ಚಂದಾಪುರ: ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಭಾರೀ ಸ್ಫೋಟ ಸಂಭವಿಸಿ ಇಬ್ಬರು ಗಂಭೀರವಾಗಿ ಗಾಯಗೊಂಡು, ಮನೆ ಗೋಡೆ ಛಿದ್ರ ಛಿದ್ರವಾಗಿರುವ ಘಟನೆ ಬೊಮ್ಮಸಂದ್ರ ಪುರಸಭೆಯ ವ್ಯಾಪ್ತಿಯ ಕಿತ್ತಿಗಾನಹಳ್ಳಿಯ ಕೃಷ್ಣಪ್ಪ ಲೇಔಟ್ನಲ್ಲಿ ಸಂಭವಿಸಿದೆ.
ಬಡಾವಣೆಯ 4ನೇ ಕ್ರಾಸ್ನ ಸುನೀಲ್ ಎಂಬುವರ ಮನೆಯ 3ನೇ ಅಂತಸ್ತಿನ ಕಟ್ಟಡದಲ್ಲಿ ಸ್ಫೋಟ ಸಂಭವಿ ಸಿದ್ದು, ಇಡೀ ಅಂತಸ್ತು ಹಾನಿಯಾಗಿದೆ. ತಮಿಳುನಾಡು ಮೂಲದ ಸುನೀಲ್ ಜೋಸೆಪ್( 25) ಹಾಗೂ ಕೇರಳ ಮೂಲದ ವಿಷ್ಣು ಜಯರಾಜ್ (26) ತೀವ್ರ ಗಾಯಗೊಂಡಿದ್ದಾರೆ. ಇಬ್ಬರೂ ಅವಿವಾಹಿತರಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಕಳೆದ 3 ವರ್ಷಗಳಿಂದ ಇದೇ ಮನೆಯಲ್ಲಿ ನಾಲ್ವರು ವಾಸಿಸುತ್ತಿದ್ದು, ಭಾನುವಾರ ದಿನ ರಜೆ ಇದ್ದ ಕಾರಣ ಇಬ್ಬರು ರೂಮ್ಮೆಂಟ್ಗಳು ತಮ್ಮ ಊರಿಗೆ ತೆರಳಿದ್ದರು. ಉಳಿದ ಇಬ್ಬರು ರೂಮ್ನಲ್ಲಿ ಇದ್ದರು. ಇವರು ಭಾನುವಾರ ರಾತ್ರಿ ಊಟ ಮಾಡಿ ಮಲಗಿದ್ದರು. ರಾತ್ರಿ ಇಡೀ ಗ್ಯಾಸ್ ಲೀಕ್ ಆಗಿದೆ ಎಂದು ತಿಳಿದು ಬಂದಿದೆ. ಮರು ದಿನ ಬೆಳಗ್ಗೆ 8.25 ವೇಳೆಗೆ ಎದ್ದು ಲೈಟ್ ಸ್ವಿಚ್ ಹಾಕಿದ್ದಾರೆ. ಆಗ ತಕ್ಷಣ ಬಾಂಬ್ ಸಿಡಿದಂತೆ ಸ್ಫೋಟ ಸಂಭವಿಸಿದ್ದು, ಮನೆಯ 3 ಭಾಗದ ಗೋಡೆಗಳು ಛಿದ್ರ ಛಿದ್ರವಾಗಿವೆ. 50 ಅಡಿಗಳಷ್ಟು ದೂರದವರೆಗೆ ಗೊಡೆಯ ಇಟ್ಟಿಗೆಗಳು ಬಿದ್ದಿವೆ. ಸ್ಫೋಟದ ತೀವ್ರತೆಗೆ ಸುಮಾರು ಅರ್ಧ ಕಿ.ಮೀ. ದೂರದಲ್ಲಿರುವ ಅಕ್ಕಪಕ್ಕದ ಮನೆಗಳು ಕಂಪಿಸಿವೆ. ಸಣ್ಣ ಪ್ರಮಾಣದ ಭೂಕಂಪದ ಅನುಭವ ಆಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಬೊಮ್ಮಸಂದ್ರ ಪುರಸಭೆ ಮುಖ್ಯಾಧಿಕಾರಿ ರಾಜೇಂದ್ರ ಘಟನಾ ಸ್ಥಳಕ್ಕೆ ಆಗಮಿಸಿ, ಘಟನೆಯ ಬಗ್ಗೆ ಮಾಹಿತಿ ಪಡೆದರು. ಸ್ಫೋಟಗೊಂಡ ಮನೆಯ ನಿವಾಸಿಗಳನ್ನು ಖಾಲಿ ಮಾಡಿಸಿ, ಮಂಗಳವಾರ ಇಡೀ ಬಿಲ್ಡಿಂಗ್ ಅನ್ನು ನೆಲಸಮಗೊಳಿಸುವುದಾಗಿ ತಿಳಿಸಿದ್ದಾರೆ.