Advertisement

ಕೋವಿಡ್‌-19 ಸಮಯದಲ್ಲಿ ಕ್ಷಯ ರೋಗಿಗಳ ಆರೈಕೆ

08:31 PM Sep 25, 2021 | Team Udayavani |

ಪ್ರಪಂಚದಾದ್ಯಂತ ಕೋವಿಡ್‌ -19 ಸಾಂಕ್ರಾಮಿಕ ರೋಗ ಮತ್ತು ಅದರ ಹರಡುವಿಕೆಯನ್ನು ತಡೆಯುವ ಜವಾಬ್ದಾರಿಗಳಿಂದ ಆರೋಗ್ಯ ಅಧಿಕಾರಿಗಳಿಗೆ ಮತ್ತು ಅದರ ಸಿಬಂದಿಗಳಿಗೆ ಹೆಚ್ಚಿನ ಹೊರೆಯಾಗಿದೆ. ಇದು ಕ್ಷಯ ರೋಗ (ಟಿಬಿ)ದಂತಹ ಇತರ ಕಾಯಿಲೆಗಳ ಉಪಚಾರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಗಳ ಪ್ರಕಾರ, ಭಾರತವು ಹೆಚ್ಚಿನ ಕ್ಷಯ ರೋಗಿಗಳನ್ನು ಹೊಂದಿದ ದೇಶ. ರಾಷ್ಟ್ರೀಯ ಆರೋಗ್ಯ ಮಿಷನ್‌ ವರದಿ ಪ್ರಕಾರ ಕೋವಿಡ್‌ ಬಳಿಕ ಟಿಬಿ ರೋಗ ನಿರ್ಣಯ, ಮೇಲ್ವಿಚಾರಣೆ ಮತ್ತು ಚಿಕಿತ್ಸೆಗಾಗಿ ಆರೋಗ್ಯ ಸೌಲಭ್ಯಗಳ ಬಳಕೆಯಲ್ಲಿ ಭಾರೀ ಕುಸಿತ ಕಂಡುಬಂದಿದೆ. ಕಳೆದ ವರ್ಷದ ವರದಿಗಳಿಗೆ ಹೋಲಿಸಿದರೆ, 2021ರಲ್ಲಿ ಸಕ್ರಿಯ ಕ್ಷಯರೋಗ ಪ್ರಕರಣ ಪತ್ತೆ ಹಚ್ಚುವಿಕೆ ದೇಶದಲ್ಲಿ ಶೇ. 38 ಮತ್ತು ಕರ್ನಾಟಕದಲ್ಲಿ ಶೇ. 33 ಕಡಿಮೆಯಾಗಿದೆ ಎಂದು ಭಾರತೀಯ ಟಿಬಿ ವರದಿಯಲ್ಲಿ ಹೇಳಲಾಗಿದೆ.
ರಾಷ್ಟ್ರೀಯ ಕ್ಷಯರೋಗ ನಿರ್ಮೂಲನೆ ಕಾರ್ಯಕ್ರಮದಡಿ ಈ ಸಾಂಕ್ರಾಮಿಕ ರೋಗದ ಸಮಯದಲ್ಲಿ ಕ್ಷಯ ರೋಗವನ್ನು ಪತ್ತೆ ಹಚ್ಚುವ ಕಫ ಪರೀಕ್ಷೆಯ ಹಳೆಯ ವಿಧಾನವನ್ನು ಟ್ರಾನಾಟ್‌ ಪರೀಕ್ಷೆಗೆ ನವೀಕರಿಸಲಾಗಿದೆ. ರಾಷ್ಟ್ರೀಯ ಕ್ಷಯರೋಗ ನಿರ್ಮೂಲನೆ ಕಾರ್ಯಕ್ರಮದಡಿ ಸೆಪ್ಟಂಬರ್‌ 2020ರಲ್ಲಿ ವರದಿಯಾಗದ ಎಲ್ಲ ಕ್ಷಯರೋಗ ಪ್ರಕರಣಗಳನ್ನು ಕಂಡುಹಿಡಿಯಲು ಹಾಗೂ ಕ್ಷಯರೋಗ ಮತ್ತು ಕೋವಿಡ್‌ -19 ಕಾಯಿಲೆಗಳಿಗೆ ಒಂದೇ ಸಮಯದಲ್ಲಿ ತಪಾಸಣೆ ನಡೆಸಲು ಪ್ರಾರಂಭ ಮಾಡಿದ್ದಾರೆ.

Advertisement

ಸಕ್ರಿಯ ಟಿಬಿ ರೋಗಿಗಳಿಗೆ ನಿರಂತರ ಸೇವೆಯನ್ನು ಒದಗಿಸುವುದು ಈ ಕೋವಿಡ್‌ ಸಾಂಕ್ರಾಮಿಕ ಪಿಡುಗಿನ ಪರಿಸ್ಥಿತಿಯಲ್ಲಿ ಒಂದು ದೊಡ್ಡ ಸವಾಲು. ಕ್ಷಯರೋಗವನ್ನು ನಿರ್ಮೂಲನೆ ಮಾಡಲು ರಾಷ್ಟ್ರೀಯ ಕ್ಷಯರೋಗ ನಿರ್ಮೂಲನೆ ಕಾರ್ಯಕ್ರಮದ ಜತೆಗೆ ರೋಗಿಗಳು ಸರಿಯಾದ ಸಮಯದಲ್ಲಿ ಔಷಧಗಳನ್ನು ತೆಗೆದುಕೊಳ್ಳುವುದು, ಸರಿಯಾದ ಸಮಯದಲ್ಲಿ ಪರೀಕ್ಷೆಗೆ ಬರುವುದು ಮತ್ತು ಔಷಧದ ಅಡ್ಡ ಪರಿಣಾಮಗಳನ್ನು ಬೇಗನೆ ವರದಿ ಮಾಡುವ ಮೂಲಕ ಈ ಸವಾಲುಗಳನ್ನು ನಿವಾರಿಸಬಹುದು. ರಾಷ್ಟ್ರೀಯ ಕ್ಷಯರೋಗ ನಿರ್ಮೂಲನೆ ಕಾರ್ಯಕ್ರಮ ಎದುರಿಸುತ್ತಿರುವ ಕೆಲವು ಸವಾಲುಗಳು ಮತ್ತು ಶಿಫಾರಸುಗಳನ್ನು ಕೆಳಗೆ ಉಲ್ಲೇಖೀಸಲಾಗಿದೆ.

ಸವಾಲುಗಳು
– ಲಾಕ್‌ಡೌನ್‌ನಿಂದಾಗಿ ಅನಾವಶ್ಯಕ ವಾಹನ ಸಂಚಾರವನ್ನು ತಡೆಹಿಡಿಯಲಾಗಿತ್ತು ಹಾಗೂ ಆರೋಗ್ಯ ಸೇವೆಗಳು ಮತ್ತು ಆಸ್ಪತ್ರೆ ಸೌಲಭ್ಯಗಳ ಬಳಕೆಗೆ ಅವಕಾಶ ಕಡಿಮೆ ಇತ್ತು.
-ಆರೋಗ್ಯ ಕಾರ್ಯಕರ್ತರು ಕೋವಿಡ್‌ -19 ಸಂಬಂಧಿ ಕೆಲಸಗಳನ್ನು ಮಾಡುತ್ತಿದ್ದ ಕಾರಣದಿಂದಾಗಿ ಕ್ಷಯ ರೋಗವನ್ನು ಪರೀಕ್ಷಿಸುವಲ್ಲಿ ವಿಳಂಬ ಹಾಗೂ ಕ್ಷಯ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ಅನುಸರಣೆಯ ನಿಗಾ ವಹಿಸುವುದು ಕಷ್ಟವಾಗಿತ್ತು.
– ಟಿಬಿ ಮತ್ತು ಕೋವಿಡ್‌ -19 ಸೋಂಕಿನ ಬಗ್ಗೆ ಇರುವ ಸಾಮಾಜಿಕ ಕಳಂಕದ ನಡುವೆ ಟಿಬಿ ಔಷಧದ ಅಡ್ಡ ಪರಿಣಾಮಗಳನ್ನು ವರದಿ ಮಾಡುವುದು ಕಡಿಮೆಯಾಗಿದೆ. ಈ ಅಡ್ಡ ಪರಿಣಾಮಗಳಿಗೆ ಹೆದರಿ ಕ್ಷಯ ರೋಗಿಗಳು ಔಷಧ ಬಳಸುವುದನ್ನು ನಿಲ್ಲಿಸಬಹುದು.
– ಕ್ಷಯ ರೋಗ (ಟಿಬಿ) ಮತ್ತು ಕೋವಿಡ್‌ -19 ಎರಡೂ ಸಾಂಕ್ರಾಮಿಕ ರೋಗಗಳಾಗಿದ್ದು, ಎರಡರ ರೋಗಲಕ್ಷಣಗಳು ಕೆಮ್ಮು, ಜ್ವರಗಳಾಗಿವೆ. ಹೀಗಾಗಿ ಕ್ವಾರಂಟೈನ್‌ ಭಯದಿಂದಾಗಿ ಜನರು ಪರೀಕ್ಷೆಗೆ ಹಿಂಜರಿಯುತ್ತಾರೆ.
-ಕ್ಷಯ ರೋಗ (ಟಿಬಿ) ಮತ್ತು ಕೋವಿಡ್‌ -19 ಎರಡೂ ಶ್ವಾಸಕೋಶಗಳ ಮೇಲೆ ಪರಿಣಾಮವನ್ನು ಬೀರುತ್ತವೆ. ಈ ಎರಡು ಕಾಯಿಲೆಗಳು ಅಪೌಷ್ಟಿಕತೆ, ಬಡತನ ಮತ್ತು ರೋಗನಿರೋಧಕ ಶಕ್ತಿಯೊಂದಿಗೆ ಸಂಬಂಧ ಹೊಂದಿವೆ. ಆದ ಕಾರಣ ಇದರಿಂದ ಮರಣ ಪ್ರಮಾಣವು ಹೆಚ್ಚು ಕಂಡುಬರುತ್ತದೆ.
-ಲಾಕ್‌ಡೌನ್‌ನಿಂದಾಗಿ ಜನರು ವಲಸೆ ಹೋಗುವುದರಿಂದ ಕ್ಷಯ ರೋಗಿಗಳ ಅನುಸರಣೆಯಲ್ಲಿ ತೊಂದರೆ ಮತ್ತು ವಲಸೆ ಹೋದ ಜಾಗದಲ್ಲಿ ಅಸಮರ್ಪಕ ಆರೋಗ್ಯ ಸೇವೆಗಳಿಂದ ಚಿಕಿತ್ಸೆಯಲ್ಲಿ ಅಡಚಣೆಯು ಉಂಟಾಗಿ ರೋಗ ಹೆಚ್ಚಾಗಬಹುದು ಅಥವಾ ಔಷಧ ನಿರೋಧಕತೆಯ ಬೆಳವಣಿಗೆಗೆ ಕಾರಣವಾಗಬಹುದು.
-ಈ ಎರಡೂ ಸೋಂಕುಗಳು ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಏಕೆಂದರೆ ಹೆಚ್ಚು ಜನರು ಸೇರಿದಾಗ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿರುವಾಗ ಈ ಎರಡು ರೋಗಗಳು ವೇಗವಾಗಿ ಹರಡುತ್ತವೆ.
– ಕ್ಷಯ ರೋಗ ಪ್ರಕರಣ ಪತ್ತೆಹಚ್ಚುವಿಕೆಯಲ್ಲಿ ಮತ್ತು ಚಿಕಿತ್ಸೆಯಲ್ಲಿ ವಿಳಂಬವಾದರೆ ಮರಣ ಪ್ರಮಾಣವು ಹೆಚ್ಚುತ್ತದೆ. ಮನೆಗಳಲ್ಲಿ ಜನರು ಸಾಮಾಜಿಕ ಅಂತರವನ್ನು ಕಾಪಾಡುವುದಿಲ್ಲ ಮತ್ತು ಮುಖ ಕವಚಗಳ ಬಳಕೆ ಮಾಡುವುದು ಕಡಿಮೆ. ಆದ್ದರಿಂದ ಮನೆಯ ಸದಸ್ಯರಿಗೆ ರೋಗ ಹರಡುವ ಸಾಧ್ಯತೆ ಹೆಚ್ಚಿರುತ್ತದೆ.

ಇದನ್ನೂ ಓದಿ:ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಪಡೆದ ಉಗರಗೋಳ ಪೈಲ್ವಾನರು

ಶಿಫಾರಸುಗಳು
ಈ ಕೋವಿಡ್‌ -19 ಸಾಂಕ್ರಾಮಿಕ ಲಾಕ್‌ಡೌನ್‌ನಿಂದಾಗಿ ಪತ್ತೆಯಾಗದ ಕ್ಷಯರೋಗ ಪ್ರಕರಣಗಳನ್ನು ಕಂಡುಹಿಡಿಯುವುದು ಮೊದಲ ಆದ್ಯತೆಯಾಗಿದೆ.
-ಪತ್ತೆಯಾಗದ ಪ್ರಕರಣಗಳನ್ನು ಕಡಿಮೆ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯ ಪ್ರಕರಣ ಪತ್ತೆ ಹಚ್ಚುವ ಅಭಿಯಾನವನ್ನು ನಡೆಸಬಹುದಾಗಿದೆ.
-99 ಡಾಟ್ಸ್‌, ಸ್ಮಾರ್ಟ್‌ ಮಾತ್ರೆ ಬಾಕ್ಸ್‌ಗಳಂತಹ ಆವಿಷ್ಕಾರಗಳನ್ನು ಬಳಸಿ ರೋಗಿಗಳ ಮೇಲ್ವಿಚಾರಣೆ ಮಾಡಲು, ಉತ್ತಮ ಚಿಕಿತ್ಸೆಯ ಫಲಿತಾಂಶಗಳನ್ನು ಹೆಚ್ಚಿಸಲು ಮತ್ತು ಔಷಧದ ಅಡ್ಡ ಪರಿಣಾಮಗಳನ್ನು ವರದಿ ಮಾಡಲು ಬಳಸಬಹುದು.
-ಆರೋಗ್ಯ ಕಾರ್ಯಕರ್ತರು ಮೊಬೈಲ್‌ ಮೂಲಕ ಟಿಬಿ ರೋಗಿಗಳ ಯೋಗಕ್ಷೇಮ ಮತ್ತು ಅವರ ಆರೋಗ್ಯದ ಬಗ್ಗೆ ವಿಚಾರಿಸುವುದು ಉತ್ತಮ.
-ಗಂಭೀರವಾದ ಔಷಧ ಅಡ್ಡ ಪರಿಣಾಮ ಕಂಡುಬಂದರೆ ಸಂಬಂಧಪಟ್ಟ ಆರೈಕೆದಾತರು ರೋಗಿಯನ್ನು ಸಂಪರ್ಕಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಹತ್ತಿರದ ಆಸ್ಪತ್ರೆಗೆ ಕಳುಹಿಸಬೇಕು.
-ಟಿಬಿ ರೋಗಿಗಳಲ್ಲಿ ಕೋವಿಡ್‌ -19ಗೆ ಸಂಬಂಧಿಸಿದ ರೋಗಲಕ್ಷಣಗಳು ಕಂಡುಬಂದರೆ ಕೋವಿಡ್‌ ಪರೀಕ್ಷೆ ಮಾಡಿಸಬೇಕು. ಕೋವಿಡ್‌ -19 ರೋಗವು ಕ್ಷಯ ರೋಗಿಗಳಲ್ಲಿ ಕಂಡುಬಂದರೆ, ರೋಗಿಗಳು ಕೋವಿಡ್‌ -19 ಮಾರ್ಗಸೂಚಿಗಳು ಪಾಲಿಸತಕ್ಕದ್ದು ಮತ್ತು ಟಿಬಿ ಚಿಕಿತ್ಸೆಯನ್ನು ಮುಂದುವರಿಸಬೇಕು.
-ಕೋವಿಡ್‌ -19 ರೋಗಿಗಳಲ್ಲಿ ಕ್ಷಯ ರೋಗದ ಲಕ್ಷಣ ಕಂಡು ಬಂದರೆ ಅವರು ಕೂಡಲೇ ಟಿಬಿ ಪರೀಕ್ಷೆ (ಕಫ ಪರೀಕ್ಷೆ) ಮಾಡಿಸುವುದು ಉತ್ತಮ.
-ಈ ಕೋವಿಡ್‌ -19 ಸಂದರ್ಭದಲ್ಲಿ ಮಲ್ಟಿ ಡ್ರಗ್‌ ರೆಸಿಸ್ಟೆಂಟ್‌ (ಎಂಡಿಆರ್‌) ಟಿಬಿ ರೋಗಿಗಳ ಚಿಕಿತ್ಸೆಗಾಗಿ ನೀಡುವ ಚುಚ್ಚುಮದ್ದನ್ನು ತಪ್ಪಿಸುವುದು ಮತ್ತು ವಿಶ್ವ ಅರೋಗ್ಯ ಸಂಸ್ಥೆ ಶಿಫಾರಸು ಮಾಡಿದ ಎಲ್ಲ ಓರಲ್‌ (ಬಾಯಿಯ ಮೂಲಕ ತೆಗೆದುಕೊಳ್ಳುವ) ಮತ್ತು ಕಡಿಮೆ ಸಮಯದ ಔಷಧ ಮಾರ್ಗಸೂಚಿಗಳನ್ನು ಅನುಸರಿಸುವುದು ಉತ್ತಮ.
-ಎಲ್ಲ ಕ್ಷಯ ರೋಗಿಗಳಿಗೆ ಕೋವಿಡ್‌ -19 ಸೋಂಕಿನ ಬಗ್ಗೆ ಹಾಗೂ ಕೋವಿಡ್‌ -19ನಿಂದ ಉಂಟಾಗುವ ತೊಂದರೆಗಳು ಮತ್ತು ಕೋವಿಡ್‌ -19 ಲಸಿಕೆಯಿಂದ ಆಗುವ ಉಪಯೋಗಗಳ ಬಗ್ಗೆ ತಿಳಿವಳಿಕೆ ನೀಡಬೇಕು.
-ಜನರು ಸಾಮಾಜಿಕ ಅಂತರ ಪಾಲನೆ, ಕೈ ಸ್ವತ್ಛತೆ ಮತ್ತು ಮುಖ ಕವಚಗಳ ಸರಿಯಾದ ಬಳಕೆಯಿಂದ ಕೋವಿಡ್‌ -19 ಮತ್ತು ಕ್ಷಯ ರೋಗದ ಹರಡುವಿಕೆಯನ್ನು ಕಡಿಮೆ ಮಾಡಬಹುದು.
-ಎಲ್ಲ ಕ್ಷಯ ರೋಗಿಗಳು ತಮ್ಮ ವೈದ್ಯರ ಸಲಹೆಯ ಮೇರೆಗೆ ಕೋವಿಡ್‌ -19 ಲಸಿಕೆಯನ್ನು ತೆಗೆದುಕೊಳ್ಳುವುದು ಉತ್ತಮ.

Advertisement

-ಡಾ| ಚೈತ್ರಾ ಆರ್‌. ರಾವ್‌
ಅಸೋಸಿಯೇಟ್‌ ಪ್ರೊಫೆಸರ್‌, ಕಮ್ಯುನಿಟಿ ಮೆಡಿಸಿನ್‌ ವಿಭಾಗ ಮತ್ತು ಕೋ-ಆರ್ಡಿನೇಟರ್‌, ಸೆಂಟರ್‌ ಫಾರ್‌ ಟ್ರಾವೆಲ್‌ ಮೆಡಿಸಿನ್‌, ಕೆಎಂಸಿ, ಮಣಿಪಾಲ

-ಡಾ| ಚಿದಾನಂದ ಸಂಜು ಎಸ್‌.ವಿ.
ಜಿಲ್ಲಾ ಕ್ಷಯ ನಿಯಂತ್ರಣಾಧಿಕಾರಿ, ಉಡುಪಿ

-ಹಿತೈಶ್‌ ಕುಮಾರ್‌ ಆರ್‌.ಎನ್‌.
ಪಿಎಚ್‌ಡಿ ವಿದ್ಯಾರ್ಥಿ, ಕಮ್ಯುನಿಟಿ ಮೆಡಿಸಿನ್‌ ವಿಭಾಗ, ಕೆಎಂಸಿ, ಮಣಿಪಾಲ

-ಮ್ಯಾಕ್‌ ಐಡಿ ಸದಸ್ಯರು,
ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next