Advertisement

ತುಳು ಶಿವಳ್ಳಿ ಸಭಾ: ಧರ್ಮಸ್ಥಳ ವಲಯದ  ಸಭೆ

05:05 AM Jul 20, 2017 | Harsha Rao |

ಬೆಳ್ತಂಗಡಿ: ತುಳು ಶಿವಳ್ಳಿ ಬ್ರಾಹ್ಮಣರು ಎಲ್ಲವನ್ನೂ ಸಹಿಸಿಕೊಂಡು ಬದಲಾವಣೆಗೆ ಒಗ್ಗಿಕೊಳ್ಳುವ ಸಾಮರ್ಥ್ಯ ಹೊಂದಿದವರು. ಹೆಚ್ಚು ಬಾಗಿಕೊಳ್ಳುವ, ಒಗ್ಗುವಿಕೆ, ಸಮರಸದಿಂದ ದೀರ್ಘ‌ಕಾಲ ಯಶಸ್ಸಿನ ಹಾದಿಯಲ್ಲಿ ನಡೆಯುವವರು. ತುಳುನಾಡಿನ ಮಣ್ಣಿನ ಸತ್ವ ಹೊಂದಿದ ಬ್ರಾಹ್ಮಣರು ಜ್ಞಾನವನ್ನು ಇತರರಿಗೆ ಕೊಡು- ಕೊಳ್ಳಲು ಸಮರ್ಥರು. ಪ್ರಕೃತಿಯೊಂದಿಗೆ ಸಮರಸದ ಪ್ರತೀಕವೇ ಶಿವಳ್ಳಿ ಬ್ರಾಹ್ಮಣರು ಎಂದು ಉಪನ್ಯಾಸಕ ಅವಿನಾಶ್‌ ಕೊಡಂಕೇರಿ ಅಭಿಪ್ರಾಯಪಟ್ಟರು.

Advertisement

ಅವರು ಧರ್ಮಸ್ಥಳದ ಶಿವಪಾರ್ವತಿ ಕೃಪಾದಲ್ಲಿ ತುಳು ಶಿವಳ್ಳಿ ಸಭಾ ಧರ್ಮಸ್ಥಳ ವಲಯದ ವತಿಯಿಂದ ನಡೆದ ಮಾಸಿಕ ಸಭೆಯಲ್ಲಿ ಆಟಿ ಆಚರಣೆಯ ಮಹತ್ವದ ಕುರಿತು ಮಾತನಾಡಿದರು.

ಧಾರಾಕಾರ ಮಳೆ, ಬಿಸಿಲು, ವಿಭಿನ್ನ ವಾತಾವರಣದ ರೋಗರುಜಿನಗಳ ತಿಂಗಳು ಆಟಿ. ಆಟಿಯ ಆಹಾರ ಪದ್ಧತಿಯಲ್ಲೂ ಔಷಧೀಯ ಗುಣಗಳಿವೆ. ಆಟಿಯನ್ನು ಆಶಾದಾಯಕವಾಗಿ ಕಳೆಯಲು ಕಂಡುಕೊಂಡ ಹಾದಿಯೇ ಆಟಿ ಆಚರಣೆ. ಆಟಿಯ ಸಾಮೂಹಿಕ ಆಚರಣೆಯ ಮೌಲ್ಯವನ್ನು ಮುಂದಿನ ಪೀಳಿಗೆಗೂ ಮುನ್ನಡೆಸಬೇಕು ಎಂದರು.

ತಾಲೂಕು ತುಳು ಶಿವಳ್ಳಿ ಸಭಾದ ಗೌರವಾಧ್ಯಕ್ಷ ವಿಜಯರಾಘವ ಪಡ್ವೆಟ್ನಾಯ ಅವರು, ಆಟಿ ತಿಂಗಳು ಎಲ್ಲರಿಗೂ ಕಪ್ಪು ಮಾಸವಾಗಿ ಶುಭ ಕಾರ್ಯಗಳಿಗೆ ನಿಷಿದ್ಧವೆಂದು ಪರಿಗಣಿಸಲ್ಪಟ್ಟರೂ ದೇವತಾ ಕಾರ್ಯ ಹಾಗೂ ಮಹಿಳೆಯರಿಗೆ ತಾಯಿ ಮನೆಯಲ್ಲಿ ಆಟಿ ಸಂಭ್ರಮದ ತಿಂಗಳು. ಅದನ್ನು ಎಲ್ಲ ಸುಖದುಃಖ ಮರೆತು ಸಂತೋಷದಿಂದ ಸಾಮೂಹಿಕವಾಗಿ ಆಚರಿಸೋಣ ಎಂದರು.

ವಲಯಾಧ್ಯಕ್ಷ ಗಿರೀಶ ಕುದ್ರೆಂತ್ತಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅರಣ್ಯ ಇಲಾಖೆಯಿಂದ ಅರಣ್ಯ ಮಿತ್ರ ಪ್ರಶಸ್ತಿ ಪಡೆದ ಶ್ರೀಕಾಂತ ರಾವ್‌ ಮುಂಡ್ರುಪ್ಪಾಡಿ ಹಾಗೂ ಪುದುವೆಟ್ಟು ಎಸ್‌ಡಿಎಂ ಪ್ರಾಥಮಿಕ ಶಾಲೆಗೆ ಮುಖ್ಯ ಶಿಕ್ಷಕರಾಗಿ ಭಡ್ತಿಗೊಂಡ ವಲಯ ಕಾರ್ಯದರ್ಶಿ ವಸಂತ್‌ ಭಟ್‌ ಅವರನ್ನು ವಲಯದ ವತಿಯಿಂದ ಸಮ್ಮಾನಿಸಲಾಯಿತು.

Advertisement

ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ, ಧರ್ಮಸ್ಥಳ ವಲಯ ಉಪಾಧ್ಯಕ್ಷ ರಾಜಶೇಖರ ಹೆಬ್ಟಾರ್‌ ಉಪಸ್ಥಿತರಿದ್ದರು.

ಎಸೆಸೆಲ್ಸಿ, ಪಿಯುಸಿ, ಪದವಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಲಯದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸಲಾಯಿತು.

ಮನೋರಮಾ ತೋಳ್ಪಾಡಿತ್ತಾಯ ಸಮ್ಮಾನಿತರನ್ನು ಪರಿಚಯಿಸಿ, ಸ್ವಾಗತಿಸಿದರು. ಶ್ರೀಕಾಂತ ರಾವ್‌ ಅನಿಸಿಕೆ ವ್ಯಕ್ತ
ಪಡಿಸಿದರು. ಸುಬ್ರಹ್ಮಣ್ಯ ಪಡ್ವೆಟ್ನಾಯ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ವಸಂತ ಭಟ್‌ ವರದಿ ಮಂಡಿಸಿ, ಶಶಿಧರ ಉಪಾಧ್ಯಾಯ ವಂದಿಸಿದರು. ಆಟಿಯ ವಿಶೇಷ ಖಾದ್ಯ ತಿನಿಸುಗಳ ಸಹ ಭೋಜನ ವ್ಯವಸ್ಥೆಗೊಳಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next