ಬೆಂಗಳೂರು: ಕೋಲಾರದ ಶ್ರೀನಿವಾಸಪುರ ತಾಲೂಕಿನಲ್ಲಿ ರೈಲ್ವೆ ಕೋಚ್ ಕಾರ್ಖಾನೆ ನಿರ್ಮಾಣ ಕುರಿತು 2013-14ನೇ ರೈಲ್ವೆ ಬಜೆಟ್‌ನಲ್ಲಿ ಮಾಡಿದ ಘೋಷಣೆ ಕಾರ್ಯರೂಪಕ್ಕೆ ಬರುವ ಕಾಲ ಸನ್ನಿಹಿತವಾಗಿದೆ. ಕಾರ್ಖಾನೆ ನಿರ್ಮಾಣಕ್ಕೆ 1128 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಎರಡೂವರೆ ತಿಂಗಳಲ್ಲಿ ರೈಲ್ವೆ ಇಲಾಖೆಗೆ ಹಸ್ತಾಂತರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಭೂಸ್ವಾಧೀನ ಪ್ರಕ್ರಿಯೆಗೆ ಸುಮಾರು 250 ಕೋಟಿ ರೂ. ವೆಚ್ಚವಾಗಲಿದೆ. ಸಭೆಯ ಬಳಿಕ ಮಾತನಾಡಿದ ಸಚಿವ ರಮೇಶ್‌ಕುಮಾರ್, ರೈಲ್ವೆ ಕೋಚ್ ಕಾರ್ಖಾನೆ ನಿರ್ಮಾಣಕ್ಕೆ 1128 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಿದ್ದು, ಆ ಪೈಕಿ 560 ಎಕರೆ ಖಾಸಗಿ ಭೂಮಿಯಿದೆ.
ಎರಡೂವರೆ ತಿಂಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಮುಗಿಸಿ ಭೂಮಿಯನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗುವುದು. ನಂತರದ 2 ತಿಂಗಳಲ್ಲಿ ಕಾರ್ಖಾನೆ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು. ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಶ್ರೀನಿವಾಸಪುರದಲ್ಲಿ ರೈಲ್ವೆ ಕೋಚ್ ಕಾರ್ಖಾನೆ ನಿರ್ಮಾಣ ಕುರಿತಂತೆ 2013-14ನೇ ಸಾಲಿನ ರೈಲ್ವೆ ಬಜೆಟ್‌ನಲ್ಲಿ ಘೋಷಿಸಿ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಇದಕ್ಕೆ ಬೇಕಾದ ಭೂಮಿ ಕುರಿತಂತೆ ಈಗಾಗಲೇ ರೈತರೊಂದಿಗೆ ಮಾತುಕತೆ ನಡೆಸಲಾಗಿದ್ದು, ಅವರು ಭೂಮಿ ನೀಡಲು ಒಪ್ಪಿದ್ದಾರೆ. ವೇಮಗಲ್, ನರಸಾಪುರ ಭಾಗದಲ್ಲಿ ಸ್ವಾಧೀನಪಡಿಸಿಕೊಂಡ ದರದಲ್ಲೇ ಈ ಯೋಜನೆಗೂ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುವುದು. ಭೂಸ್ವಾಧೀನಕ್ಕೆ ಅಗತ್ಯವಾದ ಹಣವನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಗೆ ನೀಡಲು ಸಿಎಂ ಒಪ್ಪಿದ್ದು, ಹಣಕಾಸು ಇಲಾಖೆ ಒಪ್ಪಿದ ಮೇಲೆ ಹಣ ಬಿಡುಗಡೆಯಾಗಲಿದೆ ಎಂದರು.
ರೈಲ್ವೆ ಇಲಾಖೆ ಹಾಗೂ ರಾಜ್ಯ ಸರ್ಕಾರದೊಂದಿಗಿನ ಒಪ್ಪಂದ ಪ್ರಕಾರ ಭೂಮಿಯನ್ನು ರಾಜ್ಯ ಸರ್ಕಾರ ಉಚಿತವಾಗಿ ನೀಡಬೇಕು. ಜತೆಗೆ ಯೋಜನಾ ವೆಚ್ಚದ ಅರ್ಧ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸಬೇಕಿದೆ. ಅದರಂತೆ 1ನೇ ಹಂತದಲ್ಲಿ ಭೂಸ್ವಾಧೀನಪಡಿಸಿಕೊಂಡು ಎರಡೂವರೆ ತಿಂಗಳಲ್ಲಿ ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದರು.
2,000 ಕೋಟಿ ರೂ.ಗೆ ಹೆಚ್ಚಳ ಸಾಧ್ಯತೆ: ರೈಲ್ವೆ ಕೋಚ್ ಕಾರ್ಖಾನೆ ನಿರ್ಮಾಣ ಕುರಿತು ಒಪ್ಪಂದವಾದಾಗ ಸುಮಾರು 1,460 ಕೋಟಿ ರೂ. ವೆಚ್ಚ ಅಂದಾಜು ಮಾಡಲಾಗಿತ್ತು. ಆದರೆ, ಕಾರ್ಯರೂಪಕ್ಕೆ ಬರುವುದು ವಿಳಂಬವಾಗಿದ್ದರಿಂದ ವೆಚ್ಚ 2000 ಕೋಟಿ ರೂ. ಆಗಲಿದೆ. ಯೋಜನೆ ಜಾರಿ ವಿಳಂಬವಾದರೆ, ಕೇಂದ್ರ ಸರ್ಕಾರ ಯೋಜನೆಯನ್ನು ಬೇರೆಡೆಗೆ ಸ್ಥಳಾಂತರಿಸುವ ಸಾಧ್ಯತೆಯಿದೆ. ಹಾಗಾಗಿ ಎಚ್ಚೆತ್ತುಕೊಂಡು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.