ಬೆಂಗಳೂರು: “ಐದು ತಿಂಗಳ ಹಿಂದೆ ತಮ್ಮದೇ ಹುಟ್ಟುಹಬ್ಬದಲ್ಲಿ ಪ್ರೊ.ಯು. ಆರ್. ರಾವ್ ನಮ್ಮನ್ನು ಉದ್ದೇಶಿಸಿ ಮಾತ ನಾಡಿದ್ದರು. ಈಗ ಅದೇ ಸಭಾಂಗಣ ದಲ್ಲಿ ಅವರ ಪಾರ್ಥಿವ ಶರೀರದ ಮುಂದೆ ನಿಂತಾಗ, ಭಾಷಣದ ಸಾಲುಗಳು ಕಿವಿಯಲ್ಲಿ ಗುನುಗುತ್ತಿವೆ’ ಹಳೆಯ ಏರ್‌ಪೋರ್ಟ್ ರಸ್ತೆಯಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ ಸಭಾಂಗಣದಲ್ಲಿ ಸೋಮವಾರ ಮಧ್ಯಾಹ್ನ ಹಿರಿಯ ವಿಜ್ಞಾನಿಯ ಪಾರ್ಥಿವ ಶರೀರ ಬಂದಿಳಿದಾಗ, ಅಲ್ಲಿದ್ದ ಸಿಬ್ಬಂದಿ ಕಂಬನಿ ಮಿಡಿದಿದ್ದು ಹೀಗೆ.
ಐದು ತಿಂಗಳ ಹಿಂದೆ ಇದೇ ಇಸ್ರೋದಲ್ಲಿ “ಪ್ರೊ.ಯು.ಆರ್. ರಾವ್ ಪ್ರತಿಷ್ಠಾನ’ ಹಮ್ಮಿಕೊಂಡಿದ್ದ ಜನ್ಮದಿನಾಚರಣೆ
ಕಾರ್ಯಕ್ರಮದಲ್ಲಿ ಯುವ ವಿಜ್ಞಾನಿ ಗಳನ್ನು ಹುರಿದುಂಬಿಸುವ ರೀತಿ ಮಾತ ನಾಡಿದ್ದರು. ಅದು ಅವರ ಇಸ್ರೋ ಕೊನೆಯ ಭೇಟಿ ಎಂದು ಹೇಳಿದರು.
“ಬಹುಪಾಲು ತಮ್ಮ ವೃತ್ತಿಜೀವನವನ್ನು ರಾವ್, ಇಸ್ರೋದಲ್ಲಿ ಕಳೆದಿದ್ದಾರೆ. ಇಸ್ರೋ ಕಟ್ಟಡದ ಮೊದಲ ಮಹಡಿಯಲ್ಲೇ ಅವರ ಕೊಠಡಿ ಇತ್ತು. ಯಾವುದೇ ಮಹಡಿಗೆ ಹೋಗುವಾಗಲೂ ಯಾವತ್ತೂ ಲಿಫ್ಟ್ ಉಪಯೋಗಿಸಿದ್ದನ್ನು ನೋಡಿಲ್ಲ. ಮೊದಲು ಪೀಣ್ಯದ ಶೆಡ್‌ಗಳಲ್ಲಿ ಇಸ್ರೋ ಕೆಲಸ ಮಾಡುತ್ತಿತ್ತು. ಇಸ್ರೋ ಬೆಂಗಳೂರಿನಲ್ಲಿ ತಲೆಯೆತ್ತುವಲ್ಲಿ ಹಿರಿಯ ವಿಜ್ಞಾನಿಯ ಪಾತ್ರ ಮಹತ್ತರವಾದುದು’ ಎಂದು ಅವರು ಮೆಲುಕು ಹಾಕಿದರು. ಇಸ್ರೋದಲ್ಲಿ ಅತಿ ಹೆಚ್ಚು ಅವಧಿಗೆ ನಿರ್ದೇಶಕರಾಗಿದ್ದವರು ಪ್ರೊ. ರಾವ್. 11 ವರ್ಷ ನಿರ್ದೇಶಕ ಹಾಗೂ ಆರು ವರ್ಷ ಅಧ್ಯಕ್ಷರಾಗಿದ್ದರು.
ಐದು ತಿಂಗಳ ಹಿಂದಷ್ಟೇ ಅವರ ಹುಟ್ಟುಹಬ್ಬ ಆಚರಿಸಿದ್ದೆವು ಎಂದು ಮತ್ತೂಬ್ಬ ಯುವ ಸಿಬ್ಬಂದಿ ನೆನಪು ಮಾಡಿಕೊಂಡರು. ಇದಕ್ಕೂ ಮೊದಲು ಸರ್ಕಾರಿ ಗೌರವಗಳೊಂದಿಗೆ ಪ್ರೊ. ರಾವ್ ಅವರ ಪಾರ್ಥಿವ ಶರೀರವನ್ನು ಬರಮಾಡಿಕೊಳ್ಳಲಾಯಿತು. ಸ್ಥಳಕ್ಕೆ ಇಸ್ರೋ ಅಧ್ಯಕ್ಷ ಡಾ.ಕಿರಣ್‌ಕುಮಾರ್ ಮಾಜಿ ಅಧ್ಯಕ್ಷ ಡಾ.ರಾಧಾಕೃಷ್ಣನ್, ಮೇಯರ್ ಜಿ. ಪದ್ಮಾವತಿ ಮತ್ತಿತರರು ಭೇಟಿ ನೀಡಿ, ಅಂತಿಮ ನಮನ ಸಲ್ಲಿಸಿದರು.