Advertisement
ಕೊಕ್ಕರೆ ಬೆಳ್ಳೂರಿನಲ್ಲಿ ಇದುವರೆಗೆ 11 ಪೆಲಿಕಾನ್ ಹಕ್ಕಿಗಳು ಮೃತಪಟ್ಟಿವೆ. ಪಕ್ಷಿಗಳು ಸಾವಿಗೆ ಹಕ್ಕಿಜ್ವರ ಕಾರಣವಿರಬಹುದೆಂದು ಶಂಕೆ ವ್ಯಕ್ತಪಡಿಸಿ ಅರಣ್ಯ ಇಲಾಖೆಯವರು ಮರದ ಬುಡಕ್ಕೆ ಔಷಧ ಸಿಂಪಡಣೆ ಮಾಡಿದ್ದಾರೆ. ಅಲ್ಲೀಗ ಪಕ್ಷಿಗಳು ಸುರಕ್ಷಿತವಾಗಿವೆ ಎನ್ನಲಾಗಿದೆ.
Related Articles
Advertisement
ಕಳೇಬರಹ ಈಗ ಪತ್ತೆ: ಈ ಪಕ್ಷಿಗಳು ಸತ್ತು ಹಲವು ದಿನಗಳಾಗಿದ್ದು, ಈಗ ಅವುಗಳ ಕಳೇಬರ ಪತ್ತೆ ಯಾಗಿದೆ. ಈ ಪ್ರದೇಶ ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿರುವುದರಿಂದ ಅವರು ಇದರ ಬಗ್ಗೆ ನಿಗಾವಹಿಸಬೇಕಿತ್ತು. ಪಕ್ಷಿಗಳು ಸಾವನ್ನಪ್ಪಿರುವುದು ಯಾರ ಅರಿವಿಗೂ ಬಂದಿಲ್ಲವಾದ್ದರಿಂದ ಈಗ ಅವುಗಳ ಮೃತದೇಹ ಪತ್ತೆಯಾಗಿದೆ ಎನ್ನುವುದು ಪಶು ವೈದ್ಯಾಧಿಕಾರಿಗಳು ಹೇಳುವ ಮಾತು.
ಈಗ ಎರಡು ಪೆಲಿಕಾನ್‌ಗಳು ಅಸ್ವಸ್ಥಗೊಂಡಿರುವುದಕ್ಕೆ ಕಾರಣ ತಿಳಿದುಬಂದಿಲ್ಲ. ಅವುಗಳನ್ನು ಸಂರಕ್ಷಣೆ ಮಾಡಿ ಆರೈಕೆ ಮಾಡಲಾಗುತ್ತಿದೆ. ಆದರೂ ಅವುಗಳು ಸೂಕ್ತವಾಗಿ ಚಿಕಿತ್ಸೆಗೆ ಸ್ಪಂದಿ ಸುತ್ತಿಲ್ಲ. ಇದುವರೆಗೆ ಅಸ್ವಸ್ಥಗೊಂಡಿರುವ ಯಾವುದೇ ಪೆಲಿಕಾನ್ ಹಕ್ಕಿಗಳು ಬದುಕುಳಿದಿಲ್ಲ.
ನೀರಿನ ಪರೀಕ್ಷೆ: ಕೊಕ್ಕರೆ ಬೆಳ್ಳೂರಿನಲ್ಲಿ ಪೆಲಿಕಾನ್ ಪಕ್ಷಿಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ನೀರು ಕಲುಷಿತಗೊಂಡಿರುವ ಸಂಶಯದ ಮೇರೆಗೆ ಸುತ್ತಮುತ್ತಲ ಕೆರೆಗಳಲ್ಲಿನ ನೀರು, ಶಿಂಷಾ ನದಿ ನೀರನ್ನು ಈಗಾಗಲೇ ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೆ, ನೀರು ಕಲ್ಮಶಗೊಂಡಿರುವುದು ಮಾತ್ರ ಪತ್ತೆಯಾಗಿಲ್ಲ. ಸಣ್ಣ ಪ್ರಮಾಣದ ಹಕ್ಕಿ ಜ್ವರದಿಂದಲೇ ಪಕ್ಷಿಗಳು ಸಾವನ್ನಪ್ಪಿರುವ ಬಗೆಗಿನ ಸಂಶಯವೇ ಹೆಚ್ಚಾಗಿರುವಂತೆ ಕಂಡು ಬರುತ್ತಿದೆ. ಇದೀಗ ಮತ್ತೆ ನೀರಿನ ಪರೀಕ್ಷೆ: ಮಾದರಹಳ್ಳಿ ಸಮೀಪದ ಸೂಳೆಕರೆ ವ್ಯಾಪ್ತಿಯಲ್ಲಿ ಪೆಲಿಕಾನ್ ಹಕ್ಕಿಗಳ ಸಾವು ಹೆಚ್ಚಾಗಿ ಕಂಡುಬಂದಿರುವುದು ಪಶು ವೈದ್ಯಾಧಿಕಾರಿಗಳಿಗೆ ಇನ್ನಷ್ಟು ತಲೆಬಿಸಿ ಉಂಟು ಮಾಡಿದೆ. ಶನಿವಾರ ಮದ್ದೂರು ಪಶು ವೈದ್ಯಾಧಿಕಾರಿ ಡಾ.ಹನುಮೇಗೌಡ ಹಾಗೂ ಇತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾದರಹಳ್ಳಿ ಕೆರೆ, ಸೂಳೆಕೆರೆ ಹಾಗೂ ಕಾಲುವೆಯಲ್ಲಿ ಹರಿಯುವ ನೀರನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಅದೇ ರೀತಿ ಹಕ್ಕಿಗಳ ಹಿಕ್ಕೆಯನ್ನೂ ಸಂಗ್ರಹಿಸಿ ಬೆಂಗಳೂರಿನ ಹೆಬ್ಟಾಳದಲ್ಲಿರುವ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಅಲ್ಲಿಂದ ವರದಿ ಬಂದ ನಂತರ ನಿಖರ ಕಾರಣ ತಿಳಿದುಬರ ಲಿದೆ ಎಂದು ಪಶು ವೈದ್ಯಾಧಿಕಾರಿಗಳು ಹೇಳುತ್ತಾರೆ. ರಂಗನತಿಟ್ಟು, ಗೆಂಡೆಹೊಸಹಳ್ಳಿಯಲ್ಲಿ ಭಯವಿಲ್ಲ: ಕೊಕ್ಕರೆ ಬೆಳ್ಳೂರಿನಲ್ಲಿ ಹಕ್ಕಿಜ್ವರದ ಭೀತಿ ಮನೆ ಮಾಡಿದ್ದರೆ, ಇದೇ ವಾತಾವರಣ ರಂಗನತಿಟ್ಟು ಹಾಗೂ ಗೆಂಡೆಹೊಸಹಳ್ಳಿ ಪಕ್ಷಿಧಾಮದಲ್ಲಿ ಕಂಡು ಬರುತ್ತಿಲ್ಲ. ಅಲ್ಲಿ ಪಕ್ಷಿಗಳೆಲ್ಲವೂ ಆರೋಗ್ಯದಿಂದಿವೆ. ಕೆ.ಆರ್.ಪೇಟೆಯ ಕಾವೇರಿ ನೀರಾವರಿ ನಿಗಮದ ಕಚೇರಿ ಆವರಣದ ಸುತ್ತಲಿನ ಮರಗಳಲ್ಲಿ ಸಾವಿರಾರು ಪಕ್ಷಿಗಳು ನೆಲೆಸಿದ್ದರೂ ಅಲ್ಲಿಯೂ ಯಾವುದೇ ಭೀತಿ ಕಂಡು ಬಂದಿರಲಿಲ್ಲ. ಪೆಲಿಕಾನ್ ಹಕ್ಕಿಗಳ ಸಾವು ಕೊಕ್ಕರೆ ಬೆಳ್ಳೂರು ಹಾಗೂ ಸುತ್ತ ಮುತ್ತಲ ಪ್ರದೇಶಕ್ಕಷ್ಟೇ ಸೀಮಿತವಾಗಿರುವುದು ಕುತೂಹಲ ಕೆರಳಿಸುತ್ತಿದೆ. ಮುಂಜಾಗ್ರತಾ ಕ್ರಮ: ಈಗಾಗಲೇ ಹಕ್ಕಿಜ್ವರದ ಭೀತಿ ಇರುವ ಹಿನ್ನೆಲೆಯಲ್ಲಿ ಸೂಕ್ತ ಮುಂಜಾಗ್ರತಾ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಎಲ್ಲಾ ತಾಲೂಕಿನ ತಹಶೀಲ್ದಾರರಿಗೆ ಸೂಚನೆ ನೀಡಿದ್ದಾರೆ. ತಾಲೂಕು ಮಟ್ಟದಲ್ಲೂ ಸಭೆಗಳು ನಡೆದು ಪೌಲಿಫಾರಂ ಮಾಲಿಕರಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಮಂಡ್ಯ ಮಂಜುನಾಥ್/ಅಣ್ಣೂರು ಸತೀಶ್