ ಮತ ಚಲಾಯಿಸುತ್ತಿದ್ದಾರೆ. ಅದರ ಜೊತೆಗೆ ಹೆಚ್ಚು ಕಡಿಮೆ ವಿಪಕ್ಷವಾದ ಎಲ್‌ ಡಿಎಫ್‌ ಮತ್ತು ಭಾರತೀಯ ಜನತಾ ಪಕ್ಷ ದೀರ್ಘಕಾಲದಿಂದ ಬಾಕಿ ಉಳಿದಿರುವ ಸ್ಥಳೀಯ ವಿಷಯ, ಮೆಡಿಕಲ್‌ ಕಾಲೇಜು ಬೇಡಿಕೆ ಸೇರಿದಂತೆ ಹಲವು ವಿಚಾರಗಳೊಂದಿಗೆ ಭರ್ಜರಿಯಾಗಿ ಪ್ರಚಾರ ನಡೆಸುತ್ತಿವೆ.

Advertisement

ವಯನಾಡ್‌ ಲೋಕಸಭಾ ಕ್ಷೇತ್ರ ಮಾನಂತಾವಾಡಿ, ಸುಲ್ತಾನ್‌ ಬತ್ತೇರಿ, ಕಲಪೆಟ್ಟಾ, ಥಿರುವಂಬಾಡಿ, ನಿಲಾಂಬುರ್‌ ಮತ್ತು ವಾಂಡೂರು ವಿಧಾನಸಭಾ ಕ್ಷೇತ್ರವನ್ನೊಳಗೊಂಡಿದೆ ಎಂದು ವರದಿ ವಿವರಿಸಿದೆ.

ಸಿಪಿಐ ತಿರುಗೇಟು: ಈ ಬಾರಿಯ ಚುನಾವಣೆಯಲ್ಲಿ ವಯನಾಡ್‌ ಕ್ಷೇತ್ರದ ಜನತೆ ವಿಭಿನ್ನವಾಗಿ ಆಲೋಚಿಸುತ್ತಿದ್ದಾರೆ.  ವಯನಾಡಿನ ಸಮಸ್ಯೆಗಳು ನಿವಾರಣೆ ಮಾಡುವುದಾಗಿ ರಾಹುಲ್‌ ಗಾಂಧಿ ಭರವಸೆ ನೀಡಿದ್ದರು. ಆದರೆ ರಾಹುಲ್‌ ಯಾವ ಸಮಸ್ಯೆಯನ್ನು ಬಗೆಹರಿಸಿಲ್ಲ. ಅಲ್ಲದೇ ರಾಯ್‌ ಬರೇಲಿಯಲ್ಲಿ ಜಯಗಳಿಸುವ ಮೂಲಕ ವಯನಾಡ್‌ ಕ್ಷೇತ್ರದ ಜನರಿಗೆ ದ್ರೋಹ ಬಗೆದಿದ್ದಾರೆ ಎಂದು ಸಿಪಿಐನ ಹಿರಿಯ ಮುಖಂಡ, ಎಲ್‌ ಡಿಎಫ್‌ ಅಭ್ಯರ್ಥಿ ಸತ್ಯನ್‌ ಮೋಕೇರಿ ದ ಪ್ರಿಂಟ್‌ ಗೆ ತಿಳಿಸಿದ್ದಾರೆ.

ಸತ್ಯನ್‌ ಮಾಜಿ ಪತ್ರಕರ್ತ, ಕೇರಳದ ನಂದಪುರಂ ವಿಧಾನಸಭಾ ಕ್ಷೇತ್ರದ(1987-2001) ಶಾಸಕರಾಗಿದ್ದರು. ಸಿಪಿಐನ ಮುಖಂಡರಾಗಿರುವ ಸತ್ಯನ್‌, ಜನಪ್ರಿಯ ವ್ಯಕ್ತಿಯಾಗಿದ್ದು, ಈ ಬಾರಿಯೂ ಎಲ್‌ ಡಿಎಫ್‌ ಅಭ್ಯರ್ಥಿಯಾಗಿ ವಯನಾಡ್‌ ಲೋಕಸಭಾ ಕ್ಷೇತ್ರದಲ್ಲಿ ಅಖಾಡಕ್ಕಿಳಿದಿದ್ದಾರೆ. ಮೂರು ಬಾರಿ ಶಾಸಕರಾಗಿದ್ದ ಸತ್ಯನ್‌, ಪ್ರಸ್ತುತ ಆಲ್‌ ಇಂಡಿಯಾ ಕಿಸಾನ್‌ ಸಭಾದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿಯಾಗಿದ್ದಾರೆ.

ಈ ಕ್ಷೇತ್ರ ದಶಕಗಳ ಕಾಲದಿಂದಲೂ ಕಾಂಗ್ರೆಸ್‌ ಹಿಡಿತದಲ್ಲಿದೆ. ಶಹನವಾಸ್‌ ಕೂಡ ಈ ಕ್ಷೇತ್ರಕ್ಕೆ ಏನೂ ಮಾಡಿಲ್ಲ. ನಂತರ ಬಂದ ರಾಹುಲ್‌ ಗಾಂಧಿ ಕೂಡಾ ನಿಷ್ಕ್ರಿಯರಾಗಿದ್ದರು. ರಾಹುಲ್‌ ಮೂಲಭೂತ ಸಮಸ್ಯೆಯನ್ನೂ ಪರಿಹರಿಸಿಲ್ಲ ಎಂದು ವಯನಾಡ್‌ ಬಿಜೆಪಿ ಅಧ್ಯಕ್ಷ ಪ್ರಶಾಂತ್‌ ಮಾಳವಯಾಲ್‌ ದೂರಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಕೆ.ಸುರೇಂದ್ರ ಅವರನ್ನು ಕಣಕ್ಕಿಳಿಸಿತ್ತು. ಈ ಬಾರಿ ಪ್ರಿಯಾಂಕಾ ಗಾಂಧಿ ವಿರುದ್ಧ ನವ್ಯಾ ಹರಿದಾಸ್‌ ಅವರನ್ನು ಅಖಾಡಕ್ಕಿಳಿಸಿದೆ. 39 ವರ್ಷದ ಮಾಜಿ ಐಟಿ ಉದ್ಯೋಗಿ ಪ್ರಸ್ತುತ ಬಿಜೆಪಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಕೋಝಿಕೋಡ್‌ ನಗರಪಾಲಿಕೆಯ ಕೌನ್ಸಿಲರ್‌ ಆಗಿದ್ದು, 2020ರಲ್ಲೂ ಪುನರಾಯ್ಕೆಯಾಗಿದ್ದರು.

ಎರಡು ಬಾರಿ ಕೌನ್ಸಿಲರ್‌ ಆಗಿರುವ ನವ್ಯಾ ಹರಿದಾಸ್‌ ಕೂಡಾ ಅಪರಿಚಿತ ಮುಖವಲ್ಲ. ಉನ್ನತ ಮಟ್ಟದ ಶಿಕ್ಷಣ ಪಡೆದಿರುವ ನವ್ಯಾ ಐಟಿ ಉದ್ಯೋಗ ತೊರೆದು, ರಾಜಕೀಯ ಪ್ರವೇಶಿಸಿದ್ದಾರೆ. ನವ್ಯಾ ವಯನಾಡು ಕ್ಷೇತ್ರದ ಸಮಸ್ಯೆಯನ್ನು ಅರಿತಿದ್ದು, ಈ ಬಾರಿ ಲೋಕಸಭಾ ಸಮರಕ್ಕೆ ಧುಮುಕಿರುವುದಾಗಿ ಮಾಳವಯಾಲ್‌ ತಿಳಿಸಿದ್ದಾರೆ.

ಕಳೆದ ಬಾರಿ ವಯನಾಡ್‌ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ರಾಹುಲ್‌ ಗಾಂಧಿ 3,64,422 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಈ ಬಾರಿ ಸಹೋದರಿ ಪ್ರಿಯಾಂಕಾ ಗಾಂಧಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಜತೆಗೆ ಸಿಪಿಐ, ಬಿಜೆಪಿ ಕೂಡಾ ಸ್ಪರ್ಧಾ ಕಣದಲ್ಲಿದ್ದು, ಮತದಾರನ ಒಲವು ಯಾರ ಕಡೆಗೆ ಎಂಬುದು ಫಲಿತಾಂಶದ ಮೂಲಕ ಬಹಿರಂಗವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next