ಎರ್ನಾಕುಲಂ: ಕೇರಳದ ಸೇಂಟ್ ಮೇರಿಸ್ ಬೆಸಿಲಿಕಾದಲ್ಲಿ ಕ್ರಿಸ್ಮಸ್ ಮುನ್ನಾದಿನ ಪ್ರಾರ್ಥನೆ ವೇಳೆ ವಿವಾದವು ಭುಗಿಲೆದ್ದು ಎರಡು ಗುಂಪುಗಳ ನಡುವೆ ಘರ್ಷಣೆಗೆ ಕಾರಣವಾಯಿತು.
ಒಂದು ಬಣವು ಬಲಿಪೀಠದ ಮೇಲೆ ದಾಳಿ ಮಾಡಿ ಬಲಿಪೀಠವನ್ನು ಮುರಿದು ಹಾಕಿದೆ. ಸಂಘರ್ಷ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಚರ್ಚ್ ನೊಳಗೆ ನುಗ್ಗಿ ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದರು.
ಎಲ್ಲರೂ ಚರ್ಚ್‌ನಿಂದ ಹೊರಹೋಗುವಂತೆ ಪೊಲೀಸರು ಸೂಚನೆ ನೀಡಿದರು. ಆದರೆ ಅನೇಕರು ಚರ್ಚ್ ಬಿಟ್ಟು ಕದಲುವುದಿಲ್ಲ ಎಂಬ ನಿಲುವು ಹೊಂದಿದ್ದರು. ಧಾರ್ಮಿಕ ವಿಧಿಗಳ ವೇಳೆ ಏಕಕಾಲದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಆಡಳಿತಾಧಿಕಾರಿ ಅಂತೋನಿ ಪೂತವೇಲಿಲ್ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಭಕ್ತರ ಗುಂಪೊಂದು ತಕರಾರು ತೆಗೆದಿದ್ದು, ಪ್ರತಿಭಟನೆಗೆ ಕಾರಣವಾಯಿತು. ನಂತರ ಕೆಲವು ಪ್ರತಿಭಟನಾಕಾರರು ಸಾಮೂಹಿಕ ಪ್ರಾರ್ಥನೆಯ ಸಮಯದಲ್ಲಿ ಚರ್ಚ್‌ನ ಮೈಕ್ರೊಫೋನ್ ಮತ್ತು ದೀಪಗಳನ್ನು ಆಫ್ ಮಾಡಿದರು. ಎರಡು ಬಣಗಳು ಹಲವು ಬಾರಿ ಹೊಡೆದಾಡಿಕೊಂಡಿದ್ದು, ಬೆಸಿಲಿಕಾದಲ್ಲಿ ಪೊಲೀಸ್ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ.
ಎರಡು ಗುಂಪುಗಳಾಗಿ ಸಂಘಟಿತರಾದ ಭಕ್ತರನ್ನು ಒಮ್ಮತದ ಮೂಲಕ ಹೊರಹಾಕಲು ಪೊಲೀಸರು ಪ್ರಯತ್ನಿಸಿದರು. ಮಾಸ್ ಸಮಯದಲ್ಲಿ, ಭಕ್ತರ ಒಂದು ವಿಭಾಗ ಬಂದು ಮೈಕ್ರೊಫೋನ್ ತೆಗೆದುಕೊಂಡು ಹೋದರೆ, ಇನ್ನೊಂದು ಗುಂಪಿನವರು ಅಗತ್ಯ ಸೌಲಭ್ಯ ಕಲ್ಪಿಸಿದ್ದರು. ಒಂದು ವಿಭಾಗವು ಲೈಟ್ ಆಫ್ ಮಾಡುವ ಮೂಲಕ ಪ್ರತಿಭಟನೆಯನ್ನು ತೀವ್ರಗೊಳಿಸಿದರೆ, ಇನ್ನೊಂದು ವಿಭಾಗವು ಮೊಬೈಲ್ ದೀಪಗಳನ್ನು ಆನ್ ಮಾಡುವ ಮೂಲಕ ಸಾಮೂಹಿಕವಾಗಿ ಪ್ರಾರ್ಥನೆ ನಡೆಸಿತು.
ಭಕ್ತರಿಗೆ ಪವಿತ್ರ ಸ್ಥಳವಾಗಿ ಕಾಣುವ ಬಲಿಪೀಠದ ಮುಂದೆ ಪ್ರತಿಭಟನೆ ನಡೆಸಲಾಗಿದೆ. ಪವಿತ್ರ ಗ್ರಂಥಗಳನ್ನು ಎಳೆದು ಮೈಕ್ ಸ್ವಿಚ್ ಆಫ್ ಮಾಡುವ ಪರಿಸ್ಥಿತಿಯೂ ಉಂಟಾಗಿದೆ. ಇದನ್ನು ಯಾವುದೇ ರೀತಿಯಲ್ಲಿ ಒಪ್ಪಲು ಸಾಧ್ಯವಿಲ್ಲ ಎಂದು ಕ್ರಿಶ್ಚಿಯನ್ ಧಾರ್ಮಿಕ ಮುಖಂಡರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಧರ್ಮಗುರುಗಳು ಮತ್ತು ಭಕ್ತರು ಎರಡು ಕಡೆ ಸಂಘಟಿತರಾಗಿ ಸಂಘರ್ಷ ಸೃಷ್ಟಿಸುತ್ತಿದ್ದಾರೆ ಎಂದು ಕೇರಳದ ಹಲವು ಮಾಧ್ಯಮಗಳು ವರದಿ ಮಾಡಿವೆ.