Advertisement

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

01:51 AM Nov 25, 2024 | Team Udayavani |

ಉಡುಪಿ: ಕರಾವಳಿಯ ಹಿನ್ನೀರು ಪ್ರದೇಶದ ಮೀನುಗಾರರಿಗೆ ಉಪ ಕಸುಬಾಗಿ ಆಶ್ರಯ ನೀಡುತ್ತಿದ್ದ ಪಂಜರ ಮೀನು ಕೃಷಿಗೆ ಸರಕಾರ ಎಳ್ಳುನೀರು ಬಿಟ್ಟಿದೆ.
ಈಗ ಸರಕಾರ ಪಂಜರ ಮೀನು ಕೃಷಿ ಯೋಜನೆಯನ್ನೇ ಸ್ಥಗಿತಗೊಳಿಸಿದೆ. ವರ್ಷದ ಹಿಂದೆ ಅರ್ಜಿ ಸಲ್ಲಿಸಿದ ಸಾವಿರಾರು ಮೀನುಗಾರರು ಯೋಜನೆ ಇಂದು ಅಥವಾ ನಾಳೆ ಆರಂಭವಾಗಬಹುದು ಎಂಬ ಆಸೆಯಲ್ಲೇ ದಿನಗಳೆಯುತ್ತಿದ್ದಾರೆ. ಆದರೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.

Advertisement

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ನದಿಪಾತ್ರದ ಮೀನುಗಾರರು ಪಂಜರ ಕೃಷಿಯ ಮೂಲಕ  ಸ್ವ ಉದ್ಯೋಗ ಆರಂಭಿಸಿ ಯಶಸ್ಸನ್ನು ಕಂಡಿದ್ದರು. ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭದಾಯಕವಾಗಿರುವ ಮೀನು ಸಾಕಾಣಿಕೆ ಇದಾಗಿದೆ. ನಿರ್ವಹಣೆ ಚೆನ್ನಾಗಿ ಮಾಡಿದಲ್ಲಿ ಉತ್ತಮ ಇಳುವರಿಯನ್ನು ಪಡೆಯಬಹುದಾಗಿದೆ. ಉಪ್ಪು ನೀರಿನ ಪಂಜರ ಮೀನು ಕೃಷಿಯಲ್ಲಿ ಬಲಿತ ಮೀನುಗಳಿಗೆ ಬೇಡಿಕೆಯೂ ಚೆನ್ನಾಗಿದೆ. ಆದರೆ ಪಂಜರ ಮೀನು ಕೃಷಿಗೆ ಎಲ್ಲೆಡೆ ಬೇಡಿಕೆ ಹೆಚ್ಚುತ್ತಿದ್ದಂತೆ ಸರಕಾರದ ನಿಲುವು ಬದಲಾಯಿತು. ಪ್ರೋತ್ಸಾಹಿಸಬೇಕಿದ್ದ ಸರಕಾರವೇ ನಿರೀಕ್ಷೆಗೂ ಮೀರಿ ಅರ್ಜಿ ಬರುತ್ತಿದೆ ಎನ್ನುವ ಕಾರಣದಿಂದ ಯೋಜನೆಗೆ ತಿಲಾಂಜಲಿ ಹಾಡಿದೆ.

ಕ್ಯಾರಿಯಿಂಗ್‌ ಕೆಪಾಟಿಸಿ ಸರ್ವೇ
ಪಂಜರ ಮೀನು ಕೃಷಿಗೆ ಅನುಮತಿ ನೀಡುವ ಪೂರ್ವದಲ್ಲಿ ಅಳಿವೆ (ಬಂದರು ಪ್ರದೇಶ/ ನದಿಯು ಸಮುದ್ರ ಸೇರುವ ಜಾಗದ ನದಿ ಭಾಗ), ನದಿ ಪಾತ್ರಗಳಲ್ಲಿ ಎಷ್ಟು ಮೀನುಗಾರರಿಗೆ ಅವಕಾಶ ನೀಡಬಹುದು, ಯಾವ ಅಳತೆಯ ಪಂಜರ ಅಳವಡಿಸಬೇಕು, ಎಷ್ಟು ಭಾರ ಇರಬೇಕು ಎಂಬಿತ್ಯಾದಿ ವಿವರಗಳನ್ನು ಒಳಗೊಂಡ ಕ್ಯಾರಿ ಯಿಂಗ್‌ ಕೆಪಾಸಿಟಿ ಸರ್ವೇ( ಮೀನು ಸಾಕಾಣಿಕೆ ಪಂಜರ ಇರಿಸಬಹುದಾದ ಸಾಮರ್ಥ್ಯ ಸಮೀಕ್ಷೆ) ಮಾಡಬೇಕು. ಕಳೆದ ಒಂದು ವರ್ಷದಿಂದ ಈ ಕಾರ್ಯ ಆಗಿಯೇ ಇಲ್ಲ.

ಸರ್ವೇ ಮಾಡುವುದ್ಯಾರು?
ಪಂಜರ ಕೃಷಿಗೆ ಅಗತ್ಯಕ್ಕಿಂತ ಹಚ್ಚು ಅನುಮತಿ ನೀಡಿದಲ್ಲಿ ನೀರಿನ ಗುಣಮಟ್ಟ ಕೆಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಕ್ಯಾರಿಯಿಂಗ್‌ ಕೆಪಾಸಿಟಿ ಸರ್ವೇ ಮಾಡಬೇಕು. ಈ ಸರ್ವೇಯನ್ನು ಮೀನುಗಾರಿಕೆ ಇಲಾಖೆ ಮಾಡುವುದಿಲ್ಲ. ಕೇಂದ್ರ ಸರಕಾರದ ಅಧೀನದಲ್ಲಿರುವ ಸೆಂಟ್ರಲ್‌ ಮರೈನ್‌ ಫಿಶರೀಸ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ (ಸಿಎಂಎಫ್‌ಆರ್‌ಐ) ಈ ಸರ್ವೇ ಕಾರ್ಯ ನಡೆಸಬೇಕು. ಮೀನುಗಾರಿಕೆ ಇಲಾಖೆಯಿಂದ ಈಗಾಗಲೇ ಪ್ರಸ್ತಾವನೆ ಸಿಎಂಎಫ್‌ಆರ್‌ಐಗೆ ಹೋಗಿದೆ. ಇದರ ವೆಚ್ಚವನ್ನು ರಾಜ್ಯ ಸರಕಾರ ಭರಿಸಬೇಕು. ಇದಕ್ಕೆ ಅಗತ್ಯ ಅನುದಾನ ಲಭ್ಯವಿಲ್ಲ ಎಂಬ ಮಾಹಿತಿ ಇದೆ. ಹೀಗಾಗಿ ಇನ್ನೂ ಸರ್ವೇ ನಡೆದಿಲ್ಲ, ವರದಿಯೂ ಬಂದಿಲ್ಲ.

ಸರಕಾರದಿಂದ ಪ್ರೋತ್ಸಾಹ ಧನ:
ಪಂಜರ ಮೀನು ಕೃಷಿಗೆ ಮೀನುಗಾರಿಕೆ ಇಲಾಖೆಯಿಂದ ಅರ್ಹ ಫಲಾನುಭವಿಗಳಿಗೆ ಮತ್ಸéಸಂಪದ ಯೋಜನೆಯಡಿ 3 ಲಕ್ಷ ರೂ.ಗಳ ಘಟಕ ಸ್ಥಾಪನೆಗೆ ಮಹಿಳೆಯರಿಗೆ ಶೇ. 60ರಷ್ಟು ಹಾಗೂ ಪುರುಷರಿಗೆ ಶೇ. 40ರಷ್ಟು ಸಬ್ಸಿಡಿ, ಅನಂತರ ಪ್ರತೀ ವರ್ಷ ಮೀನು ಸಾಕಾಣಿಕೆಗೆ 20 ಸಾವಿರ ರೂ.ಗಳ ವರೆಗೆ ಪ್ರೋತ್ಸಾಹಧನ ನೀಡಲಾಗುತ್ತದೆ.

Advertisement

ಪಂಜರ ಮೀನು ಕೃಷಿಯನ್ನು 2008ರಲ್ಲಿ ಬೈಂದೂರು ತಾಲೂಕಿನ ಉಪ್ಪುಂದದಲ್ಲಿ ಮೊದಲ ಬಾರಿಗೆ ಅನುಷ್ಠಾನಗೊಳಿಸಲಾಗಿತ್ತು. ಕರ್ನಾಟಕ ಮತ್ತು ಗುಜರಾತ್‌, ಆಂಧ್ರ, ಕೇರಳ, ಒಡಿಶಾ, ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಇದು ಹೆಚ್ಚು ಪ್ರಚಲಿತವಾಗಿದೆ. ಸರಕಾರದ ಸಬ್ಸಿಡಿ ಇದೆ ಎನ್ನುವ ಕಾರಣಕ್ಕೆ ಕರ್ನಾಟಕದಲ್ಲಿ ಅಧಿಕ ಅರ್ಜಿಗಳು ಬರುತ್ತಿವೆ. ಆದರೆ ಇಲಾಖೆ ಅದನ್ನು ಸರಿಯಾಗಿ ನಿರ್ವಹಣೆ ಮಾಡದೆ ಇರುವುದರಿಂದ ಯೋಜನೆ ಸ್ಥಗಿತವಾಗಿದೆ. ಈಗಾಗಲೇ ಕೃಷಿ ಮಾಡುತ್ತಿರುವವರಿಗೂ ಮೀನುಮರಿ ಖರೀದಿಗೆ ಸರಕಾರ ಪ್ರೋತ್ಸಾಹಧನ ನೀಡುತ್ತಿಲ್ಲ.

ಯಾವ ಮೀನುಗಳ ಸಾಕಾಣಿಕೆ?
ಪಂಜರ ಮೀನು ಕೃಷಿಯಲ್ಲಿ ಮುಖ್ಯವಾಗಿ ಕುರುಡಿ, ಕೆಂಬೇರಿ ಹಾಗೂ ಕೋಬಿಯಾ, ಸೀ-ಬಾಸ್‌(ಮುಡಾವು), ರೆಡ್‌ಸ್ನಾಪರ್‌ (ಕೇವಜ್‌), ಪಲ್ಸ್‌ ಸ್ಪಾಟ್‌ (ಇರ್ಪೆ- ಕರಿಮೀನು) ಮೊದಲಾದ ಮೀನುಗಳನ್ನು ಸಾಕಲಾಗುತ್ತದೆ. 12ರಿಂದ 18 ತಿಂಗಳ ಮೀನುಕೃಷಿ ಇದಾಗಿದೆ. ಸ್ಥಳೀಯ ಹಾಗೂ ಹೊರರಾಜ್ಯದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ ಪಂಜರ ಮೀನು ಕೃಷಿಕರು.

ಸಬ್ಸಿಡಿ ಇದೆ ಎಂಬ ಕಾರಣಕ್ಕೆ ಅರ್ಜಿಗಳು ಸಾಕಷ್ಟು ಬಂದಿವೆ. ಅಲ್ಲದೆ ಸರ್ವೇ ಆಗದೆ ಇರುವುದರಿಂದ ತಾತ್ಕಾಲಿಕವಾಗಿ ಯೋಜನೆಯನ್ನು ಸ್ಥಗಿತ ಮಾಡಿದ್ದೇವೆ. ಸರ್ವೇಗೆ ಪತ್ರ ಬರೆಯಲಾಗಿದೆ. ಸರ್ವೇ ವರದಿ ಬಂದ ಮೇಲೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಹಣಕಾಸಿ ಲಭ್ಯತೆ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. -ವಿವೇಕ್‌, ಜಂಟಿ ನಿರ್ದೇಶಕರು, ಮೀನುಗಾರಿಕೆ ಇಲಾಖೆ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next