ಮಂಗಳೂರು: ಇಲ್ಲಿನ ಡಾ.ಟಿಎಂಎ ಪೈ ಇಂಟರ್ ನ್ಯಾಶನಲ್ ಕನ್ವೆನ್ಶನ್ ಸೆಂಟರ್ ನಲ್ಲಿ ಅಪರೂಪದ ಎರಡು ದಿನಗಳ ಸಾಹಿತ್ಯ, ಸಂಸ್ಕೃತಿ ಪರಂಪರೆಯ ಚಿಂತನ ಮಂಥನದ ಲಿಟ್ ಫೆಸ್ಟ್ ಗೆ ಶನಿವಾರ ನಿಟ್ಟೆ ಎಜುಕೇಶನ್ ಟ್ರಸ್ಟ್ ನ ಚೇರ್ಮನ್ ಡಾ.ಎನ್ ವಿನಯ್ ಹೆಗ್ಡೆ, ತುಷಾರ-ತರಂಗ, ತುಂತುರ ಪತ್ರಿಕೆಗಳ ವ್ಯವಸ್ಥಾಪಕ ಸಂಪಾದಕಿ ಡಾ.ಸಂಧ್ಯಾ ಎಸ್.ಪೈ, ಪ್ರೊ.ಪ್ರಫುಲ್ ಕೇತ್ಕರ್ ಚಾಲನೆ ನೀಡಿದರು.
ಎಲ್ಲರು ಸುಖ, ಸಂತೋಷ, ಸಹಬಾಳ್ವೆಯಿಂದ ಬದುಕ ಬೇಕೆನ್ನುವುದು ನಮ್ಮ ಗುರಿಯಾಗಬೇಕು. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಜಾತಿ, ಧರ್ಮದ ಹೆಸರಿನಲ್ಲಿ ತಾರತಮ್ಯ ಎಸಗಬಾರದು. ಪ್ರಚೋದನಕಾರಿ ಭಾಷಣದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸುಂದರವಾದ ಭಾರತ ನಿರ್ಮಾಣ ಸಾಧ್ಯವಿದೆ ಎಂದು ಡಾ.ವಿನಯ್ ಹೆಗ್ಡೆ ಹೇಳಿದರು.
ಭಾರತ ಪ್ರಪಂಚದ ಯಾವ ನಾಗರಿತೆಯೂ ಸಾಧಿಸದಷ್ಟು ಸಾಧಿಸಿದೆ. ನಮ್ಮಲ್ಲಿ ಅಪಾರವಾದ ಐತಿಹಾಸಿಕ, ಧಾರ್ಮಿಕ ಜ್ಞಾನ ಇದೆ. ಅದನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯ ಮಾಡಬೇಕಾಗಿದೆ ಎಂದು ಡಾ.ಸಂಧ್ಯಾ ಪೈ ಅವರು ಅಭಿಪ್ರಾಯವ್ಯಕ್ತಪಡಿಸಿದರು.
ಬೆಂಗಳೂರು ಸೇರಿದಂತೆ ದೇಶದ ಹಲವು ಕಡೆಗಳಲ್ಲಿ ಆಯೋಜನೆಗೊಂಡಿದ್ದ ಲಿಸ್ಟ್ ಫೆಸ್ಟ್ ಈಗ ಮೊದಲ ಬಾರಿಗೆ ಮಂಗಳೂರಿನಲ್ಲಿ ನವೆಂಬರ್ 3 ಮತ್ತು 4ರಂದು ನಡೆಯುತ್ತಿದೆ. ದೇಶದ ಅನೇಕ ಮಂದಿ ಖ್ಯಾತ ಸಾಹಿತಿಗಳು, ಸಾಂಸ್ಕೃತಿಕ ವಕ್ತಾರರು, ಪ್ರಖರ ಚಿಂತಕರು, ವಿವಿಧ ಸೃಷ್ಟಿಶೀಲ ಕ್ಷೇತ್ರಗಳ ಸಾಧಕರು ಪ್ರಮುಖ ವಿಷಯಗಳ ಕುರಿತು ಬೌದ್ಧಿಕ ಚಿಂತನ-ಮಥನ ನಡೆಸುವುದೇ ಈ ಲಿಟ್ ಫೆಸ್ಟ್ ನ ಆಶಯವಾಗಿದೆ.
ಭೈರಪ್ಪಗೆ ಸಮ್ಮಾನ:
ಸಾಹಿತ್ಯ ಕ್ಷೇತ್ರದ ಅನನ್ಯ ಸಾಧಕ, ಸರಸ್ವತಿ ಸಮ್ಮಾನ್ ಪ್ರಶಸ್ತಿ ವಿಜೇತ ಸಾಹಿತಿ ಡಾ.ಎಸ್ ಎಲ್ ಭೈರಪ್ಪ ಅವರನ್ನು ಸಂಜೆ 7ಗಂಟೆಗೆ ಜೀವಮಾನ ಸಾಧನಾ ಪ್ರಶಸ್ತಿ ನೀಡಿ ಸನ್ಮಾಸಲಾಗುತ್ತದೆ. ಎರಡು ದಿನಗಳಲ್ಲಿ ಎರಡು ಸಮಾನಾಂತರ ವೇದಿಕೆಗಳಲ್ಲಿ 55ಕ್ಕೂ ಅಧಿಕ ಉಪನ್ಯಾಸ ನಡೆಯಲಿದೆ.