ಬೆಂಗಳೂರು: ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ದಂಪತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವಿಜಯನಗರದ ಪಂಚಶೀಲನಗರದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಶಿವಣ್ಣ (52), ಮಂಗಮ್ಮ (46) ಮೃತ ದಂಪತಿ. ಬುಧವಾರ ಮಧ್ಯಾಹ್ನ ಅಡುಗೆ ಮನೆಯ ಲೈಟ್ ಸ್ವಿಚ್ ಆನ್ ಮಾಡಿದಾಗ ಅನಿಲ ಸಿಲಿಂಡರ್ ಸ್ಫೋಟಗೊಂಡಿದೆ ಎಂದು ಪೊಲೀಸರು ಹೇಳಿದರು.
ಕಳೆದ ಒಂದೂವರೆ ವರ್ಷಗಳಿಂದ ದಂಪತಿ ವಿಜಯನಗರದ ಮೂಡಲಪಾಳ್ಯ ಬಳಿಯ ಪಂಚಶೀಲನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಶಿವಣ್ಣ ಮರಗೆಲಸ ಮಾಡುತ್ತಿದ್ದರು. ಪತ್ನಿ ಮಂಗಮ್ಮ ಮನೆಯಲ್ಲೇ ಇರುತ್ತಿದ್ದರು. ಪುತ್ರ ಪ್ರಕಾಶ್ ಕೂಡ ಮರಗೆಲಸ ಮಾಡುತ್ತಿದ್ದಾರೆ.
ಮೂರು ದಿನಗಳ ಹಿಂದಷ್ಟೇ ದಂಪತಿ ತಮಿಳುನಾಡಿನ ಧರ್ಮಪುರಿಗೆ ಹೋಗಿದ್ದರು. ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಪಂಚಶೀಲನಗರದ ಮನೆಗೆ ಹಿಂದಿರುಗಿದ್ದರು. ಮನೆಯೊಳಗೆ ಪ್ರವೇಶಿಸಿ ಅಡುಗೆ ಕೋಣೆಯ ಲೈಟ್ ಆನ್ ಮಾಡುತ್ತಿದ್ದಂತೆ ಏಕಾಏಕಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡಿದೆ.
ಪರಿಣಾಮ ಮನೆಯೊಳಗೆ ದಟ್ಟವಾದ ಹೊಗೆ ಆವರಿಸಿದ್ದು, ದಂಪತಿಗೂ ಬೆಂಕಿಯ ಕಿಡಿ ತಗುಲಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಫೋಟದ ಪರಿಣಾಮ ಅಡುಗೆ ಮನೆ ಭಾಗದ ಗೋಡೆ, ಚಾವಣಿ ಸಿಡಿದಿದೆ. ಮನೆಯೊಳಗಿದ್ದ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಎಲೆಕ್ಟ್ರಾನಿಕ್ ವಸ್ತುಗಳು ಬೆಂಕಿಗಾಹುತಿ ಆಗಿವೆ.
ಸ್ಫೋಟದ ಭಾರಿ ಸದ್ದು ಕೇಳಿ ಸ್ಥಳೀಯರು ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಮೂರು ಅಗ್ನಿಶಾಮಕ ವಾಹನಗಳಲ್ಲಿ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬೆಂಕಿ ನಂದಿಸಿ, ಮೃತದೇಹಗಳನ್ನು ಹೊರ ತೆಗೆದಿದ್ದಾರೆ.
ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪ್ರಾಥಮಿಕ ಮಾಹಿತಿ ಪ್ರಕಾರ ಮಂಗಮ್ಮ ಅವರು ಊರಿಗೆ ಹೋಗುವ ಸಂದರ್ಭದಲ್ಲಿ ಗ್ಯಾಸ್ ಸಿಲಿಂಡರ್ ಆಫ್ ಮಾಡದ ಕಾರಣ ಅನಿಲ ಸೋರಿಕೆಯಾಗಿ ಇಡೀ ಮನೆ ಆವರಿಸಿದೆ. ಹೀಗಾಗಿ, ಸಿಲಿಂಡರ್ ಸ್ಫೋಟಗೊಂಡಿದೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣ ವಿಜಯನಗರ ಠಾಣೆಯಲ್ಲಿ ದಾಖಲಾಗಿದೆ.