ಭಟ್ಕಳ: ಈಗಾಗಲೇ ಶಾಲೆಗಳು ಆರಂಭವಾಗಿ ತಿಂಗಳುಗಳು ಕಳೆದಿದ್ದರೂ ಗೊರ್ಟೆಯಿಂದ ಭಟ್ಕಳದ ಕಡೆಗೆ ಬರುವ ವಿದ್ಯಾರ್ಥಿಗಳಿಗೆ ಇನ್ನೂ ತನಕ ಸರಿಯಾದ ಬಸ್, ಖಾಸಗಿ ವಾಹನದ ವ್ಯವಸ್ಥೆಯಿಲ್ಲ. ಇದರಿಂದಾಗಿ ಮಕ್ಕಳು ಪರದಾಡುವಂತಾಗಿದೆ.
ಈ ಹಿಂದೆ ಭಟ್ಕಳ-ಬೈಂದೂರು ಮಧ್ಯೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸ್ಥಳೀಯ ಬಸ್ ಗಳು ಓಡಾಡುತ್ತಿತ್ತು. ಅವುಗಳೊಂದಿಗೆ ಖಾಸಗಿ ಟೆಂಪೋ, ಕೆಲ ಆಟೋ ರಿಕ್ಷಾಗಳು ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುತ್ತಿದ್ದುದರಿಂದ ಸಮಸ್ಯೆ ಎದುರಾಗಿರಲಿಲ್ಲ.
ಆದರೆ ಈ ವರ್ಷ ಬೈಂದೂರು-ಭಟ್ಕಳಕ್ಕೆ ಓಡಾಡುತ್ತಿದ್ದ ಖಾಸಗಿ ಟೆಂಪೋಗಳು ಬಂದ್ ಆಗಿವೆ. ಆಟೋಗಳು ಭಟ್ಕಳಕ್ಕೆ ಬರುವಷ್ಟು ಸೀಟು ಸಿಕ್ಕರೆ ಮಾತ್ರ ಹೊರಡುತ್ತಿವೆ. ಸರಕಾರಿ ಬಸ್‌ಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲೆ-ಕಾಲೇಜು ತಲುಪಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೈಂದೂರಿನಿಂದ ಭಟ್ಕಳಕ್ಕೆ ಬೆಳಗ್ಗೆ 7.45ಕ್ಕೆ ಬಸ್ ಹೊರಟರೆ, ಮತ್ತೆ 8.15ಕ್ಕೆ ಬಸ್. ಅರ್ಧ ಗಂಟೆ ಬಿಟ್ಟೇ ಬಸ್ ಹೊಡುತ್ತದೆ. ಇವುಗಳ ನಡುವೆ ಯಾವುದೇ ವಾಹನ ಇಲ್ಲ. ಗೊರ್ಟೆಯಿಂದ ಭಟ್ಕಳದ ಕಡೆಗೆ 200ರಿಂದ 300 ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಬರುವವರಿದ್ದು, ವಿದ್ಯಾರ್ಥಿಗಳ ಸಮಸ್ಯೆಗೆ ಸಂಬಂಧಿಸಿದವರು ಸ್ಪಂದಿಸಬೇಕಿದೆ.
ಬಸ್ ನಿಲ್ದಾಣ ನಾಪತ್ತೆ: ಗೊರಟೆ ಕ್ರಾಸ್‌ನಿಂದ ಪುರವರ್ಗದ ತನಕ ಈ ಹಿಂದೆಯಿದ್ದ 3-4 ಬಸ್ ನಿಲ್ದಾಣಗಳು ರಸ್ತೆ ಅಗಲೀಕರಣದಲ್ಲಿ ನಾಪತ್ತೆಯಾಗಿದ್ದು, ಹುಡುಕಿ ಕೊಡಬೇಕಾಗಿದೆ. ಈ ಹಿಂದೆ ಇದ್ದ ಒಂದೆರಡು ಬಸ್ ನಿಲ್ದಾಣಗಳನ್ನು ಖಾಸಗಿಯವರು ಅತಿಕ್ರಮಣ ಮಾಡಿಕೊಂಡಿದ್ದು, ಉಳಿದವುಗಳು ನಾಪತ್ತೆಯಾಗಿದೆ. ಬಸ್ ನಿಲ್ದಾಣ ಹುಡುಕಿಕೊಡಿ ಎನ್ನುವ ಅಭಿಯಾನ ಆರಂಭಿಸಿದರೆ ಬಸ್ ನಿಲ್ದಾಣ ದೊರೆಯಬಹುದೇನೋ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.