Advertisement

Udayavani Campaign: ತಡವಾದ್ರೆ ಹೇಳಲು ನೆಟ್ವರ್ಕಿಲ್ಲ;ಕಾಡ ಮಧ್ಯೆ ನಡೆಯಲು ಭಯ!

11:10 AM Jun 18, 2024 | Team Udayavani |

ಕುಂದಾಪುರ: “ನಮಗೆ ಕೆಲವೊಮ್ಮೆ ಕಾಲೇಜಿನಲ್ಲಿ ಏನಾದರೂ ಕಾರ್ಯಕ್ರಮವಿದ್ದರೆ ತಡವಾಗುತ್ತದೆ. ಆಗ ನಾವು ದಿನಾ ಹೋಗುವ ಬಸ್‌ ಮಿಸ್ಸಾದರೆ, ಮನೆಗೆ ಇವತ್ತು ಬರುವುದು ತಡವಾಗುತ್ತೆ ಅಂತ ಹೇಳೋಕು ನಮ್ಮೂರಿನಲ್ಲಿ ನೆಟ್ವರ್ಕ್‌ ಇಲ್ಲದೇ ಇರುವುದರಿಂದ ಮನೆಗೆ ಫೋನ್‌ ಹೋಗಲ್ಲ. ನಾವು ಹೇಳುವುದಾದರೂ ಹೇಗೆ ಸರ್‌’?: ಯಳಬೇರು ಭಾಗದಿಂದ ಕುಂದಾ
ಪುರ ಕಾಲೇಜಿಗೆ ಬರುವ ವಿದ್ಯಾರ್ಥಿನಿ ವಿಶ್ಮಿತಾ ಕೇಳಿದ ಪ್ರಶ್ನೆಯಿದು.

Advertisement

ನಮ್ಮೂರಿಗೆ ನೆಟ್ವರ್ಕ್‌ ಇಲ್ಲ, ಅತ್ತ ರಸ್ತೆಯೂ ಸರಿ ಇಲ್ಲ. ಬಸ್ಸೂ ಇಲ್ಲ! ಇಲ್ಲಿಂದ ಕಮಲಶಿಲೆ, ಸಿದ್ದಾಪುರ, ಕುಂದಾಪುರಕ್ಕೆ ಹೋಗುವ 20ಕ್ಕೂ ಮಿಕ್ಕಿ ಮಕ್ಕಳು ಬಸ್‌ ನಿಲ್ದಾಣ ಇರುವವರೆಗೆ ನಿತ್ಯ 3-4 ಕಿ.ಮೀ. ನಡೆದೇ ಸಾಗಬೇಕು. ಕನಿಷ್ಠ ರಸ್ತೆ ಸರಿ ಇರುವವರೆಗೆ ಆದರೂ ಅಂದರೆ ಯಳಬೇರು ಸಮೀಪದ ಅಂಗನವಾಡಿಯವರೆಗೆ ಆದರೂ ಬಸ್‌ ಬಂದರೆ ನಮಗೆ ಅನುಕೂಲವಾಗಲಿದೆ. ಕಮಲಶಿಲೆ, ಸಿದ್ದಾಪುರಕ್ಕೆ ಹೋಗುವ 4-5ನೇ ತರಗತಿ ಮಕ್ಕಳು ಅವರಿಗಿಂತ ಭಾರವಾದ ಬ್ಯಾಗ್‌ಗಳನ್ನು ಹೊತ್ತು 2-3 ಕಿ.ಮೀ. ನಡೆಯಬೇಕಾದ ಕಷ್ಟ ಆ ಮಕ್ಕಳಿಗೆ ಮಾತ್ರ ಗೊತ್ತು. ಇಲ್ಲದಿದ್ದರೆ ನಾವು ಯಳಬೇರಿನಿಂದ ಶನೀಶ್ವರ ಕ್ರಾಸ್‌ವರೆಗೆ ನಡೆದು, ಆಜ್ರಿ – ಸಿದ್ದಾಪುರ ಬಸ್‌ ಹಿಡಿಬೇಕು. ಈಗ ಆಜ್ರಿಗೆ ಬಿಟ್ಟ ಹೊಸ ಬಸ್ಸನ್ನು ಯಳಬೇರಿನ ಅಂಗನವಾಡಿವರೆಗೆ ಆದರೂ ಬರುವಂತಾಗಲಿ ಅನ್ನುವುದು ಇಲ್ಲಿನ ಮಕ್ಕಳ ಬೇಡಿಕೆ.

ಆಲೂರು: 500+ ಮಕ್ಕಳು
ಆಲೂರು, ನೂಜಾಡಿ, ಹಕ್ಲಾಡಿ, ರಾಮನಗರ, ಗುಡ್ಡೆಯಂಗಡಿ ಭಾಗದಿಂದ ಕುಂದಾಪುರ, ಕೋಟೇಶ್ವರಕ್ಕೆ 450ರಿಂದ 500 ಮಕ್ಕಳು ಪ್ರತಿ ನಿತ್ಯ ಕಾಲೇಜಿಗೆ ಬಂದು ಹೋಗುತ್ತಾರೆ. ಇಲ್ಲಿ ಖಾಸಗಿ ಬಸ್‌ ಗಳಿದ್ದರೂ, ಒಂದೇ ಒಂದು ಕೆಎಸ್‌ ಆರ್‌ಟಿಸಿ ಬಸ್‌ ಇಲ್ಲ. ಸರಕಾರಿ ಬಸ್‌ ಬೇಕಾದರೆ 10-15 ಕಿ.ಮೀ. ದೂರದ ಮುಳ್ಳಿಕಟ್ಟೆಗೆ ಬರಬೇಕು.

ಆಲೂರಿನಿಂದ 7 ಗಂಟೆಗೆ ಒಂದು ಖಾಸಗಿ ಬಸ್‌ ಇದೆ. ಅದು 8 ಗಂಟೆಗೆ ಕುಂದಾಪುರಕ್ಕೆ ಬರುತ್ತದೆ. ಅದರಲ್ಲಿ ಬಂದರೆ ತುಂಬಾ ಬೇಗ ಆಗುತ್ತದೆ. ಇನ್ನೊಂದು ಚಿತ್ತೂರು ಭಾಗದಿಂದ ಈ ಆಲೂರು ಮಾರ್ಗವಾಗಿ ಬಸ್‌ ಬರುತ್ತದೆ. ಅದರಲ್ಲಿ ಬಂದರೆ ತಡವಾಗುತ್ತದೆ. ಈ ಎರಡೂ ಬಸ್‌ ಗಳಲ್ಲಿಯೂ ಯಾವಾಗಲೂ ತುಂಬಿರುತ್ತದೆ. ಆಲೂರು, ನೂಜಾಡಿ, ಬಂಟ್ವಾಡಿ ಭಾಗದ ಮಕ್ಕಳು ನೇತಾಡಿಕೊಂಡೇ ಬರಬೇಕು. ಈ ಮಧ್ಯದ ಅವಧಿಯಲ್ಲಿ ಒಂದು ಕೆಎಸ್‌ಆರ್‌ ಟಿಸಿ ಬಸ್‌ ಹಾಕಿದರೆ ನಮಗೆ ತುಂಬಾ ಅನುಕೂಲವಾಗಲಿದೆ ಎನ್ನುವುದು ಇಲ್ಲಿನ ವಿದ್ಯಾರ್ಥಿಗಳ ಬೇಡಿಕೆ.

ಸರಕಾರಿ ಬಸ್‌ ನಿಲ್ಲಿಸಿದರು
ನಮ್ಮದು ನಾರ್ಕಳಿಯಲ್ಲಿ ಮನೆ. ಅಲ್ಲಿಂದ ಬಸ್‌ ಹತ್ತಲು 3 ಕಿ.ಮೀ. ನಡಿಬೇಕು. ಇಲ್ಲಿ ಅನೇಕ ಮಂದಿ 2-3 ಕಿ.ಮೀ. ನಡೆದುಕೊಂಡೇ ಬರಬೇಕು. ಹೊಳೆ ದಾಟಿ ಬರುವವರು ಇದ್ದಾರೆ. ಬಸ್‌ ತುಂಬಿರುತ್ತದೆ. ಆಲೂರು, ನೂಜಾಡಿ ಮಾರ್ಗದಲ್ಲಿ ಕೆಲ ದಿನಗಳ ಹಿಂದೆ ಒಂದು ಕೆಎಸ್‌ಆರ್‌ ಟಿಸಿ ಬಸ್‌ ಸಂಚರಿಸಿದೆ. ಆದರೆ ಮತ್ತೆ ಏಕಾಏಕಿ ಅದನ್ನು ನಿಲ್ಲಿಸಿದರು. ಅದು ಯಾಕೆ ಅಂತ ಗೊತ್ತಿಲ್ಲ. ಆ ಬಸ್ಸನ್ನು ಮತ್ತೆ ಆರಂಭಿಸಲಿ ಎನ್ನುವುದು ನಾರ್ಕಳಿಯ ಕಾಲೇಜು ವಿದ್ಯಾರ್ಥಿ ದರ್ಶನ್‌ ಶೆಟ್ಟಿ ಒತ್ತಾಯವಾಗಿದೆ.

Advertisement

ನಡೊಂಡು ಹೋಗೋಕೆ ಭಯ
ನಮ್ಮ ಭಾಗದಿಂದ ಬೇರೆ ಬೇರೆ ಕಾಲೇಜಿಗೆ ಹೋಗುವ ಮಕ್ಕಳಿದ್ದು, ಅವರಿಗೆ ಬೇರೆ ಬೇರೆ ಸಮಯದಲ್ಲಿ ಕಾಲೇಜು ಬಿಡುವುದರಿಂದ ಸಂಜೆ ಕೆಲವೊಮ್ಮೆ ಕಾಡು ದಾರಿಯಲ್ಲಿ ಒಬ್ಬೊಬ್ಬರೇ ನಡೆದುಕೊಂಡು ಹೋಗಬೇಕು. ರಸ್ತೆಯಲ್ಲಿ ಕುಡುಕರು ಇರುತ್ತಾರೆ. ನಡೆದುಕೊಂಡು ಹೋಗೋಕೆ ತುಂಬಾ ಭಯವಾಗುತ್ತೆ. ಕಾಡು ಪ್ರಾಣಿಗಳ ಕಾಟವೂ ಇರುತ್ತದೆ ಎನ್ನುವುದಾಗಿ ಯಳಬೇರಿನ ವಿದ್ಯಾರ್ಥಿನಿಯೊಬ್ಬಳು ತಮ್ಮ ಸಂಕಷ್ಟವನ್ನು ತೋಡಿಕೊಳ್ಳುತ್ತಾರೆ.

ಮನೆ ತಲುಪುವಾಗ ರಾತ್ರಿ ಆಗುತ್ತದೆ!
ಆಲೂರು, ಹಕ್ಲಾಡಿ, ಬಂಟ್ವಾಡಿ ಭಾಗದಿಂದ ಕುಂದಾಪುರದ ಪದವಿ, ಪ.ಪೂ. ಕಾಲೇಜುಗಳು ಅಲ್ಲದೇ, ಕೋಟೇಶ್ವರದ ಪದವಿ ಕಾಲೇಜು, ಮೂಡ್ಲಕಟ್ಟೆಯ ಕಾಲೇಜಿಗೆ ಹೋಗುವ ನೂರಾರು ಮಂದಿ ವಿದ್ಯಾರ್ಥಿಗಳಿದ್ದಾರೆ. ಬೆಳಗ್ಗೆದು ಒಂದು ಬಗೆಯ ಒದ್ದಾಟವಾದರೆ, ಸಂಜೆಯದು ಇನ್ನೊಂದು ರೀತಿ. ಸಂಜೆ 3.45ಕ್ಕೆ ಕುಂದಾಪುರದಿಂದ ಬಸ್‌ ಇದೆ. ಅದು ತಪ್ಪಿದರೆ 4.45, 5.45ಕ್ಕೆ ಬಸ್‌ ಇದೆ. ಇಲ್ಲಿ ಮುಖ್ಯ ರಸ್ತೆಗೆ ಮಾತ್ರ ಬಸ್‌ ಬರುವುದರಿಂದ ಒಳ ರಸ್ತೆಯ ಬಹುತೇಕ ಊರುಗಳಿಂದ ವಿದ್ಯಾರ್ಥಿಗಳು 1 ಅಥವಾ 2 ಕಿ.ಮೀ. ನಡೆದೇ ಮನೆಗೆ ಹೋಗಬೇಕು. ನಮ್ಮ ಮನೆಯಿಂದ ಬಸ್‌ ನಿಲ್ದಾಣದವರೆಗೆ 2.5 ಕಿ.ಮೀ. ಇದೆ. ಅಷ್ಟು ದೂರದಿಂದ ನಡೆದುಕೊಂಡೇ ಹೋಗಿ ಬಸ್‌ನಲ್ಲಿಯೂ ಕುಂದಾಪುರದವರೆಗೆ ನಿಂತುಕೊಂಡು ಹೋಗಬೇಕು. ಸಂಜೆ ಕಾಲೇಜಿನಲ್ಲಿ ಕಾರ್ಯಕ್ರಮವಿದ್ದು, ತಡವಾದರೆ ಕೆಲವೊಮ್ಮೆ ರಾತ್ರಿ 7 ಗಂಟೆ, ಇನ್ನೊಮ್ಮೆ 8 ಗಂಟೆಗೂ ಮನೆಗೆ ಬಂದಿದ್ದು ಇದೆ ಅನ್ನುವುದು ಕಾಲೇಜು ವಿದ್ಯಾರ್ಥಿನಿ ರಾಜೇಶ್ವರಿ ಅಳಲು.

ಕುಂದಾಪುರದಿಂದ ಕೂಗಳತೆ ದೂರದ ಆನಗಳ್ಳಿಗೇ ಬಸ್ಸಿಲ್ಲ
ಕುಂದಾಪುರ: ನಗರದ ಕೂಗಳತೆಯ ದೂರದಲ್ಲಿರುವ ಆನಗಳ್ಳಿ ಗ್ರಾಮಕ್ಕೆ ಬಸ್ಸಿನ ವ್ಯವಸ್ಥೆಯೇ ಇಲ್ಲ ಎಂದು ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ. ವಿಕಾಸ್‌ ಹೆಗ್ಡೆ ಹೇಳಿದ್ದು, ಬಸ್‌ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿ ದ್ದಾರೆ. ಇವತ್ತು ಹಳ್ಳಿ ಪ್ರದೇಶಗಳಿಗೆ ಬಸ್ಸು ಸಂಪರ್ಕ ಇಲ್ಲದ ಗ್ರಾಮಗಳ ಬಗ್ಗೆ “ಉದಯವಾಣಿ’ ಪತ್ರಿಕೆ ಬೆಳಕು ಚೆಲ್ಲುತ್ತಿರುವ ಅಭಿಯಾನ ಅತ್ಯಂತ ಶ್ಲಾಘನೀಯ. ಆದರೆ ಇವತ್ತು ಹಳ್ಳಿ ಪ್ರದೇಶಗಳಂತೆ ಕುಂದಾಪುರ ಪಟ್ಟಣಕ್ಕೆ ತಾಗಿಕೊಂಡಿರುವ ಆನಗಳ್ಳಿ
ಗ್ರಾಮಕ್ಕೆ ಯಾವುದೇ ಬಸ್ಸಿನ ವ್ಯವಸ್ಥೆ ಇಲ್ಲ. ಆನಗಳ್ಳಿ ಗ್ರಾಮದಲ್ಲಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ ಮಾತ್ರ ಇದ್ದು, ಇಲ್ಲಿನ ವಿದ್ಯಾರ್ಥಿಗಳು ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಹಾಗೂ ಪದವಿ ಕಾಲೇಜಿಗೆ ಹೋಗಲು ದೂರದ ಬಸ್ರೂರು, ಕುಂದಾಪುರಕ್ಕೆ ನಡೆದೇ ಹೋಗಬೇಕು. ಸೂಕ್ತ ಬಸ್ಸಿನ ವ್ಯವಸ್ಥೆಗಾಗಿ ಇಲ್ಲಿನ ವಿದ್ಯಾರ್ಥಿಗಳ ಹಾಗೂ ಜನರದ್ದು ಬಹುವರ್ಷಗಳ ಬೇಡಿಕೆ. ಸಂಬಂಧಿತರು ಈ ಬಗ್ಗೆ ಶೀಘ್ರ ಗಮನ ಹರಿಸಿ ಆನಗಳ್ಳಿ ಗ್ರಾಮಕ್ಕೂ ಬಸ್‌ ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಎಂದು ವಿಕಾಸ್‌ ಹೆಗ್ಡೆ ಆಗ್ರಹಿಸಿದ್ದಾರೆ.

*ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next