Advertisement

ಮಂಗಳೂರಿನಲ್ಲಿ ಹಿಂಸಾ ರೂಪ ಪಡೆದ ಪ್ರತಿಭಟನೆ; ಇಬ್ಬರು ಸಾವು

09:59 AM Dec 20, 2019 | Team Udayavani |

ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರು ನಗರದಲ್ಲಿ ಗುರುವಾರ ಮಧ್ಯಾಹ್ನ ನಿಷೇಧಾಜ್ಞೆಯನ್ನು ಮೀರಿ ನಡೆಸಿದ ಪ್ರತಿಭಟನೆಯು ಹಿಂಸಾರೂಪ ಪಡೆದ ಘಟನೆ ನಡೆಯಿತು. ಈ ಸಂಘರ್ಷದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಘರ್ಷಣೆಯಲ್ಲಿ ಮೃತಪಟ್ಟವರನ್ನು ನೌಶಿನ್‌ ಹಾಗೂ ಜಲೀಲ್‌ ಕಂದುಕ ಎಂದು ಗುರುತಿಸಲಾಗಿದೆ.

Advertisement

ಇನ್ನೊಂದೆಡೆ, ಶಾಂತಿ ಸುವ್ಯವಸ್ಥೆ ಕಾಪಾಡಲು ಹಾಗೂ ಪರಿಸ್ಥಿತಿ ನಿಯಂತ್ರಿಸಲು ಮಂಗಳೂರಿನ ಕೇಂದ್ರ ಭಾಗದ ಐದು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಡಿ.20ರ ಮಧ್ಯರಾತ್ರಿವರೆಗೆ ಕರ್ಫ್ಯೂ ಜಾರಿಗೊಳಿಸಿ ಮಂಗಳೂರು ಪೊಲೀಸ್‌ ಆಯುಕ್ತ ಡಾ| ಹರ್ಷಾ ಪಿ.ಎಸ್‌. ಆದೇಶ ಹೊರಡಿಸಿದ್ದಾರೆ.

ನಗರದ ಬಂದರು, ಪಾಂಡೇಶ್ವರ, ಬರ್ಕೆ, ಕದ್ರಿ ಹಾಗೂ ಉರ್ವ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಶುಕ್ರವಾರ ಮಧ್ಯರಾತ್ರಿವರೆಗೆ ಕರ್ಫ್ಯೂ ಜಾರಿಗೊಳಿಸಲಾಗಿದೆ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಆಯುಕ್ತರು ವಿನಂತಿಸಿದ್ದಾರೆ.


ಘರ್ಷಣೆ – ಲಾಠಿಚಾರ್ಜ್‌
ನಗರದ ಸ್ಟೇಟ್‌ ಬ್ಯಾಂಕ್‌ ಬಳಿಯಿರುವ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಗುರುವಾರ ಮಧ್ಯಾಹ್ನ 3.30ರ ಸುಮಾರಿಗೆ ಪ್ರತಿಭಟನಾಕಾರರು ಗುಂಪು ಸೇರತೊಡಗಿದ್ದರು. ಆದರೆ, ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದ ಕಾರಣ ಪ್ರತಿಭಟನೆ ಕೈಬಿಟ್ಟು ಅಲ್ಲಿಂದ ತೆರಳುವಂತೆ ಪೊಲೀಸರು ಸೂಚಿಸಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದು ಸ್ಥಳದಲ್ಲೇ ಧರಣಿ ನಡೆಸಲು ಮುಂದಾದರು.

ಈ ವೇಳೆ ಪೊಲೀಸರು ಅವರನ್ನು ತಡೆದಾಗ ಪ್ರತಿಭಟನಾಕಾರರು ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಚದುರಿಸುಲು ಪೊಲೀಸರು ಲಾಠಿಚಾರ್ಜ್‌ ನಡೆಸಿದರು. ಇದು ನಂತರದಲ್ಲಿ ವಿಕೋಪಕ್ಕೆ ತಿರುಗಿ ಪರಿಸ್ಥಿತಿ ಬಿಗಡಾಯಿಸಿತ್ತು.


ಈ ವೇಳೆ, ಪೊಲೀಸರ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಲು ಪ್ರಾರಂಭಿಸಿದ್ದರು. ಆಗ, ಪರಿಸ್ಥಿತಿಯನ್ನು ಹತೋಟಿಗೆ ತರುವುದಕ್ಕೆ ಪೊಲೀಸರು ಕೂಡ ಪ್ರತಿಭಟನಾಕಾರರ ವಿರುದ್ಧ ಅಶ್ರುವಾಯು ಸಿಡಿಸಿದರು. ಆ ನಂತರವೂ ಪರಿಸ್ಥಿತಿ ನಿಯಂತ್ರಣಕ್ಕೆ ಬರದಿದ್ದಾಗ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು.

ಪರಿಣಾಮ, ಸ್ಟೇಟ್‌ ಬ್ಯಾಂಕ್‌ ಸಮೀಪದ ಸುತ್ತಲಿನ ಪ್ರದೇಶಗಳಲ್ಲಿಯೂ ಪ್ರತಿಭಟನಾಕಾರರು ಜಮಾಯಿಸಿ ಮತ್ತೆ ಕಲ್ಲು ತೂರಾಟ ನೆಡೆಸಲಾರಂಭಿಸಿದರು. ಕೆಲವು ಕಡೆಗಳಲ್ಲಿ ಟೈಯರ್‌ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ರೀತಿ ಮಧ್ಯಾಹ್ನದಿಂದ ಸಂಜೆ ಸುಮಾರು 6 ಗಂಟೆವರೆಗೆ ಸ್ಟೇಟ್‌ ಬ್ಯಾಂಕ್‌, ರಾವ್‌ ಆಂಡ್‌ ರಾವ್‌ ವೃತ್ತ, ನೆಲ್ಲಿಕಾಯಿ ರಸ್ತೆ, ಮಿಷನ್‌ ಸ್ಟ್ರೀಟ್‌, ಅಜಿಜುದ್ದೀನ್‌ ರಸ್ತೆ ಮುಂತಾದೆಡೆ ಪೊಲೀಸರು ಹಾಗೂ ಪ್ರತಿಭಟನಾನಿರತರ ನಡುವೆ ಘರ್ಷಣೆ ಮುಂದುವರಿದಿತ್ತು.

Advertisement

ಆದರೆ ಸಂಜೆವರೆಗೂ ಬಂದರು ಪ್ರದೇಶ ವ್ಯಾಪ್ತಿಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದ ಹಿನ್ನೆಲೆಯಲ್ಲಿ ಮಂಗಳೂರಿನ ಐದು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಮಧ್ಯರಾತ್ರಿವರೆಗೆ ಕರ್ಫ್ಯೂ ಘೋಷಿಸಿದರು. ಕರ್ಫ್ಯೂ ಜಾರಿಯಾಗುತ್ತಿದ್ದಂತೆ ಪರಿಸ್ಥಿತಿಯೂ ನಿಯಂತ್ರಣಕ್ಕೆ ಬರತೊಡಗಿತ್ತು.


ಹಲವರಿಗೆ ಗಾಯ
ಈ ಘರ್ಷಣೆಯಲ್ಲಿ ಕಲ್ಲು ತೂರಾಟ ಹಾಗೂ ಪೊಲೀಸರ ಲಾಠಿ ಚಾರ್ಜ್‌ ಹಿನ್ನೆಲೆಯಲ್ಲಿ ಹಲವರಿಗೆ ಗಾಯಗಳಾಗಿವೆ. ಪ್ರತಿಭಟನೆಕಾರರ ಪೈಕಿ ಅನೇಕರು ಗಾಯಗೊಂಡು ನಗರದ ಆಸ್ಪತ್ರೆಗಳಿಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿದ್ದಾರೆ. ಅದೇ ರೀತಿ, ಕಲ್ಲು ತೂರಾಟದಿಂದ ಪೊಲೀಸರ ಪೈಕಿಯೂ ಅನೇಕರಿಗೆ ಗಾಯಗಳಾಗಿದ್ದು, ಕೆಲವರು ಆಸ್ಪತ್ರೆಗೂ ದಾಖಲಾಗಿದ್ದಾರೆ. ಈ ನಡುವೆ, ಘಟನೆಯಲ್ಲಿ ಇಬ್ಬರು ಡಿಸಿಪಿಗಳು ಕೂಡ ಗಾಯಗೊಂಡಿದ್ದಾರೆ. ಪ್ರತಿಭಟನಾ ನಿರತರಲ್ಲಿ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಜನಜೀವನ ಅಸ್ತವ್ಯಸ್ತ
ಸ್ಟೇಟ್‌ಬ್ಯಾಂಕ್‌ ಹಾಗೂ ಬಂದರು ಪ್ರದೇಶದಲ್ಲಿ ಘರ್ಷಣೆ ಜೋರಾಗುತ್ತಿದ್ದಂತೆ ನಗರದ ಹಂಪನಕಟ್ಟ, ಕೇಂದ್ರ ಮಾರುಕಟ್ಟೆ ಸೇರಿದಂತೆ ಆಸು – ಪಾಸಿನಲ್ಲಿಯೂ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಅಂಗಡಿ – ಮುಂಗಟ್ಟುಗಳು ಬಂದ್‌ ಆಗಿ ವಾಹನ ಸಂಚಾರವೂ ಸ್ಥಗಿತಗೊಂಡಿತ್ತು.

ಇದರಿಂದಾಗಿ ಸಂಜೆ ವೇಳೆ ಶಾಲೆಯಿಂದ ಹಾಗೂ ಉದ್ಯೋಗ ಮುಗಿಸಿ ಮನೆಗೆ ತೆರಳುವ ಮಕ್ಕಳು, ಜನಸಾಮಾನ್ಯರು ತೊಂದರೆ ಅನುಭವಿಸಿದರು. ಬಸ್‌ ಸಂಚಾರವನ್ನು ಜ್ಯೋತಿ ಜಂಕ್ಷನ್‌ನಲ್ಲಿಯೇ ಮೊಟಕುಗೊಳಿಸಲಾಗಿತ್ತು. ಯಾವುದೇ ಬಸ್‌ಗಳಿಗೆ ಸ್ಟೇಟ್‌ ಬ್ಯಾಂಕ್‌ ಕಡೆಗೆ ತೆರಳುವುದಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಘರ್ಷಣೆ ಪರಿಣಾಮವಾಗಿ ಎರಡು ಕೆಎಸ್ಸಾರ್ಟಿಸಿ ಬಸ್‌ಗಳಿಗೆ ಹಾನಿಯಾಗಿದೆ.

ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಪೊಲೀಸ್‌ ಕರ್ತವ್ಯಕ್ಕೆಂದು ನಿಯೋಜಿಸಿದ್ದ ಬಸ್‌ಗೆ ಕಲ್ಲು ಬಿದ್ದಿದ್ದು, ಬಸ್‌ನ ಗಾಜು ಪುಡಿಯಾಗಿದೆ. ಅದೇ ರೀತಿ ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್‌ಗೆ ಸಂಜೆ ವೇಳೆ ಪರಂಗಿಪೇಟೆ ಬಳಿ ಕಲ್ಲು ತೂರಾಟ ನಡೆದಿದ್ದು, ಒಬ್ಬ ಪ್ರಯಾಣಿಕನಿಗೆ ಗಾಯವಾಗಿದೆ. ಗಾಯಾಳುವನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next