ಬೆಂಗಳೂರು: ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಂಧ್ರಪ್ರದೇಶ ಮೂಲದ ವಿದ್ಯಾರ್ಥಿ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ಮಡಿವಾಳ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.
ಆಂಧ್ರಪ್ರದೇಶ ಮೂಲದ ಕಾರ್ತಿಕ್ (23) ಹಾಗೂ ಭಗಿರಥ ರೆಡ್ಡಿ(17) ಮೃತರು.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಬೊಮ್ಮನಹಳ್ಳ ಮೂಲದ ಕಾರ್ತಿಕ್ ಬಿಇ ಪದವೀಧರನಾಗಿದ್ದು, ಕೋರಮಂಗಲದ ಪಿಜಿಯಲ್ಲಿ ವಾಸವಾಗಿದ್ದ. ಸಾಫ್ಟ್ವೇರ್ ಕೋರ್ಸ್ ತರಬೇತಿ ಪಡೆಯುತ್ತಿದ್ದ. ಇನ್ನು ಭಗಿರಥ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ವನಾಗಿದ್ದು, ರೂಪೇನಾ ಅಗ್ರಹಾರದಲ್ಲಿ ವಾಸವಾಗಿದ್ದ. ಕೋರಮಂಗಲದ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಮೃತರಿಬ್ಬರು ಸ್ನೇಹಿತರು ಎಂದು ಸಂಚಾರ ಪೊಲೀಸರು ಹೇಳಿದರು.
ಮಂಗಳವಾರ ಮುಂಜಾನೆ 4.40ರ ಸುಮಾರಿಗೆ ಕಾರ್ತಿಕ್ ಮತ್ತು ಭಗಿರಥ ರೆಡ್ಡಿ ಕಾರಿನಲ್ಲಿ ಬೆಂಗಳೂರು ಕಡೆಯಿಂದ ಹೊಸೂರು ಮುಖ್ಯ ರಸ್ತೆ ರೂಪೇನ ಅಗ್ರಹಾರ ಕಡೆ ಅತೀವೇಗ ಮತ್ತು ಅಜಾಗರೂಕತೆಯಿಂದ ಹೋಗುತ್ತಿದ್ದರು. ಈ ವೇಳೆ ಸಿಲ್ಕ್ ಬೋರ್ಡ್ ಆಫ್ ರ್‍ಯಾಂಪ್ ಹತ್ತಿರ ಚಾಲಕ ಕಾರ್ತಿಕ್ ಕಾರಿನ ನಿಯಂತ್ರಣ ಕಳೆದು ಕೊಂಡು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ಎದುರು ಬರುತ್ತಿದ್ದ ತಮಿಳುನಾಡು ಬಸ್‌ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಇಬ್ಬರಿಗೂ ತಲೆ ಹಾಗೂ ದೇಹದ ಇತರೆ ಭಾಗಗಳ ಮೇಲೆ ಗಂಭೀರ ಪೆಟ್ಟು ಬಿದ್ದಿದೆ. ಕೂಡಲೇ ಸ್ಥಳೀಯರು ಇಬ್ಬರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ. ದುರ್ಘಟನೆಗೆ ಚಾಲಕ ಕಾರ್ತಿಕ್‌ನ ಅತೀವೇಗ ಮತ್ತು ಅಜಾಗರೂಕತೆ ಚಾಲನೆಯೇ ಕಾರಣ ಎಂಬುದು ಗೊತ್ತಾಗಿದೆ. ತನಿಖೆ ಮುಂದುವರಿದಿದೆ ಎಂದು ಸಂಚಾರ ಠಾಣೆ ಪೊಲೀಸರು ಹೇಳಿದರು.
ಮಡಿವಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.