ಗಂಗಾವತಿ: ಆಕಸ್ಮಿಕವಾಗಿ ಬೆಂಕಿ ಹೊತ್ತಿ ಚಹಾದಂಗಡಿಯಲ್ಲಿದ್ದ ಸಿಲಿಂಡರ್ ಸ್ಪೋ*ಟಗೊಂಡು ನಾಲ್ಕು ಮನೆ,ಅಂಗಡಿಗಳು ಮತ್ತು ಖಾಸಗಿ ಆಸ್ಪತ್ರೆಯ ಗಾಜು,ಬಾಗಿಲು ಜಖಂಗೊಂಡು ವೈದ್ಯೆ ಸೇರಿ ಚಹಾದಂಗಡಿಯ ಮಾಲಕನಿಗೆ ಬೆಂಕಿ ತಗುಲಿ ಸುಟ್ಟ ಗಾಯಗಳಾದ ಘಟನೆ ನಗರದ ಅಮರ ಟಾಕೀಸ್ ,ಚಿನಿವಾಲರ್ ಆಸ್ಪತ್ರೆ ಹತ್ತಿರ ಬುಧವಾರ ನಸುಕಿನ 2.35ಕ್ಕೆ ಸಂಭವಿಸಿದೆ.
ನಗರದ ಚಿನಿವಾಲರ್ ಆಸ್ಪತ್ರೆಯ ಎದುರು ಇರುವ ಮನೆಗಳು ಮತ್ತು ಮುಖ್ಯ ರಸ್ತೆಗೆ ಹೊಂದಿಕೊಡಿರುವ ಮೇದಾರ್ ಅಂಗಡಿ,ಕಬ್ಬಿಣದ ಅಂಗಡಿ,ಹಣ್ಣಿನ ಅಂಗಡಿ ಹಾಗೂ ಪಂಚರ್ ಹಾಕುವ ಅಂಗಡಿಗಳು ಮತ್ತು ಚಹಾದ ಹೊಟೇಲ್ ಬೆಂಕಿ ಅನಾಹುತದಲ್ಲಿ ಸುಟ್ಟು ಭಸ್ಮವಾಗಿದೆ.
ನಸುಕಿನ ವೇಳೆ ಚಹಾ ಅಂಗಡಿಯ ಮುಂದೆ ಕಸಕ್ಕೆ ಬೆಂಕಿ ತಗುಲಿ ನಂತರ ಮನೆ ಮತ್ತು ಅಂಗಡಿಗಳಲ್ಲಿ ಬೆಂಕಿ ಕಾಣಿಸಿಕೊಂಡು ಚಹಾದಂಗಡಿಯಲ್ಲಿದ್ದ ಸಿಲಿಂಡರ್ ಸ್ಪೋ*ಟಗೊಂಡು ಸುತ್ತಲಿನ ಮನೆಗಳಿಗೆ ಬೆಂಕಿಯ ಕೆನ್ನಾಲಗೆ ಚಾಚಿಕೊಂಡಿದೆ.
ಬೆಂಕಿ ನಂದಿಸಲು ಸುತ್ತಮುತ್ತಲಿನ ಮನೆಯವರು ಪೈಪ್ ಗಳ ಮೂಲಕ ನೀರು ಬಿಡುವ ಸಂದರ್ಭದಲ್ಲಿ ವೈದ್ಯೆ ಡಾ.ಸುಲೋಚನಾ ಚಿನಿವಾಲರ್ ಹಾಗೂ ಚಹಾದಂಗಡಿ ಮಾಲಕ ತಿಪ್ಪೇಶ ಇವರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು ಡಾ.ಚಿನಿವಾಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೊಗಳಿ ಮನೆ ಮಾಲೀಕನನ್ನು ಎಚ್ಚರಿಸಿದ ನಾಯಿ
ಮಧ್ಯರಾತ್ರಿಯಲ್ಲಿ ಬೆಂಕಿ ಹೊತ್ತಿ ಉರಿಯುವ ಸಂದರ್ಭದಲ್ಲಿ ಹುಲುಗಪ್ಪ ಮೇದಾರ ಎಂಬುವರಿಗೆ ಸೇರಿದ ಸಾಕು ನಾಯಿ ಬೆಂಕಿ ಹೊತ್ತಿದ ತತ್ ಕ್ಷಣ ಪದೇ ಪದೇ ದೊಡ್ಡ ಧ್ವನಿಯಲ್ಲಿ ಬೊಗಳುವ ಮೂಲಕ ಮನೆ ಮಂದಿ ಎಲ್ಲಾ ಎಚ್ಚರವಾಗಯವಂತೆ ಮಾಡಿದ್ದರಿಂದ ನಾಲ್ಕು ಮನೆಯವರು ಕೂಡಲೇ ಮನೆಯಿಂದ ಹೊರಗೆ ಬಂದಿದ್ದರಿಂದ ಯಾವುದೇ ದೊಡ್ಡ ಮಟ್ಟದ ಪ್ರಾಣಹಾನಿ ಸಂಭವಿಸಲಿಲ್ಲ.ಆದರೆ ಮನೆಗಳಲ್ಲಿ ಇದ್ದ ದವಸ,ಧಾನ್ಯ, ಬಟ್ಟೆ, ನಗದು,ಬಂಗಾರ ಸೇರಿ ಮನೆ ಬಳಕೆಯ ಎಲ್ಲಾ ಸಾಮಾನುಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ.
ಸಮಯಕ್ಕೆ ಸರಿಯಾಗಿ ಅಗ್ನಿಶಾಮಕದಳ ವಾಹನ ಆಗಮಿಸಿ ಬೆಂಕಿಯನ್ನು ನಂದಿಸಿದ್ದರಿಂದ ಆಗುತ್ತಿದ್ದ ಇನ್ನಷ್ಟು ಹಾನಿ ತಡೆಯಲು ಸಾಧ್ಯವಾಯಿತು.
ಸ್ಥಳಕ್ಕೆ ನಗರಸಭೆ ಅದ್ಯಕ್ಷ ಮೌಲಸಾಬ, ಪಿಐ ಪ್ರಕಾಶ ಮಾಳೆ ಸೇರಿ ನಗರಸಭೆಯ ಅಧಿಕಾರಿಗಳು,ಕಂದಾಯ ಇಲಾಖೆಯ ಭೇಟಿ ನೀಡಿ ಪರಿಶೀಲಿಸಿದ್ದಾರೆ.