ಬೆಂಗಳೂರು: ತಡರಾತ್ರಿ ಮನೆಗೆ ನಡೆದು ಹೋಗುತ್ತಿದ್ದ ದಂಪತಿ ಅಡ್ಡಗಟ್ಟಿದ ಹೊಯ್ಸಳ ಸಿಬ್ಬಂದಿ ಅವರನ್ನು ಸುಲಿಗೆ ಮಾಡಿದಲ್ಲದೆ, ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಈ ಸಂಬಂಧ ಸಂಪಿಗೆಹಳ್ಳಿ ಠಾಣೆಯ ಹೊಯ್ಸಳ ಸಿಬ್ಬಂದಿ ಹೆಡ್‌ಕಾನ್‌ಸ್ಟೇಬಲ್ ರಾಜೇಶ್ ಮತ್ತು ಕಾನ್‌ಸ್ಟೇಬಲ್ ನಾಗೇಶ್‌ನನ್ನು ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಕಾರ್ತಿಕ್ ಪಾತ್ರಿ ಡಿ.9ರಂದು ಟ್ವೀಟರ್ ಮೂಲಕ ದೂರು ನೀಡಿರುವುದನ್ನು ಪರಿಗಣಿಸಿ ಇಬ್ಬರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗಿದೆ.
ಕಾರ್ತಿಕ್ ಎಂಬವರು ಕುಟುಂಬದ ಜತೆ ಮಾನ್ಯತಾ ಟೆಕ್‌ಪಾರ್ಕ್ ಬಳಿ ವಾಸವಾಗಿದ್ದಾರೆ. ಡಿ.8ರಂದು ತಡರಾತ್ರಿ 12.30ರ ಸುಮಾರಿಗೆ ಸ್ನೇಹಿತರ ಜನ್ಮದಿನ ಕಾರ್ಯಕ್ರಮ ಮುಗಿಸಿ ಕೊಂಡು ಕೇಕ್ ಬಾಕ್ಸ್ ತೆಗೆದುಕೊಂಡು ಮನೆಗೆ ಬರುತ್ತಿದ್ದರು. ಆಗ ಮನೆ ಕೂಗಳತೆ ದೂರದಲ್ಲಿ ಬಂದ ಹೊಯ್ಸಳ ಸಿಬ್ಬಂದಿ, ಯಾರು ಎಂದು ಪ್ರಶ್ನಿಸಿ, ಗುರುತಿನ ಚೀಟಿಗಳನ್ನು ತೋರಿಸುವಂತೆ ಕೇಳಿದ್ದಾರೆ. ಅದ್ದರಿಂದ ಅಚ್ಚರಿಗೊಂಡ ದಂಪತಿ ಕಾರಣ ಕೇಳಿದ್ದಾರೆ. ಅಷ್ಟಕ್ಕೆ ಕೋಪಗೊಂಡ ಪೊಲೀಸರು, ತಡರಾತ್ರಿ ಸಂಚರಿಸುವಂತಿಲ್ಲ ಎಂದು ಬೆದರಿಸಿದ್ದಾರೆ. ಬಳಿಕ ಆಧಾರ್ ಕಾರ್ಡ್ ತೋರಿಸಿದ ಬಳಿಕ, ದಂಪತಿ ಮೊಬೈಲ್ ಫೋನ್ ಕಸಿದುಕೊಂಡು, ಕೆಲಸದ ಸ್ಥಳ, ಪೋಷಕರ ವಿವರಗಳು ಮತ್ತು ಇತರೆ ವಿಚಾರಗಳ ಮಾಹಿತಿ ಪಡೆದುಕೊಂಡು. ಇನ್ನಷ್ಟು ಪ್ರಶ್ನೆಗಳನ್ನು ಕೇಳಲು ಆರಂಭಿಸಿದ್ದಾರೆ ಎಂದು ಕಾರ್ತಿಕ್ ಸಾಮಾಜಿಕ ಜಾಲತಾಣ ಟ್ವೀಟರ್‌ನಲ್ಲಿ ಆರೋಪಿಸಿದ್ದಾರೆ.
ಪೊಲೀಸರ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದಂತೆ, ಒಬ್ಬ ಸಿಬ್ಬಂದಿ ರಸೀದಿ ಪುಸ್ತಕ ತೆಗೆದು, ಹೆಸರು ಮತ್ತು ಆಧಾರ್ ಕಾರ್ಡ್ ಉಲ್ಲೇಖೀಸಿ ದಂಡ ವಿಧಿಸಲು ಮುಂದಾದರು. ಯಾಕೆ ಈ ಚಲನ್ ಬರೆಯುತ್ತಿದ್ದಿರಾ? ಎಂದಾಗ, ರಾತ್ರಿ 11 ಗಂಟೆ ಮೇಲೆ ರಸ್ತೆಯಲ್ಲಿ ಓಡಾಡಲು ಅವಕಾಶವಿಲ್ಲ ಎಂಬುದು ನಿಮಗೆ ಗೊತ್ತಿಲ್ಲವೇ? ಎಂದು ಸಿಬ್ಬಂದಿ ಗದರಿದ್ದಾರೆ. ‘ಇಂತಹ ನಿಯಮದ ಬಗ್ಗೆ ನಮಗೆ ಗೊತ್ತಿಲ್ಲ.’ ಎಂದಿದ್ದು ಬಳಿಕ ಪೊಲೀಸರ ಜತೆ ವಾಗ್ವಾದ ನಡೆದಿದೆ. ‘ನಿಯಮದ ಬಗ್ಗೆ ಸರಿಯಾದ ಮಾಹಿತಿ ಇಲ್ಲವಾದರಿಂದ ಕ್ಷಮೆ ಕೇಳಿದೆವು. ತಡರಾತ್ರಿ ಈ ರೀತಿ ಮನೆಯಿಂದ ಹೊರಗಡೆ ಬರುವುದಿಲ್ಲ ಎಂದು ಭರವಸೆ ನೀಡಿದೆವು’ ಆದರೆ, ಪೊಲೀಸ್ ಸಿಬ್ಬಂದಿ ಮತ್ತೆ ಮಾಡಿದ ತಪ್ಪಿಗೆ ಮೂರು ಸಾವಿರ ರೂ.ದಂಡ ನೀಡಬೇಕೆಂದು ಬೇಡಿಕೆಯಿಟ್ಟರು. ಹಣವಿಲ್ಲ ಎಂದರೂ ಮನೆಗೆ ಹೋಗಲು ಬಿಡದೆ ಪೀಡಿಸಿದರು. ಬಂಧಿಸುವುದಾಗಿ ಮತ್ತೆ ಬೆದರಿಕೆ ಹಾಕಿದರು. ಅನಂತರ ನಮ್ಮ ಫೋಟೋಗಳನ್ನು ಚಿತ್ರೀಕರಿಸಿ ಅಪರಾಧಿಗಳಂತೆ ಬಿಂಬಿಸುವುದಾಗಿ ಹೆದರಿಸಿದರು.
ಅದರಿಂದ ಗಾಬರಿಗೊಂಡ ಪತ್ನಿ ಕಣ್ಣೀರು ಹಾಕಿದರು. ಅದರಿಂದ ಸ್ವಲ್ಪ ವಿಚಲಿತರಾದ ಪೊಲೀಸರು, ದಂಡ ವಿಧಿಸಲಾಗುತ್ತದೆ ಬೆದರಿಕೆ ತಂತ್ರ ಬದಲಿಸಿದರು ಎಂದು ಟ್ವೀಟ್ ನಲ್ಲಿ ಉಲ್ಲೇಖೀಸಿದ್ದಾರೆ. ಆಗ ಹೊಯ್ಸಳ ವಾಹನದಲ್ಲಿದ್ದ ಸಿಬ್ಬಂದಿ ತನ್ನನ್ನು ಪಕ್ಕಕ್ಕೆ ಕರೆದೊಯ್ದು ಒಂದಿಷ್ಟು ಹಣ ಕೊಡುವಂತೆ ಸಲಹೆ ನೀಡಿದರು. ಇಡೀ ಘಟನೆಯಿಂದ ನಾವುಗಳು ಮಾನಸಿಕವಾಗಿ ನೊಂದಿದ್ದೆವು ಎಂದು ತಿಳಿಸಿದ್ದಾರೆ.
ಕ್ಯೂಆರ್ ಕೋಡ್ ಮೂಲಕ ಪಾವತಿ: ಸಾಕಷ್ಟು ಬೇಡಿಕೊಂಡರು ಬಿಡದ ಸಿಬ್ಬಂದಿ ಹಣಕ್ಕಾಗಿ ಪಟ್ಟು ಹಿಡಿದರು. ಕೊನೆಗೆ ಕಾರ್ತಿಕ್ ಒಂದು ಸಾವಿರ ರೂ. ಕೊಡಲು ಮುಂದಾದರು. ಆಗ ಸಿಬ್ಬಂದಿ ಪೇಟಿಯಂನ ಕ್ಯೂಆರ್ ಕೋಡ್ ಹಿಡಿದು ಇದಕ್ಕೆ ಪೇ ಮಾಡುವಂತೆ ಸೂಚಿಸಿ 1 ಸಾವಿರ ರೂ. ವರ್ಗಾವಣೆ ಮಾಡಿಕೊಂಡಿದ್ದಾರೆ. ಈ ಮೂಲಕ ಇಡೀ ಘಟನೆಯಿಂದ ನಾವು ನೊಂದಿದ್ದೇವೆ. ಜತೆಗೆ ಮರು ದಿನ ಕೆಲಸ ಕಾರ್ಯಗಳ ಮೇಲೂ ಕೇಂದ್ರಿಕರಿಸಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದ್ದಾರೆ.
ಇದು ಭಯೋತ್ಪಾದನೆ ಅಲ್ಲವೇ? : ಇಡೀ ಘಟನೆಯಿಂದ ಆಕ್ರೋಶಗೊಂಡಿರುವ ಕಾರ್ತಿಕ್, ಈ ರೀತಿ ಸಾರ್ವಜನಿಕರಿಗೆ ಹಿಂಸೆ ನೀಡುವುದು ಭಯೋತ್ಪಾದನೆ ಅಲ್ಲವೇ? ಕಾನೂನುಬದ್ಧ ಚಿತ್ರಹಿಂಸೆ ಅಲ್ಲವೇ!? ಕಾನೂನು ಪಾಲನೆ ಮಾಡಬೇಕಾದ ರಕ್ಷಕರೇ ಈ ರೀತಿ ಕಾನೂನು ಉಲ್ಲಂಘಿಸಿದರೆ ಯಾರ ಬಳಿ ನ್ಯಾಯಕೇಳಬೇಕು? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಈಶಾನ್ಯ ವಿಭಾಗ ಡಿಸಿಪಿ ಅನೂಪ್ ಶೆಟ್ಟಿ, ಘಟನೆ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು ಮಾಡಲಾಗಿದೆ. ಇಬ್ಬರ ವಿರುದ್ಧ ಇಲಾಖಾ ತನಿಖೆಗೆ ಆದೇಶ ನೀಡಿದ್ದು, ಸಮಗ್ರ ವರದಿ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರಾಥಮಿಕ ವಿಚಾರಣೆಯಲ್ಲಿಯೇ ಕರ್ತವ್ಯಲೋಪ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ. ಮತ್ತೂಂದೆಡೆ ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್‌ರಾವ್, ಇಂತಹ ಘಟನೆಗಳು ನಡೆದಾಗ ಕೂಡಲೇ 112ಗೆ ಕರೆ ಮಾಡಿ. ಇದು ದಾಖಲೆಯಾಗುವ ಕಾಲ್ ಆಗುತ್ತದೆ ಎಂದು ಸಲಹೆ ನೀಡಿದ್ದಾರೆ.
ದಂಡ ವಿಧಿಸಲು ಅವಕಾಶವಿಲ್ಲ: ಸಾಮಾನ್ಯವಾಗಿ ಸಾರ್ವಜನಿಕರ ಓಡಾಟಕ್ಕೆ ಯಾವುದೇ ಸಂದರ್ಭದಲ್ಲಿ ಅಡ್ಡಿಪಡಿಸಲು ಸಾಧ್ಯವಿಲ್ಲ. ಅದಕ್ಕೆ ಕಾನೂನು ಕೂಡ ಇಲ್ಲ. ಆದರೆ, ಕೆಲ ಸಂದರ್ಭದಲ್ಲಿ ಅನುಮಾನಾಸ್ಪದ ಅಥವಾ ಶಾಂತಿಗೆ ಭಂಗ, ಕಾನೂನು ಸುವ್ಯವ ಸ್ಥೆಗೆ ಭಂಗ ತರುವ ನಿಟ್ಟಿನಲ್ಲಿ ಓಡಾಡಿದರೆ, ಸಂಬಂಧಪಟ್ಟ ಠಾಣೆಯ ಪೊಲೀಸರು ತಡೆದು ವಿಚಾರಣೆ ನಡೆಸಬಹುದು. ತಪ್ಪೆಸಗಿದ್ದರೆ ಠಾಣೆಗೆ ಕರೆದೊಯ್ದು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಲಘು ಪ್ರಕರಣ (ಪಿಟಿ ಕೇಸ್) ದಾಖಲಿಸಬಹುದು. ಜತೆಗೆ ಕೋರ್ಟ್‌ನಲ್ಲಿ ಸೂಕ್ತ ಕಾರಣ ನೀಡುವಂತೆ ನೋಟಿಸ್ ಜಾರಿ ಮಾಡಬಹುದು. ಅಗತ್ಯಬಿದ್ದರೆ 100-200 ರೂ. ದಂಡ ವಿಧಿಸುವ ಸಾಧ್ಯತೆಯಿದೆ. ಕರ್ನಾಟಕ ಪೊಲೀಸ್ ಕಾಯ್ದೆ ಅಡಿಯಲ್ಲಿ ಈ ರೀತಿಯ ಕಾನೂನು ಕ್ರಮಕ್ಕೆ ಅವಕಾಶವಿದೆ ಎಂದು ಪೊಲೀಸರು ಮಾಹಿತಿ ನೀಡಿದರು.