Advertisement

ಅವಳಿ ನಗರದಲ್ಲಿ ಇನ್ನೂ 3-4 ಆಶ್ರಯ ಬಡಾವಣೆ ಅಗತ್ಯ

12:37 PM Sep 07, 2017 | Team Udayavani |

ಹುಬ್ಬಳ್ಳಿ: ರಾಜ್ಯ ಸರಕಾರ ಬಡ ಜನರಿಗೆ ವಸತಿ ಕಲ್ಪಿಸಲು ಆದ್ಯತೆ ನೀಡುತ್ತಿದ್ದು, ಅವಳಿ ನಗರದಲ್ಲಿ ಇನ್ನೂ 3-4 ಆಶ್ರಯ ಬಡಾವಣೆಗಳನ್ನು ನಿರ್ಮಿ ಸುವ ಅವಶ್ಯಕತೆಯಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು. ಹು-ಧಾ ಕೇಂದ್ರ ವಿಧಾನಸಭಾ ವ್ಯಾಪ್ತಿಯ ವಿವಿಧ ಕೊಳಚೆ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ನಿರ್ಮಿಸಲಿರುವ 525 ಮನೆಗಳ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

Advertisement

ಅವಳಿ ನಗರದಲ್ಲಿನ ಎಲ್ಲ ಸೂರುರಹಿತರಿಗೆ ಮನೆ ಒದಗಿಸಲಾಗುವುದು. ಸರಕಾರ ಆಶ್ರಯ ಕಾಲೋನಿಗಾಗಿ ಭೂಮಿ ಖರೀದಿಗೆ ಪ್ರತಿ ಎಕರೆಗೆ 37 ಲಕ್ಷ ರೂ. ನಿಗದಿಪಡಿಸಿದೆ. ಆದರೆ ಭೂಮಿ ಮೌಲ್ಯ ಹೆಚ್ಚಾಗಿದ್ದು, ಸರಕಾರ ನಿಗದಿಪಡಿಸಿದ ಮೊತ್ತಕ್ಕೆ ನಗರದ ಸಮೀಪ ಜಾಗ ಸಿಗುವುದಿಲ್ಲ. ನಗರದಿಂದ ದೂರದಲ್ಲಿ ಆಶ್ರಯ ಕಾಲೋನಿ ಮಾಡಿದರೆ ಮನೆಗಳು ಖಾಲಿ ಉಳಿಯುವುದೇ ಹೆಚ್ಚು.

ಈ ದಿಸೆಯಲ್ಲಿ ವಸತಿ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು. ಈಗ ಆಶ್ರಯ ಮನೆಗಳನ್ನು ಉತ್ತಮವಾಗಿ ನಿರ್ಮಿಸಲಾಗುತ್ತಿದೆ. ಧಾರವಾಡದ ಸೋಮೇಶ್ವರದ ಸಮೀಪ ಉತ್ಕೃಷ್ಟ ಮನೆಗಳನ್ನು ಕಟ್ಟಲಾಗಿದೆ. 277.88 ಚದುರ ಅಡಿಯಲ್ಲಿ ಹಾಲ್‌, ಬೆಡ್‌ ರೂಮ್‌, ಅಡುಗೆಮನೆ, ಸ್ನಾನದ ಮನೆ, ಶೌಚಾಲಯ ಹಾಗೂ ಪ್ಯಾಸೇಜ್‌ ನಿರ್ಮಿಸಿಕೊಡಲಾಗುತ್ತದೆ.

4.80 ಲಕ್ಷ ರೂ. ಗಳಲ್ಲಿ ಮನೆ ನಿರ್ಮಿಸಲಾಗುತ್ತಿದೆ ಎಂದರು. 525 ಮನೆ ನಿರ್ಮಾಣಕ್ಕಾಗಿ ರಾಜ್ಯ ಸರಕಾರ 890.55 ಲಕ್ಷ ರೂ., ಕೇಂದ್ರ ಸರಕಾರ 787.50 ಲಕ್ಷ ರೂ. ಫ‌ಲಾನುಭವಿಗಳ ವಂತಿಗೆ 293.09 ಲಕ್ಷ ರೂ., ಮಹಾನಗರ ಪಾಲಿಕೆ ವಂತಿಗೆ 1093.78 ಲಕ್ಷ ರೂ. ನೀಡುತ್ತವೆ ಎಂದು ವಿವರಿಸಿದರು.

ಸ್ಲಂಗಳು ಉದ್ಭವಿಸದಂತೆ ಕ್ರಮ ಅಗತ್ಯ: ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ ಮಾತನಾಡಿ, ನಗರದಲ್ಲಿರುವ ಸ್ಲಂಗಳ ಅಭಿವೃದ್ಧಿಗೆ ಆದ್ಯತೆ ನೀಡುವುದರೊಂದಿಗೆ ಹೊಸ ಸ್ಲಂಗಳು ಉದ್ಭವಿಸದಂತೆ ಕ್ರಮ ಕೈಗೊಳ್ಳಬೇಕು. ಸ್ಲಂಗಳಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸುವುದು ಅವಶ್ಯಕವಾಗಿದೆ. ನಗರದ ಸೌಂದರ್ಯದ ದೃಷ್ಟಿಯಿಂದ ಹೊಸ ಕೊಳಗೇರಿಗಳಾಗದಂತೆ ನೋಡಿಕೊಳ್ಳಬೇಕೆಂದರು.

Advertisement

ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೈಜೋಡಿಸಿದರೆ ಎಲ್ಲರಿಗೂ ಸೂರು ನೀಡುವ ಪ್ರಧಾನಿ ಮೋದಿಯವರ ಕಲ್ಪನೆ ಸಾಕಾರಗೊಳ್ಳಲಿದೆ. ಯುಪಿಎ ಸರಕಾರದ ಅವಧಿಯಲ್ಲಿ ಬಡವರಿಗೆ ಸೂರು ನಿರ್ಮಿಸಲು 1 ಲಕ್ಷ ಕೋಟಿ ಸಹಾಯಧನ ನೀಡಲಾಗುತ್ತಿತ್ತು. ಆದರೆ ಈಗ 2.40 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದರು. ಪಾಲಿಕೆ ಸದಸ್ಯ ಮೋಹನ ಹಿರೇಮನಿ ಮಾತನಾಡಿದರು.

ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ಮಹಾಪೌರ ಡಿ.ಕೆ. ಚವ್ಹಾಣ, ಜಿ.ಪಂ. ಅಧ್ಯಕ್ಷೆ ಚೈತ್ರಾ ಶಿರೂರ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಸದಾನಂದ ಡಂಗನವರ, ಎಫ್.ಎಚ್‌. ಜಕ್ಕಪ್ಪನವರ, ಮಹಾನಗರ ಪಾಲಿಕೆ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ, ಪಾಲಿಕೆ ಸದಸ್ಯರಾದ ಬಶೀರ್‌ ಗುಡಮಾಲ್‌, ಸುಧಾ ಮಣಿಕುಂಟ್ಲ ಇದ್ದರು. ಎಚ್‌.ಮಂಜು ಸ್ವಾಗತಿಸಿದರು. ಗೌರಿ ನಿರೂಪಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next