Advertisement
ಮಂಗಳೂರು ಪಾಲಿಕೆಯ ನೂತನ ಮೇಯರ್ ಆಯ್ಕೆ ಕಳೆದ ತಿಂಗಳು ಸೆ. 19ರಂದು ನಡೆದಿದ್ದು, ಅದೇ ದಿನ ವಿಧಾನಪರಿಷತ್ ನೀತಿ ಸಂಹಿತೆ ದಿನಾಂಕ ಘೋಷಣೆಯಾಗಿ ಆ ದಿನದಿಂದಲೇ ನೀತಿ ಸಂಹಿತೆ ಜಾರಿಯಾಗಿತ್ತು. ಈ ಕಾರಣಕ್ಕೆ ಆ ತಿಂಗಳ ಪಾಲಿಕೆ ಸಭೆ ನಡೆದಿರಲಿಲ್ಲ. ಅಕ್ಟೋಬರ್ ತಿಂಗಳ ಅಂತ್ಯದಲ್ಲಿ ಪಾಲಿಕೆ ಸಭೆ ನಡೆಸಲು ಅವಕಾಶ ಇದ್ದರೂ, ಸ್ಥಾಯೀ ಸಮಿತಿ ಅಧ್ಯಕ್ಷರ ನೇಮಕ ಇನ್ನಷ್ಟೇ ಆಗಬೇಕು. ಸಮಿತಿಗಳಿಗೆ ಪ್ರತ್ಯೇಕವಾಗಿ ನೋಟೀಸ್ ನೀಡಿ ಸ್ಥಾಯೀ ಸಮಿತಿ ಅಧ್ಯಕ್ಷರ ನೇಮಕ ಮಾಡಬೇಕು. ಆದರೆ ನೀತಿ ಸಂಹಿತೆ ಕಾರಣದಿಂದ ಅಧ್ಯಕ್ಷರ ನೇಮಕಕ್ಕೆ ತಡೆ ಬಿದ್ದಿದೆ. ಅ. 28ರ ವರೆಗೆ ನೀತಿ ಸಂಹಿತೆ ಇರುವ ಕಾರಣ ಅಲ್ಲಿಯವರೆಗೆ ಸ್ಥಾಯೀ ಸಮಿತಿಗೂ ಅಧಿಕಾರವಿಲ್ಲ-ಅಧ್ಯಕ್ಷರೂ ಇಲ್ಲ. ನೀತಿ ಸಂಹಿತೆ ಅ. 28ಕ್ಕೆ ಪೂರ್ಣವಾದರೂ ಸ್ಥಾಯೀ ಸಮಿತಿ ಸದಸ್ಯರಿಗೆ ನೋಟೀಸ್ ನೀಡಿ 7 ದಿನಗಳ ಅವಧಿ ಬೇಕು. ಆ ಬಳಿಕವಷ್ಟೇ ಸ್ಥಾಯೀ ಸಮಿತಿಗೆ ಅಧ್ಯಕ್ಷರ ನೇಮಕ ವಾಗುತ್ತದೆ. ಅದಾದ ಅನಂತರವಷ್ಟೇ ಸಾಮಾನ್ಯ ಸಭೆ. ಹೀಗಾಗಿ ಮುಂದಿನ ಸಾಮಾನ್ಯ ಸಭೆ ನವೆಂಬರ್ ಮೊದಲ/ಎರಡನೇ ವಾರದಲ್ಲಿ ನಡೆಯುವ ಸಾಧ್ಯತೆ ಇದೆ.
ನಿಕಟಪೂರ್ವ ಮೇಯರ್ ಸುಧೀರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಫೆ. 29ರಂದು ಪಾಲಿಕೆ ಸಾಮಾನ್ಯ ಸಭೆ ನಡೆದಿದ್ದರೂ ಆಸ್ತಿ ತೆರಿಗೆ ಹೆಚ್ಚಳ ವಿಚಾರದಿಂದ ಅಂದಿನ ಸಾಮಾನ್ಯ ಸಭೆಯಲ್ಲಿ ಪ್ರತಿಭಟನೆ ನಡೆಸಿದ ಪರಿಣಾಮ ಆ ಸಾಮಾನ್ಯ ಸಭೆಯು ಅರ್ಧದಲ್ಲಿಯೇ ನಿಂತಿತ್ತು. ಬಳಿಕ ಮಾರ್ಚ್‌ನಲ್ಲಿ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾಗಿ ಮಾರ್ಚ್, ಎಪ್ರಿಲ್ ಹಾಗೂ ಮೇ ತಿಂಗಳಿನ ಸಾಮಾನ್ಯ ಸಭೆಯೇ ನಡೆದಿರಲಿಲ್ಲ. ಇದೀಗ ಹೊಸ ಮೇಯರ್ ಅವರಿಗೆ ಸೆಪ್ಟಂಬರ್, ಅಕ್ಟೋಬರ್ ತಿಂಗಳುಗಳ ಸಾಮಾನ್ಯ ಸಭೆ ನಡೆಸುವಂತಿಲ್ಲ. ಈ ಮೂಲಕ ಈ ವರ್ಷದಲ್ಲಿ 5 ಸಾಮಾನ್ಯ ಸಭೆಗೆ ಕಂಟಕ ಎದುರಾಗಿದೆ. ಪಾಲಿಕೆಯ ಕಳೆದ ಬಾರಿಯ ಕಾಂಗ್ರೆಸ್ ಆಡಳಿತಾವಧಿ 2019ರ ಮಾ. 11ಕ್ಕೆ ಮುಕ್ತಾಯವಾಗಿತ್ತು. ಅದರ ಮುನ್ನ ಫೆಬ್ರವರಿಯಲ್ಲಿ ಮೇಯರ್ ಭಾಸ್ಕರ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆದಿತ್ತು. ಆ ಬಳಿಕ 2020ರ ಜೂನ್‌ವರೆಗೆ 16 ಪಾಲಿಕೆ ಸಾಮಾನ್ಯ ಸಭೆಯೇ ನಡೆದಿರಲಿಲ್ಲ. ವಾರ್ಡ್ ಸಭೆಗೂ ಕುತ್ತು !
ಚುನಾವಣ ನೀತಿ ಸಂಹಿತೆಯು ಪಾಲಿಕೆ ಸಾಮಾನ್ಯ ಸಭೆೆಯ ಜತೆ ವಾರ್ಡ್ ಮಟ್ಟದಲ್ಲಿ ನಡೆಯುವ ವಾರ್ಡ್ ಸಭೆಗೂ ಅಡ್ಡಿಯಾಗಿದೆ. ನಗರದಲ್ಲಿ ಈ ಹಿಂದೆ ವಾರ್ಡ್ ಮಟ್ಟದಲ್ಲಿ ಸಮರ್ಪ ಕವಾಗಿ ವಾರ್ಡ್ ಸಮಿತಿ ಸಭೆ ನಡೆಯುತ್ತಿರಲಿಲ್ಲ. ಆದರೆ ನೀತಿ ಸಂಹಿತೆ ಕಾರಣಕ್ಕೆ ಸದ್ಯ ಸಭೆ ರದ್ದುಗೊಂಡಿದೆ.