ಹುಬ್ಬಳ್ಳಿ: ನಗರದ ಅಚ್ಚವ್ವನ ಕಾಲೋನಿಯಲ್ಲಿ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಗಾಯಗೊಂಡಿದ್ದ ಮತ್ತೋರ್ವ ಗಾಯಾಳು ಮೃತಪಟ್ಟಿದ್ದು, ಆ ಮೂಲಕ ತೀವ್ರ ಸ್ವರೂಪದಲ್ಲಿ ಸುಟ್ಟಿದ್ದ ಎಲ್ಲಾ ಎಂಟು ಗಾಯಾಳುಗಳು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಂತಾಗಿದೆ.
ಇಸ್ಕಾನ್ ಮಂದಿರದಲ್ಲಿ ಕೆಲಸ ಮಾಡಿಕೊಂಡಿದ್ದ ಸಾಯಿನಗರ ಅಚ್ಚವ್ವನ ಕಾಲೋನಿ ಬಾರಕೇರ ಚಾಳನ ಪ್ರಕಾಶ ನಿಂಗಪ್ಪ ಬಾರಕೇರ (36) ಮಂಗಳವಾರ ಬೆಳಗ್ಗೆ 6:30 ರ ಸುಮಾರಿಗೆ ಮೃತಪಟ್ಟಿದ್ದಾರೆ.
ಡಿ. 23ರಂದು ಅಚ್ಚವ್ವನ ಕಾಲೋನಿಯ ಈಶ್ವರ ಗುಡಿ ಬಳಿಯ ಕಟ್ಟಡದ ಮೇಲಂತ್ತಿಸಿನ ಅಯ್ಯಪ್ಪಸ್ವಾಮಿ ಸನ್ನಿಧಾನದಲ್ಲಿ ನಡೆದಿದ್ದ ಈ ಘಟನೆಯಲ್ಲಿ ಒಂಭತ್ತು ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಸುಟ್ಟು ಗಾಯಗೊಂಡಿದ್ದರು. ಅವರಲ್ಲಿ ಬಾಲಕ ವಿನಾಯಕ ಬಾರಕೇರ ಚೇತರಿಸಿಕೊಳ್ಳುತ್ತಿದ್ದು, ಇನ್ನುಳಿದ ಎಂಟು ಜನರು ಶೇ. 70ರಿಂದ 90ರಷ್ಟು ಪ್ರಮಾಣದಲ್ಲಿ ಸುಟ್ಟು ಗಾಯಗೊಂಡಿದ್ದರು. ಅವರೆಲ್ಲ ಕೆಎಂಸಿಆರ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಗಾಯಾಳುಗಳ ರಕ್ಷಣೆಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಸೂಕ್ತ ಚಿಕಿತ್ಸೆ ನೀಡಲೆಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಿಂದಲೂ ತಜ್ಞ ವೈದ್ಯರನ್ನು ಕರೆಯಿಸಿದ್ದರು.
ರಾಜ್ಯ ಸರ್ಕಾರ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ 5ಲಕ್ಷ ರೂ. ಪರಿಹಾರ ಘೋಷಿಸಿದೆ.
ಇದನ್ನೂ ಓದಿ: New Year: ಹೊಸ ವರ್ಷಾಚರಣೆಗೆ ರಾಜ್ಯದ ಹಲವೆಡೆ ನಿರ್ಬಂಧ; ಎಲ್ಲೆಲ್ಲಿ ನಿಷೇಧ?