ಹುಬ್ಬಳ್ಳಿ: ಇಲ್ಲಿನ ಸಾಯಿನಗರ ಅಚ್ಚವ್ವನ ಕಾಲೋನಿಯ ಈಶ್ವರ ದೇವಸ್ಥಾನ ಬಳಿ ಕಟ್ಟಡದಲ್ಲಿ ಸಿಲಿಂಡರ್ ಸೋರಿಕೆಯಾಗಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ.
ಇಲ್ಲಿನ ವಿದ್ಯಾನಗರ ಕಟ್ಟಿಮನಿ ಶಾಲೆಯ ವಿದ್ಯಾರ್ಥಿಯಾದ ಉಣಕಲ್ಲ ಸುಬಾನಿ ನಗರದ ರಾಜು ಕೃಷ್ಣ ಮುಗೇರಿ (16) ಶುಕ್ರವಾರ(ಡಿ.27) ಬೆಳಗ್ಗೆ 8:05 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾನೆ.
ಈಶ್ವರ ದೇವಸ್ಥಾನ ಬಳಿಯ ಕಟ್ಟಡದ ಮೇಲಂತಸ್ತಿನಲ್ಲಿ ತಂಗಿದ್ದ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ರವಿವಾರ ರಾತ್ರಿ ಪೂಜೆ ಸಲ್ಲಿಸಿ ಸನ್ನಿಧಾನ ಬಳಿ ಮಲಗಿದ್ದಾಗ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹೊತ್ತಿ ಬಾಲಕ ಸೇರಿ ಒಂಭತ್ತು ಮಾಲಾಧಾರಿಗಳು ಸುಟ್ಟು ಗಾಯಗೊಂಡಿದ್ದರು.
ಕೆಎಂಸಿಆರ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರಲ್ಲಿ ಗುರುವಾರ ಬೆಳಗಿನ ಜಾವ ನಿಜಲಿಂಗಪ್ಪ ಬೇಪುರಿ ( 58 ವರ್ಷ) ಹಾಗೂ ಸಂಜಯ ಸವದತ್ತಿ (18) ಮೃತಪಟ್ಟಿದ್ದರು. ಶುಕ್ರವಾರ ರಾಜು ಮುಗೇರಿ ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದಾನೆ. ಈತನಿಗೆ ಶೇ. 74ರಷ್ಟು ಸುಟ್ಟು ಗಾಯಗಳಾಗಿದ್ದವು.
ಇದುವರೆಗೆ ಈ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದಂತಾಗಿದೆ. ಇನ್ನುಳಿದ ಐವರ ಸ್ಥಿತಿಯು ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ