ಮಣಿಪಾಲ: ಮಳೆನೀರು ಕೊಯ್ಲು ಕುರಿತಾಗಿ ಉದಯವಾಣಿ ಮತ್ತು ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಸಹಯೋಗದಲ್ಲಿ ಎಂಐಟಿ ಕ್ಯಾಂಪಸ್‌ನ ಕೆಇಎಫ್ ಆರ್ ಆ್ಯಂಡ್ ಡಿ ಸೆಂಟರ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಎಂಐಟಿ ನಿರ್ದೇಶಕ ಕ| ಡಾ| ಅನಿಲ್ ರಾಣ ಉದ್ಘಾಟಿಸಿದರು.
ನೀರಿನ ಸಮರ್ಪಕ ನಿರ್ವಹಣೆ ಹಾಗೂ ಉಳಿಸಿಕೊಳ್ಳಲು ಅಗತ್ಯ ಯೋಜನೆಗಳನ್ನು ಈಗಿಂದಲೇ ರೂಪಿಸಬೇಕು ಎಂದು ಡಾ| ರಾಣ ಹೇಳಿದರು.
ಎಂಐಟಿ ಜಂಟಿ ನಿರ್ದೇಶಕ ಡಾ| ಸೋಮಶೇಖರ್ ಭಟ್ ಅವರು ನೀರಿನ ಬ್ಯಾಂಕ್ ರಚಿಸುವ ಕುರಿತು ಸಾಮಾ ಜಿಕ ಜಾಲತಾಣದಲ್ಲಿ ಮಾಹಿತಿ ಬರುತ್ತಿದೆ ಎಂದರು. ಎಂಐಟಿ ಪ್ರಾಧ್ಯಾಪಕ ಪ್ರೊ| ನಾರಾಯಣ ಶೆಣೈ ಅವರು ಮಳೆ ನೀರಿನ ಲಭ್ಯತೆ ಮತ್ತು ಶುದ್ಧ ನೀರಿನ ಕೊರತೆಗೆ ಕಾರಣ, ನೀರಿನ ಸದ್ಬಳಕೆ ಮಾಡುವ ವಿಧಾನಗಳು ಹಾಗೂ ನೀರು ಮತ್ತು ಮನುಷ್ಯನಿಗೆ ಇರುವ ಅವಿನಾಭಾವ ಸಂಬಂಧಗಳನ್ನು ವಿವರಿಸಿದರು.
ಜಲ ಮರುಪೂರಣ ತಜ್ಞ ಜೋಸೆಫ್ ಜಿ.ಎಂ. ರೆಬೆಲ್ಲೊ ಅವರು ಜಲ ಮರುಪೂರಣದ ವಿವಿಧ ವಿಧಾನಗಳು, ಮಳೆ ನೀರ ಕೊಯ್ಲುವಿಗೆ ಅನುಸರಿಸಬೇಕಾದ ಕ್ರಮಗಳು, ಭೂಮಿಯಿಂದ ಶುದ್ಧ ನೀರು ಪಡೆದು, ಭೂಮಿಗೆ ಶುದ್ಧ ನೀರನ್ನೇ ಹೇಗೆ ಸುಲಭವಾಗಿ ತುಂಬಿಸಬೇಕು ಇತ್ಯಾದಿ ಸಂಗತಿಗಳನ್ನು ವಿವರಿಸಿದರು. ಉದಯವಾಣಿ ಸಂಪಾದಕ ಅರವಿಂದ ನಾವಡ ಪ್ರಸ್ತಾವನೆಗೈದರು. ಜಿಲ್ಲೆಯ ವಿವಿಧ ಭಾಗದ ಸಾರ್ವಜನಿಕರು ಭಾಗವಹಿಸಿ ಮಾಹಿತಿ ಪಡೆದರು.