ದುಬೈ: ಇಲ್ಲಿನ ಯುಎಇ ಬ್ರಾಹ್ಮಣ ಸಮಾಜದ ವಿಂಶತಿ ವರ್ಷದ 14ನೇ ಕಾರ್ಯಕ್ರಮದಲ್ಲಿ ಪ್ರಥಮ ರಾಜ್ಯ ಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನದ ಅಧ್ಯಕ್ಷ, ಹಿರಿಯ ಯಕ್ಷಗಾನ ಕಲಾವಿದ, ವಾಗ್ಮಿ, ನಿವೃತ್ತ ಪ್ರಾಚಾರ್ಯ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸðತ ಡಾ| ಎಂ. ಪ್ರಭಾಕರ ಜೋಶಿ ಹಾಗೂ ಧರ್ಮಪತ್ನಿ ಸುಚೇತಾ ಜೋಶಿಯವರನ್ನು ಇತ್ತೀಚಿಗೆ ದುಬೈಯಲ್ಲಿ “ಜೋಶಿಯವರ ಜತೆ’ಯಲ್ಲಿ ಎನ್ನುವ ವಿಶಿಷ್ಟ ಕಾರ್ಯಕ್ರಮದ ಮೂಲಕ ಅಭಿನಂದಿಸಿ ಸಮ್ಮಾನಿಸಲಾಯಿತು.
ಸಮಾರಂಭದಲ್ಲಿ ಸಮಾಜದ ಗೌರವ ಅಧ್ಯಕ್ಷ ಪುತ್ತಿಗೆ ವಾಸುದೇವ ಭಟ್, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಕರ್ನಾಟಕ ಅನಿವಾಸಿ ಭಾರತೀಯ ವೇದಿಕೆಯ ಅಧ್ಯಕ್ಷ ವಕ್ವಾಡಿ ಪ್ರವೀಣ್ ಶೆಟ್ಟಿ, ಸಮಾಜದ ಸಂಚಾಲಕರುಗಳಾದ ಸುಧಾಕರ ರಾವ್ ಪೇಜಾವರ ಹಾಗೂ ಕೃಷ್ಣಪ್ರಸಾದ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಶ್ವೇಶ್ವರ ಅಡಿಗ ಅವರು ಜೋಶಿಯವರ ಸಾಧನೆಯನ್ನು ವಿಶಿಷ್ಟವಾಗಿ ಗಾನ ನಮನದ ಜತೆಯಲ್ಲಿ ವಿವರಿಸಿದರು.
ಇದೇ ಸಂದರ್ಭದಲ್ಲಿ, ಕಳೆದ ಮೂರು ದಶಕಗಳಿಂದ ಇಲ್ಲಿ ತೆಂಕುತಿಟ್ಟಿನ ಯಕ್ಷಗಾನ ಅಭಿಯಾನದಲ್ಲಿ ಸದಾ ಸಕ್ರಿಯವಾಗಿರುವ ಯಕ್ಷಮಿತ್ರರು ಹಾಗೂ ದುಬೈ ಯಕ್ಷಗಾನ ಕೇಂದ್ರ ಕೂಡ ತಮ್ಮ ಗೌರವ ಪುರಸ್ಕಾರ ಸಲ್ಲಿಸಿದರು.
“ಯಕ್ಷಗಾನ ಅರ್ಥಗಾರಿಕೆಯಲ್ಲಿ ಪಾತ್ರ ಕಲ್ಪನೆ’ ಎಂಬ ವಿಷಯದ ಕುರಿತು ಮಾತನಾಡಿದ ಡಾ| ಜೋಶಿಯವರು ವಿಶೇಷತವಾಗಿ ತಾಳಮದ್ದಳೆ ಅರ್ಥದಾರಿಕೆಯಲ್ಲಿ ವೇಷ ಭೂಷಣ, ನಾಟ್ಯವಿಲ್ಲದೆ ಪಾತ್ರಕ್ಕೆ ಹೇಗೆ ಜೀವತುಂಬಬಹುದು ಎನ್ನುವ ವಿಚಾರದಲ್ಲಿ ಸುದೀರ್ಘವಾಗಿ ಉದಾಹರಣೆಯ ಮೂಲಕ ತಿಳಿಸಿದರು. ಹಲವು ರೀತಿಯ ಪಾತ್ರವನ್ನು ಸೂಚಿಸಿ, ಕಥೆಯ ನಡೆ, ಪರಕಾಯ ಪ್ರವೇಶ, ಪಾತ್ರದಲ್ಲಿ ತನ್ನನು ತಾನು ಹೇಗೆ ತೊಡಗಿಸಿಕೊಳ್ಳಬಹುದು ಎನ್ನುವುದನ್ನು ಅರ್ಥಪೂರ್ಣವಾಗಿ ವಿವರಿಸಿದರು. ಕೊನೆಯಲ್ಲಿ ನಡೆದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಹಲವು ಸ್ಥಳೀಯ ಯಕ್ಷಗಾನ ಕಲಾವಿದರು, ಆಸಕ್ತರು, ಪೋಷಕರು , ಅಭಿಮಾನಿಗಳು ಭಾಗವಹಿಸಿದ್ದು ಇದೊಂದು ಮೌಲ್ವಿಕ ಕಾರ್ಯಕ್ರಮವಾಗಿತ್ತು.
ವರದಿ: ಕೃಷ್ಣ ಪ್ರಸಾದ್ ರಾವ್, ದುಬೈ