Advertisement

Puttur: ಚೆನ್ನಾಗಿ ಮಳೆ ಬಂದರೂ ಕುಸಿದ ಅಂತರ್ಜಲ ಮಟ್ಟ

05:20 PM Nov 25, 2024 | Team Udayavani |

ಪುತ್ತೂರು: ಹಿಂದಿನ ಮತ್ತು ಈ ವರ್ಷದ ಸೆಪ್ಟೆಂಬರ್‌ ತಿಂಗಳಲ್ಲಿ ಕೊಳವೆ ಬಾವಿಯ ಅಂತರ್ಜಲ ಮಟ್ಟವನ್ನು ಹೋಲಿಕೆ ಮಾಡಿದರೆ ಈ ಬಾರಿ ಬಹುತೇಕ ತಾಲೂಕುಗಳಲ್ಲಿ ಕುಸಿತವೇ ದಾಖಲಾಗಿದೆ.

Advertisement

ಅಂದರೆ, ಈ ವರ್ಷದ ಬಹುತೇಕ ತಿಂಗಳು ಮಳೆ ಸುರಿದಿದ್ದರೂ ಇದರ ಪರಿಣಾಮ ಕೊಳವೆ ಬಾವಿ ಅಂತರ್ಜಲ ಮಟ್ಟ ಹೆಚ್ಚಳ ಕಾಣಿಸಿಲ್ಲ. ಇನ್ನೊಂದೆಡೆ ತೆರೆದ ಬಾವಿಯ ಅಂತರ್ಜಲ ಮಟ್ಟದಲ್ಲಿ ಕೊಂಚ ಏರಿಕೆ ಕಂಡು ಬಂದಿರುವುದು ಅಂತರ್ಜಲ ಮಟ್ಟದ ಪ್ರಮಾಣದ ಅಧ್ಯಯನ ವರದಿಯಲ್ಲಿ ಕಂಡು ಬಂದಿದೆ. ಇಲ್ಲಿ ತೆರೆದ ಬಾವಿಗಿಂತಲೂ ಕೊಳವೆ ಬಾವಿಯ ಅಂತರ್ಜಲ ಮಟ್ಟ ಮುಖ್ಯವಾಗಿದ್ದು ಅದು ಕುಸಿತ ದಾಖಲಾದಷ್ಟು ಅಂತರ್ಜಲ ಅಸುರಕ್ಷಿತವಾಗಿಯೇ ಇದೆ ಎಂದರ್ಥ.

ತಾಲೂಕಿನ ಸ್ಥಿತಿಗತಿ
2023ರ ಸೆಪ್ಟೆಂಬರ್‌ ತಿಂಗಳ ಹಾಗೂ 2024ರ ಸೆಪ್ಟಂಬರ್‌ ತಿಂಗಳ ಅಂತರ್ಜಲ ಮಟ್ಟ ಗಮನಿಸಿದರೆ ಪುತ್ತೂರು, ಬೆಳ್ತಂಗಡಿ, ಉಳ್ಳಾಲದಲ್ಲಿ ಕೊಳವೆ ಬಾವಿ ಅಂತರ್ಜಲ ಮಟ್ಟ ಕೊಂಚ ಏರಿಕೆ ಕಂಡಿದ್ದರೆ, ಮಂಗಳೂರು, ಬಂಟ್ವಾಳ, ಮೂಲ್ಕಿ, ಮೂಡಬಿದಿರೆ, ಸುಳ್ಯದಲ್ಲಿ ಪಾತಾಳದತ್ತ ಮುಖ ಮಾಡಿದೆ. ಇಳಿಕೆ ಕಂಡ ತಾಲೂಕಿನಲ್ಲಿ ನಿರಂತರ ಮಳೆಯಾಗುತ್ತಿದ್ದರೂ ಕೊಳವೆ ಬಾವಿ ನೀರಿನ ಮಟ್ಟ ಇನ್ನೂ ಸುರಕ್ಷಿತವಾಗದೇ ಇರುವುದು ಆತಂಕಕಾರಿ ಸಂಗತಿ.

2023 ಅಕ್ಟೋಬರ್‌, ಸೆಪ್ಟೆಂಬರ್‌ ಹಾಗೂ 2024 ಅಕ್ಟೋಬರ್‌, ಸೆಪ್ಟೆಂಬರ್‌ ತಿಂಗಳ ತೆರೆದ ಬಾವಿ ಅಂತರ್ಜಲ ಮಟ್ಟದ ಗಮನಿಸಿದರೆ ಈ ವರ್ಷ ಸ್ವಲ್ಪ ಪರವಾಗಿಲ್ಲ ಅನ್ನುತ್ತಿದೆ ಅಧ್ಯಯನ. ಆದರೆ ಬೇಸಗೆ ಬಿಸಿ ಹೆಚ್ಚಾದಂತೆ ಇಲ್ಲೂ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ.

ಮೂಡುಬಿದಿರೆಯಲ್ಲಿ ಭಾರೀ ಇಳಿಕೆ
ಮೂಡುಬಿದಿರೆ ತಾಲೂಕಿನಲ್ಲಿ ಕೊಳವೆ ಬಾವಿಯ ಅಂತರ್ಜಲ ಮಟ್ಟ ಭಾರೀ ಕುಸಿತ ಕಂಡಿರುವುದು ಕಳೆದ ಎರಡು ವರ್ಷದ ಅಕ್ಟೋಬರ್‌, ಸೆಪ್ಟೆಂಬರ್‌ ತಿಂಗಳ ಅಂತರ್ಜಲ ವರದಿ ತಿಳಿಸುತ್ತಿದೆ. 2023ರ ಅಕ್ಟೋಬರ್‌ನಲ್ಲಿ 27.45 ಮೀ., 24ರ ಅಕ್ಟೋಬರ್‌ನಲ್ಲಿ 26.58 ಮೀ., 2024 ರ ಸೆಪ್ಟೆಂಬರ್‌ನಲ್ಲಿಯು 25 ಮೀ.ಕೆಳಭಾಗದಲ್ಲಿ ಅಂತರ್ಜಲ ಮಟ್ಟ ಇದೆ. ಅಂದರೆ ಇಲ್ಲಿ ವರ್ಷದಿಂದ ವರ್ಷಕ್ಕೆ ಕೊಳವೆಬಾವಿ ನೀರಿನ ಮಟ್ಟ ಪಾತಾಳಕ್ಕೆ ಇಳಿದಿದೆ.

Advertisement

ತಾಲೂಕು           2023      2024
ಪುತ್ತೂರು              9.55          9.40
ಬಂಟ್ವಾಳ             6.50          7.00
ಬೆಳ್ತಂಗಡಿ             14.04        12.74
ಕಡಬ                    5.63          6.63
ಮಂಗಳೂರು        21.90        22.00
ಮೂಲ್ಕಿ                7.88         8.35
ಮೂಡುಬಿದಿರೆ     25.57       25.60
ಸುಳ್ಯ                     11.03       11.0

ನೀರನ್ನು ಮಿತ ಬಳಕೆ ಮಾಡುವ ಬಗ್ಗೆ ನಾವು ಗಮನ ಹರಿಸಬೇಕು. ಮನೆ ಮನೆಗಳಲ್ಲಿ ಕೊಳವೆ ಬಾವಿ ಜಲ ಮರುಪೂರಣಕ್ಕೆ ಹೆಚ್ಚು ಆದ್ಯತೆ ನೀಡ ಬೇಕು.
-ದಾವೂದ್‌ ಭೂ ವಿಜ್ಞಾನಿ, ಅಂತರ್ಜಲ ವಿಭಾಗ ಮಂಗಳೂರು

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next