ವಾಷಿಂಗ್ಟನ್: ಇತ್ತೀಚೆಗೆ ಟ್ವಿಟರ್ ಕಂಪೆನಿಯು ತನ್ನ ಶೇ.50 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದ ಕೆಲವು ದಿನಗಳಲ್ಲೇ ಕಂಪೆನಿ ಮಾಲಕ ಎಲಾನ್ ಮಸ್ಕ್ ಮಂಗಳವಾರ ಹೊಸದಾಗಿ 4,400 ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದುಹಾಕಿದ್ದಾರೆ.
“ಗುತ್ತಿಗೆ ನೌಕರರಿಗೆ ಸೌಜನ್ಯಕ್ಕೂ ಕೂಡ ಕೆಲಸದಿಂದ ವಜಾಗೊಳಿಸಿರುವ ಮಾಹಿತಿ ಯನ್ನೂ ನೀಡಲಿಲ್ಲ. ಅವರು ಕಂಪೆನಿಯ ಸಿಸ್ಟಮ್ ಮತ್ತು ಇಮೇಲ್ ಆ್ಯಕ್ಸೆಸ್ ಕಳೆದು ಕೊಂಡಿದ್ದಾರೆ. ಮ್ಯಾನೇಜರ್‌ಗಳಿಗೆ ಕೂಡ ಅನಂತರ ಈ ಬಗ್ಗೆ ಮಾಹಿತಿ ತಿಳಿಯಿತು,’ ಎಂದು ಪ್ಲಾಟ್‌ಫಾರ್ಮರ್ ಮತ್ತು ಅಕ್ಸಿವ್ಸ್ ಸಂಸ್ಥೆಯ ಕೇಸಿ ನ್ಯೂಟನ್ ಟ್ವೀಟ್ ಮಾಡಿದ್ದಾರೆ.
ಉಚಿತ ಊಟ ಇಲ್ಲ: ಈ ಹಿಂದೆ ಟ್ವಿಟರ್ ಕಂಪೆನಿಯು ಉದ್ಯೋಗಿಗಳಿಗೆ ಕಚೇರಿ ಯಲ್ಲಿ ಉಚಿತ ಊಟವನ್ನು ಕಲ್ಪಿಸಿತ್ತು. “ದಿನಕ್ಕೆ ಒಬ್ಬ ಉದ್ಯೋಗಿಗೆ 400 ಡಾಲರ್(32,000 ರೂ.) ವೆಚ್ಚ ಮಾಡಲಾಗುತ್ತಿತ್ತು. ವೆಚ್ಚ ಕಡಿತದ ಹಿನ್ನೆಲೆಯಲ್ಲಿ ಊಟಕ್ಕೆ ದರ ವಿಧಿಸಲಾಗುವುದು,’ ಎಂದು ಎಲಾನ್ ಮಸ್ಕ್ ತಿಳಿಸಿದ್ದಾರೆ. ಆದರೆ ಇದಕ್ಕೆ ಟ್ವಿಟರ್ ಮಾಜಿ ಉದ್ಯೋಗಿ ಟ್ರಾಕು ಹಾಕಿನ್ಸ್ ಪ್ರತಿಕ್ರಿಯಿಸಿದ್ದು, “ಮಸ್ಕ್ ಸುಳ್ಳು ಹೇಳುತ್ತಿದ್ದಾರೆ. ಊಟಕ್ಕೆ ಕಂಪೆನಿ ಇಷ್ಟೊಂದು ವೆಚ್ಚ ಮಾಡುತ್ತಿರಲಿಲ್ಲ. ಕಂಪೆನಿಯು ಉದ್ಯೋಗಿಗಳ ಊಟಕ್ಕೆಂದು ವರ್ಷಕ್ಕೆ 13 ಮಿಲಿಯನ್ ಡಾಲರ್ ವೆಚ್ಚ ಮಾಡುತ್ತಿತ್ತು,’ ಎಂದು ತಿಳಿಸಿದ್ದಾರೆ.
ವೆಚ್ಚ ಕಡಿತಕ್ಕೆ ಮುಂದಾದ ಡಿಸ್ನಿ ಪ್ಲಸ್: ಟ್ವಿಟರ್, ಮೆಟಾ ಅನಂತರ ಇದೀಗ ಡಿಸ್ನಿ ಪ್ಲಸ್ ವೆಚ್ಚ ಕಡಿತದ ಹಿನ್ನೆಲೆಯಲ್ಲಿ ಕೆಲವು ಕ್ರಮಕ್ಕೆ ಮುಂದಾಗಿದೆ. ಇದರ ಭಾಗವಾಗಿ ಕಂಪೆನಿಯು ಹೊಸ ನೇಮಕಾತಿಯನ್ನು ಸ್ಥಗಿತಗೊಳಿಸುತ್ತಿದೆ. ಟಾರ್ಗೆಟ್ ಮುಟ್ಟುವ ನಿಟ್ಟಿನಲ್ಲಿ ಇರುವಷ್ಟು ಉದ್ಯೋಗಿಗಳನ್ನೇ ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಕಂಪೆನಿ ಸಿಇಒ ಬಾಬ್ ಚೆಪಕ್ ಮ್ಯಾನೇಜರ್‌ಗಳಿಗೆ ಪತ್ರ ಬರೆದಿದ್ದಾರೆ.
ಸಂಕಷ್ಟ: ಸಿಂಗಾಪುರದಲ್ಲಿ ಮೆಟಾ ಸೇರಿದಂತೆ ಅನೇಕ ಟೆಕ್ ಕಂಪೆನಿಗಳು ತನ್ನ ಉದ್ಯೋಗಿ ಗಳನ್ನು ಕೆಲಸದಿಂದ ವಜಾಗೊಳಿಸಿದೆ. ಇಲ್ಲಿ ಭಾರತೀಯ ಟೆಕಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗದಲ್ಲಿದ್ದಾರೆ. ವಜಾ ಕ್ರಮದಿಂದ ಭಾರತೀಯ ಉದ್ಯೋಗಿಗಳಿಗೆ ಸಂಕಷ್ಟ ಎದುರಾಗಿದೆ. ಇದೇ ಪರಿಸ್ಥಿತಿ ಎಚ್1ಬಿ ವೀಸಾ ಮೂಲಕ ಅಮೆರಿಕಕ್ಕೆ ತೆರಳಿದ ಭಾರತೀಯ ಟೆಕಿಗಳಿಗೂ ಉಂಟಾಗಿದೆ. ಮೆಟಾದಿಂದ ವಜಾಗೊಂಡಿದ್ದ 11 ಸಾವಿರ ಮಂದಿಯ ಪೈಕಿ ಭಾರತೀಯರೂ ಇದ್ದಾರೆ. ಅವರಿಗೆ ಉದ್ಯೋಗ ಹುಡುಕಲು ಅಥವಾ ಸ್ವದೇಶಕ್ಕೆ ವಾಪಸಾಗಲು 60 ದಿನಗಳ ಅವಕಾಶ ಇದೆ.