Advertisement

Trekking: ಚಾರಣ ಮತ್ತು ಜಿಗಣೆ ಕಾಟ!

03:44 PM Mar 02, 2024 | Team Udayavani |

ಸ್ನೇಹಿತರೊಂದಿಗೆ ಹಲವು ಕಡೆ ಪ್ರವಾಸ, ಚಾರಣ ಹೋಗಿದ್ದೇನೆ. ಆದರೆ ಇತ್ತೀಚೆಗೆ ಕುದುರೆಮುಖಕ್ಕೆ ಹೋದದ್ದು ಮಾತ್ರ ನನಗಂತೂ ಬಹುಕಾಲ ನೆನಪಿನಲ್ಲಿ ಉಳಿಯುವಂತದ್ದು. ಅದಕ್ಕೆ ಕಾರಣ ಒಂದು ಜಿಗಣೆ!

Advertisement

ಚಾರಣ ಪ್ರೇಮಿಗಳಿಗೆ ಕುದುರೆಮುಖ  ಇಷ್ಟದ ತಾಣ ಅಂದರೆ ತಪ್ಪಾಗಲಾರದು. ಪ್ರಕೃತಿ ರಮಣೀಯವಾದ ಪ್ರದೇಶವನ್ನು ನೋಡುತ್ತಾ ಅಲ್ಲಿನ ಬೆಟ್ಟ-ಗುಡ್ಡಗಳನ್ನು ಹತ್ತುವುದೇ ಒಂದು ಸಾಹಸ. ನಾವು ಚಾರಣಕ್ಕೆ ಹೋದದ್ದು ಮಳೆಗಾಲದಲ್ಲಿ. ಜಾರುವ ಬಂಡೆಯ ಮೇಲೆ, ಕಡಿದಾದ ದಾರಿಯಲ್ಲಿ ಸಾಗುವುದು ಕಷ್ಟವಾಗಿದ್ದರೂ ಪಾಲಿಗೆ ಬಂದದ್ದು ಪಂಚಾಮೃತ ವೆಂದು ಎಲ್ಲರೂ ಒಗ್ಗಟ್ಟಿನಿಂದ ಧೈರ್ಯ ಮಾಡಿ  ಪಯನ ಶುರು ಮಾಡಿದೆವು.

ಹೀಗೆ ಸಾಗುತ್ತಿರುವಾಗ ಜಿಗಣೆಗಳು ಕಾಣಸಿಕ್ಕವು. ಜಿಗಣೆ ಅಂದ್ರೆ ಗೊತ್ತÇÉಾ ರಕ್ತವನ್ನು ಹೀರುವ ಪುಟ್ಟ ಕ್ರಿಮಿ. ನಾನು ಅದನ್ನು ನೋಡಿದಾಗ ಒಂದು ಕ್ಷಣ ಗಾಬರಿಯಾದರೂ, ಉಳಿದವರಿಗೆ ತಿಳಿದರೆ ತಮಾಷೆ ಮಾಡಿಯಾರು ಎಂದು ನೋಡಿಯೂ ನೋಡದಂತೆ ಮುಂದೆ ಸಾಗಿದೆ. ನಾಲ್ಕು ಹೆಜ್ಜೆ ಮುಂದೆ ಇಟ್ಟೆ ಅಷ್ಟೆ. ಕಾಲಿನ ಮೇಲೆ ಯಾವುದೋ ಕ್ರಿಮಿ ಬಂದು ಕೂತ ಅನುಭವ ಆದಾಗಲಂತೂ ಜೀವವೇ ಬಾಯಿಗೆ ಬಂದಂತಾಗಿತ್ತು.

ಭಯದಿಂದ ಕಿರುಚಿದೆ. ಎಲ್ಲರೂ ಒಂದು ಕ್ಷಣ ನನ್ನತ್ತ ನೋಡಿ, ಏನಾಯ್ತು ಏನಾಯ್ತು ಎಂದು ವಿಚಾರಿಸಿದರು. ನೋಡಿದರೆ ನನ್ನ ಕಾಲ ಮೇಲೆ ಏನೂ ಇರಲಿಲ್ಲ. ಆ ಸಮಯದಲ್ಲಿ ನನಗೆ ಭಯ ಆಗಿದ್ದರೂ, ಈಗ ಆ ದಿನವನ್ನು ನೆನೆಯುವಾಗ ನಿಜವಾಗಿಯೂ ನಗು ಬರುತ್ತದೆ.

ನಾನು ಅಲ್ಲಿಂದ ಎಲ್ಲ ಭಯ, ನಾಚಿಕೆ, ಅಂಜಿಕೆ ಬಿಟ್ಟು ಮುಂದೆ ಸಾಗಿದೆ. ಆದರೆ ಎಷ್ಟೇ ಓಡಿದರೇನು ಪ್ರಯೋಜನೆ, ಜಿಗಣೆ ಕಾಟ ತಪ್ಪಿರಲಿಲ್ಲ. ಬರೀ ಒಂದು ಜಿಗಣೆ ಕಚ್ಚಿದ್ದರೆ ಅದೇನೋ ದೊಡ್ಡ ಸಂಗತಿ ಆಗುತ್ತಿರಲಿಲ್ಲವೋ ಏನೋ! ಆದರೆ ನನ್ನ ಶೂ ಪೂರ್ತಿ ಜಿಗಣೆಗಳೇ ತುಂಬಿದ್ದವು.

Advertisement

ಅದನ್ನು ಓಡಿಸಲು ನನ್ನ ಕೈಯಿಂದ ಮುಟ್ಟಿದೆ. ಕ್ಷಣಮಾತ್ರದಲ್ಲಿ ನನ್ನ ಕೈಯ ಮೇಲೂ ಜಿಗಣೆ ಹತ್ತಿತ್ತು. ಕೂಡಲೇ ರಭಸವಾಗಿ ಕೈಯನ್ನು ಕೊಡವಿ ಯಾರಾದರೂ ನನ್ನನ್ನು ಗಮನಿಸುತ್ತಿದ್ದಾರಾ ಎಂದು ಹಿಂತಿರುಗಿ ನೋಡಿದಾಗ ನನ್ನ ಸಹವರ್ತಿಗಳೂ ಇದೇ ಪರಿಸ್ಥಿತಿ. ಕೆಲವು ನಿಮಿಷಗಳೇ ಬೇಕಾಯಿತು ಇದರಿಂದ ಹೊರಬರಲು.

ಜಿಗಣೆ ಕಾಟ ಎದುರಾದರೂ, ಎಲ್ಲ ಕಷ್ಟಗಳನ್ನು ಸಹಿಸಿ ಮುಂದೆ ಸಾಗಿ ಬೆಟ್ಟದ ತುದಿಯನ್ನು ತಲುಪಿದಾಗ ಖುಷಿಗೆ ಪಾರವಿಲ್ಲವಾಗಿತ್ತು. ನಮಗೆ ಇದೊಂದು ಹೊಸ ಅನುಭವವಾಗಿತ್ತು. ಆ ದಿನ ನನ್ನ ಪಾಲಿಗೆ ಕಡೆತನಕ ನೆನಪಿನಲ್ಲಿ ಅಚ್ಚಳಿಯದೇ ಉಳಿಯುವ ದಿನ ಎಂದರೆ ತಪ್ಪಾಗಲಾರದು.

 -ಕವನಾ ಆಚಾರ್ಯ

ಎಸ್‌ಡಿಎಂ, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next