Advertisement

Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು

12:44 AM Nov 05, 2024 | Team Udayavani |

ಮುಂಬಯಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯು ಅಂತಿಮ ಘಟ್ಟ ತಲುಪಿದ್ದು, ನಾಮಪತ್ರ ವಾಪಸ್‌ಗೆ ಕೊನೇ ದಿನವಾಗಿದ್ದ ಸೋಮವಾರ ಅಂತಿಮವಾಗಿ 4,140 ಮಂದಿ ಕಣದಲ್ಲಿ ಉಳಿದಿದ್ದಾರೆ. ಬಂಡಾಯದ ಬಿಸಿ ಅನುಭವಿಸುತ್ತಿದ್ದ ಮಹಾಯುತಿ ಹಾಗೂ ಎಂವಿಎ ಮೈತ್ರಿಕೂಟಗಳಿಗೆ ಕೆಲವೆಡೆ ಸಮಾಧಾನವಾಗಿದ್ದರೆ, ಮತ್ತೆ ಕೆಲವೆಡೆ ಆತಂಕ ಮುಂದುವರಿದಿದೆ.

Advertisement

288 ಸದಸ್ಯ ಬಲದ ಅಸೆಂಬ್ಲಿ ಚುನಾವಣೆಗೆ ಒಟ್ಟು 10,900 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಈ ಪೈಕಿ 7,078 ಸಿಂಧುವಾಗಿದ್ದವು. 2,938 ಅಭ್ಯರ್ಥಿಗಳು ನಾಮಪತ್ರ ವಾಪಸ್‌ ಪಡೆದಿರುವ ಕಾರಣ, ಈಗ 4140 ಅಭ್ಯರ್ಥಿಗಳು ರಣಾಂಗಣದಲ್ಲಿ ಉಳಿದಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಮಾಹಿತಿ ನೀಡಿದ್ದಾರೆ. ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಅಭ್ಯರ್ಥಿಗಳ ಪ್ರಮಾಣ ಶೇ.28ರಷ್ಟು ಹೆಚ್ಚಳ(901)ವಾಗಿದ್ದು, ಕಳೆದ ಬಾರಿ 3239 ಮಂದಿ ಕಣದಲ್ಲಿದ್ದರು.

ಮಹಿಮ್‌ನಲ್ಲಿ ಮಹಾಯುತಿಗೆ ತಲೆನೋವು: ಮಹಿಮ್‌ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಶಿವಸೇನಾ ಅಭ್ಯರ್ಥಿ ದಾದಾ ಸರ್ವಂಕರ್‌ ಅವರು ಬಿಜೆಪಿಯ ಒತ್ತಡಕ್ಕೆ ಮಣಿಯದೇ ಇರುವುದು ಪಕ್ಷಕ್ಕೆ ತಲೆನೋವು ಉಂಟುಮಾಡಿದೆ. ಅವರು ಎಂಎನ್‌ಎಸ್‌ ಮುಖ್ಯಸ್ಥ ರಾಜ್‌ ಠಾಕ್ರೆ ಅವರ ಪುತ್ರ ಅಮಿತ್‌ ಠಾಕ್ರೆ ವಿರುದ್ಧವೇ ಕಣಕ್ಕಿಳಿದಿದ್ದಾರೆ. ಇಲ್ಲಿ ಬಿಜೆಪಿ ಅಮಿತ್‌ರಿಗೆ ಬೆಂಬಲ ಘೋಷಿಸಿದೆ. ಬೊರಿವಿಲಿಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಗೋಪಾಲ್‌ ಶೆಟ್ಟಿ ಅವರ ಮನವೊಲಿಸುವಲ್ಲಿ ಪಕ್ಷ ಯಶಸ್ವಿಯಾಗಿದ್ದು, ಅವರು ಉಮೇದುವಾರಿಕೆ ವಾಪಸ್‌ ಪಡೆದಿದ್ದಾರೆ.

ಮರಾಠಿ ಮೀಸಲು ಹೋರಾಟಗಾರ ಮನೋಜ್‌ ಜಾರಂಗೆ “ನನ್ನ ಬೆಂಬಲಿಗರು ಈ ಬಾರಿ ಸ್ಪರ್ಧಿಸಲ್ಲ, ಯಾರಿಗೂ ಬೆಂಬಲ ನೀಡಲ್ಲ’ ಎಂದು ಘೋಷಿಸಿದ್ದಾರೆ.

ಕೊಲ್ಹಾಪುರ ನಾರ್ತ್‌ನಲ್ಲಿ ಕಾಂಗ್ರೆಸ್‌ಗೆ ಶಾಕ್‌
ಕೊಲ್ಹಾಪುರ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಮಧುರಿಮಾ ರಾಜೇ ಛತ್ರಪತಿ ಅವರು ಏಕಾಏಕಿ ಸೋಮವಾರ ನಾಮಪತ್ರ ವಾಪಸ್‌ ಪಡೆದಿದ್ದಾರೆ. ಇದು ಕಾಂಗ್ರೆಸ್‌ಗೆ ತೀವ್ರ ಆಘಾತ ಉಂಟುಮಾಡಿದೆ. ಈಗ ಕಾಂಗ್ರೆಸ್‌ಗೆ ಈ ಕ್ಷೇತ್ರದಲ್ಲಿ ಅಭ್ಯರ್ಥಿಯೇ ಇಲ್ಲದಂತಾಗಿದೆ.

Advertisement

ಎಲ್ಲಿ ಹೆಚ್ಚು, ಎಲ್ಲಿ ಕಡಿಮೆ?
ನಂದೂರ್‌ಬಾರ್‌ನ ಶಹದಾ ಕ್ಷೇತ್ರದಲ್ಲಿ ಈಗ ಅತಿ ಕಡಿಮೆ ಅಂದರೆ ಕೇವಲ 3 ಅಭ್ಯರ್ಥಿಗಳು ಮಾತ್ರ ಉಳಿದುಕೊಂಡಿದ್ದಾರೆ. ಬೀಡ್‌ ಜಿಲ್ಲೆಯ ಮಜಲ್‌ಗಾಂವ್‌ನಲ್ಲಿ ಅತಿ ಹೆಚ್ಚು 34 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮುಂಬೈನ 36 ಕ್ಷೇತ್ರಗಳಲ್ಲಿ 420 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಪುಣೆಯ 21 ಕ್ಷೇತ್ರಗಳಲ್ಲಿ 303 ಮಂದಿ ಕಣಕ್ಕಿಳಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next