ವಾಷಿಂಗ್ಟನ್ : ಅಮೆರಿಕಕ್ಕೆ ಭಾರೀ ಸಂಖ್ಯೆಯಲ್ಲಿ ಬಂದಿರುವ ಅಕ್ರಮ ವಲಸಿಗರನ್ನು ದೇಶದಿಂದ ಹೊರದಬ್ಬುವ ಕಾರ್ಯಾಚರಣೆ ಮುಂದಿನ ವಾರ ಆರಂಭವಾಗಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇದೇ ವೇಳೆ ಮೂರನೇ ಸುರಕ್ಷಿತ ದೇಶವಾಗಿ ಅಮೆರಿಕದೊಂದಿಗಿನ ಒಪ್ಪಂದಕ್ಕೆ ಸಹಿಹಾಕಲು ಗ್ವಾಟೆಮಾಲಾ ಸಿದ್ಧವಾಗುತ್ತಿದೆ ಎಂದು ಟ್ರಂಪ್ ಹೇಳಿದರು.
ಗ್ವಾಟೆಮಾಲಾ ಮತ್ತು ಇತರ ಮಧ್ಯ ಅಮೆರಿಕನ್ ದೇಶಗಳಿಂದ ಜನರು ಭಾರೀ ಸಂಖ್ಯೆಯಲ್ಲಿ ಬಡತನ ಮತ್ತು ಗ್ಯಾಂಗ್ ಹಿಂಸೆಯನ್ನು ತಾಳಲಾರದೆ ಅಕ್ರಮವಾಗಿ ವಲಸೆ ಬರುತ್ತಿರುವುದು ಯುಎಸ್‌ಗೆ ನಿಭಾಯಿಸಲಾಗದ ಭಾರೀ ಹೊರೆಯಾಗುತ್ತಿದೆ.
ಈ ರೀತಿ ಬಂದಿರುವ ಅಕ್ರಮ ವಲಸಿಗರನ್ನು ಎಷ್ಟು ಸಾಧ್ಯವೋ ಅಷ್ಟು ಬೇಗನೆ ದೇಶದಿಂದ ಹೊರ ಹಾಕಲಾಗುವುದು ಮತ್ತು ಆ ಕಾರ್ಯಾಚರಣೆಯನ್ನು ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಅನುಷ್ಠಾನ ಇಲಾಖೆ ಮುಂದಿನ ವಾರದಿಂದ ಕೈಗೊಳ್ಳಲಿದೆ ಎಂದು ಟ್ರಂಪ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಗ್ವಾಟೆಮಾಲಾಕ್ಕೆ ಹೋಗುವವರು ಮೊದಲು ಅಲ್ಲಿ ನಿರಾಶ್ರಿತರ ಸ್ಥಾನಮಾನಕ್ಕಾಗಿ ಅರ್ಜಿ ಹಾಕಬೇಕಾಗುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.
ಅಮೆರಿಕಕ್ಕೆ ಆಗುತ್ತಿರುವ ಅಕ್ರಮ ವಲಸೆಯನ್ನು ಆಕ್ರಮಣ ಎಂದು ಕರೆದಿರುವ ಟ್ರಂಪ್, ಎಲ್ ಸಲ್ವಡರ್, ಗ್ವಾಟೆಮಾಲಾ ಮತ್ತು ಹೊಂಡುರಾಸ್ ತಮ್ಮ ದೇಶದಿಂದ ಅಮೆರಿಕಕ್ಕೆ ಆಗುತ್ತಿರುವ ಅಕ್ರಮ ವಲಸೆಯನ್ನು ತಡೆಯದಿದ್ದರೆ ಅವುಗಳಿಗೆ ಇನ್ನು ಮುಂದೆ ಯಾವುದೇ ಆರ್ಥಿಕ ನೆರವನ್ನು ನೀಡುವುದಿಲ್ಲ ಎಂದು ಗುಡುಗಿದ್ದಾರೆ.