ಮುಂಬಯಿ, ಜೂ. 19: ಕೋವಿಡ್ -19 ಸೋಂಕನ್ನು ಗಮನದಲ್ಲಿಟ್ಟುಕೊಂಡು ಈ ವರ್ಷ ಸರಳ ಮತ್ತು ಕಡಿಮೆ ಪ್ರಮಾಣದ ಮಂಡಳಿಗಳಿಂದ ಗಣಪತಿ ಉತ್ಸವ ಆಚರಣೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಕರೆ ನೀಡಿದ್ದು, ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳಲು ಗಣೇಶ ಮಂಡಳಿಗಳನ್ನು ಕೋರಿದ್ದಾರೆ.
ಕೋವಿಡ್ ಭಯ ಇನ್ನೂ ಮುಗಿದಿಲ್ಲ. ಆದ್ದರಿಂದ ಗಣೇಶ ಹಬ್ಬವನ್ನು ಹಿಂದಿನಂತೆ ಆಡಂಬರದಿಂದ ಆಚರಿಸಲು ಸಾಧ್ಯವಿಲ್ಲ. ಹಬ್ಬದ ಸಮಯದಲ್ಲಿ ಜನಸಂದಣಿ ಅಥವಾ ಮೆರವಣಿಗೆಗಳು ಇರಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ವರ್ಷ ಆಗಸ್ಟ್ 22ರಂದು ಗಣೇಶ ಚತುರ್ಥಿಯೊಂದಿಗೆ 10 ದಿನಗಳ ಉತ್ಸವ ಪ್ರಾರಂಭವಾಗುತ್ತದೆ. ಗಣೇಶೋತ್ಸವ ಮಹಾರಾಷ್ಟ್ರದ ಅತ್ಯಂತ ಜನಪ್ರಿಯ ಹಬ್ಬವಾಗಿದೆ. ಮುಂಬಯಿ ಮತ್ತು ರಾಜ್ಯದ ಇತರ ಸ್ಥಳಗಳಲ್ಲಿ ವಿವಿಧ ಮಂಡಳಿಗಳು ಸ್ಥಾಪಿಸಿದ ಪಂಡಲ್‌ಗಳು 10 ದಿನಗಳ ಉತ್ಸವಗಳಲ್ಲಿ ಸಾವಿರಾರು ಭಕ್ತರನ್ನು ಆಕರ್ಷಿಸುತ್ತವೆ.
ಗುರುವಾರ ವಿವಿಧ ಗಣೇಶ ಮಂಡಳಿಗಳ ಜತೆ ವೀಡಿಯೋ ಸಭೆಯಲ್ಲಿ ಮಾತನಾಡಿದ ಅವರು, ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಂಡು ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸುವ ಮೂಲಕ ಜಗತ್ತಿಗೆ ಒಂದು ಉದಾಹರಣೆ ನೀಡುವಂತೆ ವಿನಂತಿಸಿದರು.
ಗಣಪತಿ ಹಬ್ಬದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಚರ್ಚಿಸಲು ಸಭೆ ನಡೆಯಿತು. ಉಪಮುಖ್ಯಮಂತ್ರಿ ಅಜಿತ್ ಪವಾರ್, ರಾಜ್ಯ ಗೃಹ ಸಚಿವ ಅನಿಲ್ ದೇಶ್ಮುಖ್, ಗೃಹ ಸಚಿವರಾದ ಸತೇಜ್ ಪಾಟೀಲ್ ಮತ್ತು ಶಂಭುರಾಜೆ ದೇಸಾಯಿ ಮತ್ತು ಇತರ ಸರಕಾರಿ ಮತ್ತು ಪೊಲೀಸ್ ಅಧಿಕಾರಿಗಳು ಮತ್ತು ವಿವಿಧ ಗಣೇಶ ಮಂಡಳಿಗಳ ಪ್ರತಿನಿಧಿಗಳು ರಾಜ್ಯ ಸಭೆಯಲ್ಲಿ ಉಪಸ್ಥಿತರಿದ್ದರು.
ಕಳೆದ ವಾರ ಮುಂಬಯಿ ಪೊಲೀಸ್ ಆಯುಕ್ತ ಪರಮ್ ಬಿರ್‌ಸಿಂಗ್ ಅವರು ನಗರದ ವಿವಿಧ ಗಣೇಶ ಮಂಡಳಿಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಈ ವರ್ಷ ಗಣಪತಿ ಹಬ್ಬದ ಆಚರಣೆಯನ್ನು ಹೇಗೆ ಆಯೋಜಿಸಲು ಯೋಜಿಸುತ್ತಿದ್ದಾರೆ ಎಂಬ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಕೋರಿದರು. ಕರೊನಾ ಹಿನ್ನೆಲೆ ಮುಂಬಯಿಯ ವಡಾಲದ ಜಿಎಸ್‌ಬಿ ಗಣೇಶೋತ್ಸವ ಸಮಿತಿ ಸೇರಿದಂತೆ ಹಲವು ಗಣೇಶ ಮಂಡಳಿಗಳು ಗಣೇಶೋತ್ಸವವನ್ನು ಮುಂದೂಡಿದೆ.