Advertisement

ಜಿಂಗಿ ಮೀನಿಗಾಗಿ ನೀರಿಗೆ ವಿಷಕಾರಿ ಪೌಡರ್‌ ಬೆರೆಸಿದ ಇಬ್ಬರ ಸೆರೆ

02:34 PM Aug 02, 2017 | |

ಆಳಂದ: ಪಟ್ಟಣ ಸೇರಿದಂತೆ ಕೇಂದ್ರೀಯ ವಿಶ್ವ ವಿದ್ಯಾಲಯ, ಇನ್ನಿತರ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಏಕೈಕ ಮೂಲವಾದ ಅಮರ್ಜಾ ಅಣೆಕಟ್ಟೆಯ ನೀರಿನಲ್ಲಿ ಹಲವು ದಿನಗಳಿಂದ ವಿಷಕಾರಿ ಪೌಡರ್‌ (ಔಷಧ) ಬಳಸಿ ಜಿಂಗಿ ಮೀನು ಪಡೆಯುತ್ತಿದ್ದ ದೂರಿನ ಮೇಲೆ ಎಂಟು ಮಂದಿ ಮೇಲೆ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ವಿಷಕಾರಿ ಔಷಧ ಸಮೇತ ಇಬ್ಬರು ಆರೋಪಿಗಳನ್ನು ಬಂಧಿಸಿ ಇನ್ನುಳಿದ ಆರೋಪಿಗಳ ಬಂಧನಕ್ಕೆ ಜಾಲಬೀಸಿದ್ದಾರೆ. ರಾಜಕುಮಾರ ಹಣಮಂತ ಕ್ಷೇತ್ರಿ, ಶಿವಾಜಿ ರಾಮು ರಾಠೊಡ ಬಂಧಿತ ಆರೋಪಿಗಳಾಗಿದ್ದಾರೆ. ಮಹೇಶ ಚಂದ್ರಕಾಂತ ಕ್ಷೇತ್ರಿ, ವಿಠಲ ಗುರುದಾಳೆ ಕ್ಷೇತ್ರಿ, ಅಭಿಮಾನ ಹಣಮಂತ ಬಬಲಾದ, ರಾಮಚಂದ್ರ ಹಣಮಂತ ಬಬಲಾದ, ಕೃಷ್ಣಾ ತಾನಾಜಿ ಕ್ಷೇತ್ರಿ, ರಮೇಶ ಅಮೃತ ಕ್ಷೇತ್ರಿ ಸೇರಿ ಎಂಟು ಮಂದಿ ಮೇಲೆ ಪ್ರಕರಣ ದಾಖಲಾಗಿದೆ.

ಈ ಕುರಿತು ಪೊಲೀಸ್‌ ಠಾಣೆಗೆ ದೂರು ನೀಡಿದ ಅಣ್ಣೆಕಟ್ಟೆ ಕಾವಲುಗಾರ ಸೈಫಾನ ಮೌಲಾ ಪಟೇಲ ಮಾಹಿತಿ ನೀಡಿ, ಅಣೆಕಟ್ಟೆಯಲ್ಲಿ ನೀರು ಸಂಗ್ರಹಗೊಳ್ಳುತ್ತಿದ್ದು, ಇದರಿಂದ ಈ ಭಾಗದ ಆಳಂದ, ಜಿಡಗಾ, ಕಡಗಂಚಿ ಹತ್ತಿರದ ಕೇಂದ್ರೀಯ ವಿಶ್ವ ವಿದ್ಯಾಲಯಕ್ಕೆ ಕುಡಿಯುವ ನೀರು ಪೂರೈಕೆ ಆಗುತ್ತಿದೆ. ಎಂದಿನಂತೆ ಅಣೆಕಟ್ಟೆಗೆ ಕರ್ತವ್ಯಕ್ಕೆ ಹೋದಾಗ ಎಂಟು ಜನರು ಸೇರಿ ಬೆಳಗಿನ ಜಾವ ನೀರಿನಲ್ಲಿರುವ ಜಿಂಗಿ ಮೀನುಗಳನ್ನು ಹಿಡಿಯಲು ನೀರಿನಲ್ಲಿ ವಿಷಕಾರಕ ಔಷಧ ಹಾಕುತ್ತಿದ್ದುದನ್ನು ಗಮನಿಸಿದೆ. ಆಗ ನಾನು ಮತ್ತು ಇನ್ನೊಬ್ಬ ಕಾವಲಗಾರ ಮಲ್ಲಿನಾಥ ಸೇರಿ ಅವರನ್ನು ಬೆನ್ನಟ್ಟಿ
ರಾಜಕುಮಾರ, ಶಿವಾಜಿ ಎನ್ನುವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದೇವೆ ಎಂದು ತಿಳಿಸಿದ್ದಾರೆ.

ಇನ್ನುಳಿದ 6 ಮಂದಿ ಪರಾರಿಯಾಗಿದ್ದಾರೆ. ಕುಡಿಯುವ ನೀರಿನಲ್ಲಿ ಜಂಗಿ ಮೀನುಗಳನ್ನು ಹಿಡಿಯಲು ವಿಷಕಾರಕ ಔಷಧವನ್ನು ನೀರಿನಲ್ಲಿ ಬೆರೆಸಿ, ನೀರು ಕಲುಷಿತಗೊಳಿಸಿ ಜನರಿಗೆ ಅಪಾಯವನ್ನುಂಟು ಮಾಡಿದ ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಕಾವಲುಗಾರ ಸೈಪಾನ್‌ ಪಟೇಲ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇನ್ನುಳಿದ ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.

ಔಷಧ ಏಕೆ ಬಳಸುತ್ತಾರೆ?
ನೀರಿನಲ್ಲಿ ವಿಷಕಾರಿ ಔಷಧ ಬೆರೆಸಿದಾಗ ಔಷಧ ತಿಂದು ಮೀನುಗಳ ಮೃತಪಟ್ಟು ದಡಕ್ಕೆ ಬಂದ ಮೇಲೆ ಅವುಗಳನ್ನು ಸಂಗ್ರಹಿಸಿ ಮಾರಾಟ ಮಾಡಲಾಗುತ್ತಿದೆ. ಈ ಜಿಂಗಿ ಮೀನು  ಕೆಜಿಗೆ 1200 ರೂ. ನಂತೆ ಮಾರಾಟ ಮಾಡಲಾಗುತ್ತಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next