ಬಂಟ್ವಾಳ: ತುಂಬೆ ಡ್ಯಾಂ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಲು ಮುಂದಿನ ಬಜೆಟ್‌ನಲ್ಲಿ 250 ಕೋ. ರೂ. ಮೀಸಲಿಡುವಂತೆ ಮುಖ್ಯ ಸಚೇತಕ ಐವನ್ ಡಿ’ಸೋಜಾ ಸರಕಾರಕ್ಕೆ ಮನವಿ ಮಾಡಿದ್ದಾರೆ. ಈ ಮೊತ್ತ ಏನೇನು ಸಾಲದು. ಕನಿಷ್ಠ 500 ಕೋ.ರೂ.ಗಳನ್ನಾದರೂ ನೀಡಬೇಕು ಎಂದು ತುಂಬೆ ಡ್ಯಾಂ ಸಂತ್ರಸ್ತ ಹೋರಾಟ ಸಮಿತಿ ಹೇಳಿದೆ. 13 ವರ್ಷಗಳ ಈ ಜ್ವಲಂತ ಸಮಸ್ಯೆಗೆ ಈಗಾಗಲೇ ಬಜೆಟ್‌ನಲ್ಲಿ ಸಾಕಷ್ಟು ಅನುದಾನ ನೀಡಬೇಕಾಗಿತ್ತು. ನೇತ್ರಾವತಿಗೆ ತುಂಬೆಯಲ್ಲಿ 11 ಮೀಟರ್ ಎತ್ತರದ ಡ್ಯಾಂ ನಿರ್ಮಿಸಿದರೆ ಕೃಷಿಭೂಮಿ ಜಲಾವೃತಗೊಳ್ಳಲಿದ್ದು ಅದಕ್ಕೆ ಪ್ರತಿಯಾಗಿ ಕೃಷಿ ಭೂಮಿ, ನ್ಯಾಯೋಚಿತ ಸೂಕ್ತ ಪರಿಹಾರ ನೀಡಬೇಕು ಎಂದು ಸಮಿತಿ ಒತ್ತಾಯಿಸಿದೆ.
ಹಿತಾಸಕ್ತಿ ಕಾಪಾಡಲು ವಿಫಲ
ಮುಳುಗಡೆ ಜಮೀನಿನ ಸ್ಪಷ್ಟ, ಲಿಖೀತ ಮಾಹಿತಿ ನೀಡಬೇಕೆಂದು 2004ರಿಂದ ಒತ್ತಾಯಿಸಿದರೂ ರೈತರ ಹಿತಾಸಕ್ತಿ ಕಾಪಾಡುವಲ್ಲಿ ಜಿಲ್ಲಾಡಳಿತ ತನ್ನ ಇಚ್ಚಾಶಕ್ತಿ ತೋರಿಸಿಲ್ಲ. 2004ರಲ್ಲಿ ಅಂದಿನ ಜಿಲ್ಲಾಧಿಕಾರಿ ರೈತರಿಗೆ ಪರಿಹಾರ ನೀಡಲು 3 ಕೋ.ರೂ. ತೆಗೆದಿಡಲಾಗಿದೆ ಎಂದಿದ್ದರು. 2012ರಲ್ಲಿ ಪ್ರಕಾಶ್ ಅವರು ಜಿಲ್ಲಾಧಿಕಾರಿಯಾಗಿದ್ದಾಗ ರೈತರ ಸಭೆ ಜರಗಿಸಿ ಪ್ರತಿ ಎಕರೆಗೆ 50 ಲಕ್ಷ ರೂ. ಪರಿಹಾರ, ಅಂದಾಜು 500 ಕೋ.ರೂ. ಅನುದಾನಕ್ಕೆ ಪ್ರಸ್ತಾವನೆ, 2017ರಲ್ಲಿ ರೈತರಿಗೆ 7 ಕೋ.ರೂ. ಪರಿಹಾರ ಧನ ವಿತರಿಸಲಾಗುವುದು ಎಂದು ಸ್ಥಳೀಯ ಜಿ.ಪಂ ಸದಸ್ಯರು ತಿಳಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವರು ಒಟ್ಟು 488 ಎಕರೆ ಮುಳುಗಡೆಯಾಗಲಿದ್ದು ಎಲ್ಲ ರೈತರಿಗೂ ಪರಿಹಾರ ಒದಗಿಸಲಾಗುವುದು ಎಂದಿದ್ದರು. ಆದರೆ ಸಂತ್ರಸ್ತ ರೈತರಿಗೆ ಈ ತನಕ ಶಾಶ್ವತ ಪರಿಹಾರ ದೊರೆತಿಲ್ಲ ಎಂದಿದೆ.
ಕೇಂದ್ರ ಜಲ ಆಯೋಗ ನಿರ್ದೇಶನದಂತೆ ಒರತೆ ಪ್ರದೇಶ ಸೇರಿ ಸರ್ವೆ ನಡೆಸಿದಲ್ಲಿ ಮುಳುಗಡೆ ಪ್ರದೇಶ ಇನ್ನೂ ಜಾಸ್ತಿಯಾಗಲಿದ್ದು ಎಲ್ಲರಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರಕಾರ 500 ಕೋಟಿ ರೂ.ಗೂ ಹೆಚ್ಚು ಅನುದಾನ ಬಿಡುಗಡೆಗೊಳಿಸಬೇಕು ಎಂದು ಕರ್ನಾಟಕ ರೈತಸಂಘ ಹಸಿರುಸೇನೆ ಜಿಲ್ಲಾ ಕಾರ್ಯದರ್ಶಿ ಮನೋಹರ್ ಶೆಟ್ಟಿ. ತುಂಬೆ ಡ್ಯಾಂ ಸಂತ್ರಸ್ತ ಹೋರಾಟ ಸಮಿತಿ ಅಧ್ಯಕ್ಷ ಎಂ. ಸುಬ್ರಹ್ಮಣ್ಯ ಭಟ್, ಪದಾಧಿಕಾರಿಗಳಾದ ಎನ್.ಕೆ, ಇದಿನಬ್ಬ, ಶರತ್ ಕುಮಾರ್, ಸುದೇಶ ಮಯ್ಯ, ಅಬ್ದುಲ್ ರಹಿಮಾನ್ ಆಗ್ರಹಿಸಿದ್ದಾರೆ.