Advertisement
ಲೋಕಸಭಾ ಚುನಾವಣೆಯ ಟಿಕೆಟ್ ಘೋಷಣೆ ನಂತರ ಬದಲಾವಣೆ ಮಾಡಬೇಕು ಎಂದು ಪಟ್ಟು ಹಿಡಿದಿದ್ದ ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ್, ಎಂ.ಪಿ. ರೇಣುಕಾಚಾರ್ಯ, ಜಿ. ಕರುಣಾಕರರೆಡ್ಡಿ, ಮಾಜಿ ಶಾಸಕ ರಾದ ಡಾ| ಎ.ಎಚ್. ಶಿವಯೋಗಿಸ್ವಾಮಿ, ಎಂ. ಬಸವರಾಜನಾಯ್ಕ, ಟಿ. ಗುರುಸಿದ್ದನಗೌಡ, ಪುತ್ರ ಡಾ| ಟಿ.ಜಿ. ರವಿಕುಮಾರ್, ಮುಖಂಡ ಮಾಡಾಳ್ ಮಲ್ಲಿಕಾರ್ಜುನ್, ಮಾಜಿ ಮೇಯರ್ ಅಜಯ್ ಕುಮಾರ್, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್, ಎಲ್.ಎನ್. ಕಲ್ಲೇಶ್ ಇತರರೊಂದಿಗೆ ಮಂಗಳವಾರ ದಾವಣಗೆರೆ ಹೊರ ವಲಯದ ಅಪೂರ್ವ ರೆಸಾರ್ಟ್‌ನಲ್ಲಿ ಅತ್ಯಂತ ಸುದೀರ್ಘ ಮಹತ್ವದ ಸಭೆ ನಡೆಸಿದ ಯಡಿಯೂರಪ್ಪ, ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಭಿನ್ನ ಮತ ತಣಿಸಿದರು. ಇದರಿಂದ ಕಮಲ ಪಾಳೆಯದಲ್ಲಿನ ಆತಂಕ ದೂರವಾದಂತೆ ಆಗಿದೆ.
Related Articles
Advertisement
ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರು ದಾಖಲೆಗಳ ಮತಗಳ ಅಂತರದಲ್ಲಿ ಐತಿಹಾಸಿಕ ಜಯಗಳಿಸುವರು ಎಂದು ಕರ್ನಾಟಕ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ವಿಶ್ವಾಸ ವ್ಯಕ್ತಪಡಿಸಿದರು.
ಮಂಗಳವಾರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಹಾಲಿ, ಮಾಜಿ ಜನಪ್ರತಿನಿಧಿಗಳು, ಕಾರ್ಯಕರ್ತರು, ಸಂಘಟನೆಯ ವಿವಿಧ ಪದಾಧಿಕಾರಿಗಳ ಸಭೆ ನಡೆಸಲಾಯಿತು. ಇಡೀ ಸಭೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರನ್ನು ದಾಖಲೆಗಳ ಮತಗಳ ಅಂತರದಲ್ಲಿ ಐತಿಹಾಸಿಕ ಗೆಲುವಿನ ಸಾಮೂಹಿಕ ನಿರ್ಣಯ ಕೈಗೊಂಡಿತು ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ರಾಜ್ಯ ಚುನಾವಣಾ ಉಸ್ರುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ಅವರ ನೇತೃತ್ವದಲ್ಲಿ ಸಭೆ ನಡೆಸಿ ಲೋಕಸಭಾ ಅಭ್ಯರ್ಥಿಯಾಗಿ ಘೋಷಣೆ ಮಾಡಿರುವ ಗಾಯತ್ರಿ ಸಿದ್ದೇಶ್ವರ ಅವರ ಐತಿಹಾಸಿಕ ಗೆಲುವಿಗೆ ಒಗ್ಗಟ್ಟಾಗಿ ಗೆಲ್ಲಿಸಬೇಕು. ಮಾಜಿ ಸಚಿವ ರವೀಂದ್ರನಾಥ್ ಅವರಿಗೆ ಚುನಾವಣಾ ನೇತೃತ್ವದಲ್ಲಿ ಚುನಾವಣೆ ನಡೆಸಬೇಕು ಎಂಬ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಯಾವುದೇ ಷರತ್ತುಗಳಿಲ್ಲದೆ ರವೀಂದ್ರನಾಥ್ ಅವರ ನೇತೃತ್ವದಲ್ಲೇ ಲೋಕಸಭಾ ಚುನಾವಣೆ ನಡೆಸಿ, ಗಾಯತ್ರಿ ಸಿದ್ದೇಶ್ವರ ಅವರನ್ನು ಗೆದ್ದೆ ಗೆಲ್ಲುಸುವಲ್ಲಿ ಯಾವುದೇ ಸಂಶಯವೇ ಇಲ್ಲ. ದಾವಣಗೆರೆ ಕ್ಷೇತ್ರದಲ್ಲಿ ಎಲ್ಲವೂ ಬಗೆಹರಿದಿದೆ. ಮುಂದೆ ಯಾವುದೇ ಒಡಕಿನ ಮಾತೇ ಇಲ್ಲ. ಗಾಯತ್ರಿ ಸಿದ್ದೇಶ್ವರ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವ ಸರ್ವಾನುಮತದ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿಸಿದರು.
ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ನಮ್ಮ ನಡುವೆ ಬಗೆಹರಿಯಲಾರದಂತದ್ದು ಏನೂ ಆಗಿಯೇ ಇರಲಿಲ್ಲ. ಸಂಧಾನ ಏನೂ ಇಲ್ಲ. ನಾವು ಮಾತನಾಡದೇ ಇದ್ದ ಕಾರಣಕ್ಕೆ ಸಣ್ಣ ಪುಟ್ಟ ಸಮಸ್ಯೆ ಇದ್ದವು. ತೊಂದರೆ ಆಗಿತ್ತು. ಈಗ ಮಾತನಾಡಿದ ಮೇಲೆ ಎಲ್ಲವೂ ಬಗೆಹರಿದಿವೆ ಎಂದರು.
ಸಂಸದ ಡಾ| ಜಿ.ಎಂ. ಸಿದ್ದೇಶ್ವರ ಮಾತನಾಡಿ, ಎಲ್ಲವೂ ಚೆನ್ನಾಗಿದೆ. ಎಲ್ಲರೂ ಚೆನ್ನಾಗಿದ್ದಾರೆ. ದಾವಣಗೆರೆ ಲೋಕ ಸಭಾ ಕ್ಷೇತ್ರದಲ್ಲಿ ಗಾಯತ್ರಿ ಸಿದ್ದೇಶ್ವರ ಅವರನ್ನ ಗೆಲ್ಲಿಸಿ, ದಾವಣಗೆರೆಯಿಂದ ದೆಹಲಿಗೆ ಕಮಲವನ್ನ ಕಳಿಸಿ, ನರೇಂದ್ರ ಮೋದಿ ಅವರನ್ನ ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲಾಗುವುದು ಎಂದರು.