Advertisement

ಸಂಬಂಧ ಬೆಸೆಯುವ ಮೂಲಕ ಭೇದ-ಭಾವ ದೂರ ಮಾಡಿ

04:46 PM Sep 24, 2018 | |

ದಾವಣಗೆರೆ: ವೀರಶೈವ ಸಮಾಜದ ಎಲ್ಲಾ ಪಂಗಡದವರು ಪರಸ್ಪರ ಸಂಬಂಧ ಬೆಳೆಸುವ ಮೂಲಕ ಉಪಪಂಗಡದ ಭೇದಭಾವ ಹೋಗಲಾಡಿಸಲು ಪ್ರಯತ್ನಿಸಬೇಕು ಎಂದು ಶ್ರೀಶೈಲ ಜಗದ್ಗುರು ಡಾ| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.

Advertisement

ಶ್ರೀಶೈಲ ಜಗದ್ಗುರು ಲಿಂ. ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರ 32ನೇ ಸ್ಮರಣೋತ್ಸವ, ಲಿಂ. ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರ 7ನೇ ವರ್ಷದ ಸ್ಮರಣೋತ್ಸವ ಹಾಗೂ ಜನ ಜಾಗೃತಿ ಧರ್ಮ ಸಮ್ಮೇಳನದ 2ನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು.

ಎಲ್ಲರೂ ಧರಿಸುವ ಲಿಂಗ ಒಂದೇ, ಲಿಂಗಪೂಜೆ, ಧರ್ಮಾಚರಣೆಗಳು ಒಂದೇ ಆಗಿದ್ದು, ಒಳಪಂಗಡಗಳಲ್ಲಿ ಯಾರು ಕೂಡ ಶ್ರೇಷ್ಠ, ಕನಿಷ್ಠ ಎಂಬ ಭೇದಭಾವ ಮಾಡಬಾರದು. ಪರಸ್ಪರ ಸಂಬಂಧವನ್ನು ಬೆಳೆಸುವ ಮೂಲಕ ಸಮಾಜದ ಏಳ್ಗೆಗೆ ಶ್ರಮಿಸಬೇಕು ಎಂದರು.

ಇತೀಚೆಗೆ ಕೆಲ ರಾಜಕಾರಣಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಸರ್ಕಾರಿ ಸೌಲಭ್ಯಗಳ ಆಮಿಷ ತೋರಿಸಿ ಸಮಾಜದ ಒಗ್ಗಟ್ಟನ್ನು ಶಿಥಿಲಗೊಳಿಸಲು ಪ್ರಯತ್ನಿಸಿ ಮುಖಭಂಗಕ್ಕೊಳಗಾಗಿದ್ದಾರೆ. ವೀರಶೈವ ಸಮಾಜವನ್ನು ಯಾವುದೇ ಆಮಿಷದಿಂದ ಒಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ವೀರಶೈವ ಸಮಾಜದಲ್ಲಿ ವೃತ್ತಿಯನ್ನು ಅವಲಂಬಿಸಿ ಮಾತ್ರ ಹುಟ್ಟಿಕೊಂಡಿರುವ ಎಲ್ಲಾ ಒಳಪಂಗಡಗಳು ತಮ್ಮ ಎಲ್ಲಾ ಭೇದಭಾವಗಳನ್ನು ಮರೆತು ಒಂದಾಗದಿದ್ದರೆ ಭವಿಷ್ಯವಿಲ್ಲ. ಹಾಗಾಗಿ ಸಮಾಜದವರು ಒಗ್ಗಟ್ಟು ಪ್ರದರ್ಶಿಸಬೇಕು ಎಂದು
ತಿಳಿಸಿದರು. ಪಂಚಪೀಠದ ಜಗದ್ಗುರುಗಳು, ಬಸವಾದಿ ಶರಣರು ನಿರಂತರವಾಗಿ ಸಮಾಜವನ್ನು ಸರಿಪಡಿಸುವ ಕೆಲಸ ಮಾಡಿದ್ದಾರೆ. ಅವರೆಂದಿಗೂ ವಿಭಜನೆಗೆ ಅವಕಾಶ ನೀಡಿಲ್ಲ. ಆದರೆ ಕೆಲವು ಮಠಾಧೀಶರು ಶಿವಶರಣರ ಹೆಸರನ್ನು ಮುಂದೆ ಮಾಡಿ ಸಮಾಜವನ್ನು ಒಡೆಯಲು ಪ್ರಯತ್ನಿಸುತ್ತಿದ್ದು. ಅಂಥವರಿಂದ ಸಮಾಜದ ಜನತೆ ಸದಾ ಜಾಗೃತರಾಗಿರಬೇಕು ಎಂದು ತಿಳಿಸಿದರು.

Advertisement

ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌ .ಎ. ರವೀಂದ್ರನಾಥ್‌ ಸಮಾರಂಭ ಉದ್ಘಾಟಿಸಿ ಮಾತನಾಡಿ, ಈ ಹಿಂದೆ ನಮಗೆ ಲಿಂ. ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ಒಡನಾಟವಿತ್ತು. ಅವರು ಸದಾ ಮೃದು ಭಾಷೆಯ ಮೂಲಕ ಸಮಾಜದ ಜನರಿಗೆ ಒಳ್ಳೆ ಚಿಂತನೆ, ರೀತಿ-ನೀತಿ ಹಾಗೂ ಉತ್ತಮ ಕಾರ್ಯಗಳನ್ನು ಮಾಡಲು ಸದಾ ಪ್ರೇರಣೆ ನೀಡುತ್ತಿದ್ದರು ಎಂದು ಸ್ಮರಿಸಿಕೊಂಡರು. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಾರ್ಯದಲ್ಲಿ ಅವರು ತೊಡಗಿದ ಕೆಲಸ ನಿಜಕ್ಕೂ ಸ್ಮರಣೀಯ.

ಬಡವರ ಬಗ್ಗೆ ಅನುಕಂಪ, ಸಾಮಾಜಿಕ ಕಳಕಳಿಯನ್ನು ಉಮಾಪತಿ ಪಂಡಿತಾರಾಧ್ಯ ಸ್ವಾಮೀಜಿ ಹೊಂದಿದ್ದರು ಎಂದು ನುಡಿದರು. ಉಪನ್ಯಾಸಕ ನಂದೀಶ ಹಂಚೆ ಉಪನ್ಯಾಸ ನೀಡಿದರು. ಹುಣಸಘಟ್ಟ ಗುರುಹಾಲಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಉಪದೇಶಾಮೃತ, ಆವರಗೊಳ್ಳ ಪುರವರ್ಗಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಕೋಣಂದೂರು ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಅಂಬಿಕಾನಗರದ ಶ್ರೀ ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. 

ಬಿಜೆಪಿ ಮುಖಂಡ ನಾಗರಾಜ್‌ ಲೋಕಿಕೆರೆ, ಬಡಾವಣೆ ಪೊಲೀಸ್‌ ಠಾಣಾಧಿಕಾರಿ ವೀರಬಸಪ್ಪ ಕುಸಲಾಪುರ ಇತರರು ಉಪಸ್ಥಿತರಿದ್ದರು. ಕಸ್ತೂರಿ ಬಾ ಸಮಾಜದ ಸದಸ್ಯೆಯರು ಹಾಗೂ ಕಾಂತರಾಜ್‌ ಸಂಗಡಿಗರು ಸಂಗೀತ ನಡೆಸಿಕೊಟ್ಟರು.
ಡಿ.ಎಂ. ಹಾಲಸ್ವಾಮಿ ಸ್ವಾಗತಿಸಿದರು. ಕೆ.ಎಂ. ರುದ್ರಮುನಿಸ್ವಾಮಿ ನಿರೂಪಿಸಿದರು. ಎನ್‌.ಎಂ. ತಿಪ್ಪೇಸ್ವಾಮಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next