Advertisement

Udupi: ಒಂದೇ ವೃತ್ತ; ಪೊಲೀಸ್‌ ಚೌಕಿ 5!; ಕಲ್ಸಂಕ ಜಂಕ್ಷನ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ

03:34 PM Jan 10, 2025 | Team Udayavani |

ಉಡುಪಿ: ಒಂದು ಜಂಕ್ಷನ್‌. ಅದರ ಮಧ್ಯದಲ್ಲಿ ಐದು ಪೋಲಿಸ್‌ ಚೌಕಿ, ಎರಡು ಪೊಲೀಸ್‌ ಗೇಟ್‌, ಇನ್ನೆರಡು ಬ್ಯಾರಿಕೇಡ್‌! ಇದು ಉಡುಪಿಯ ಕಲ್ಸಂಕ ಜಂಕ್ಷನ್‌ ಅವ್ಯವಸ್ಥೆ.

Advertisement

ಕಲ್ಸಂಕ ವೃತ್ತದಲ್ಲಿ ಮೊದಲೇ ಜಾಗದ ಸಮಸ್ಯೆ, 5 ಪೊಲೀಸ್‌ ಚೌಕಿ ಇರುವುದರಿಂದ ವಾಹನಗಳ ಸುಗಮ ಸಂಚಾರಕ್ಕೂ ಇದು ಅಡ್ಡಿಯಾಗುತ್ತಿದೆ. ಒಂದೇ ಚೌಕಿ ಮೂಲಕ ಟ್ರಾಫಿಕ್‌ ನಿರ್ವಹಣೆ ಮಾಡಿ ಉಳಿದವುಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿ ಕೊಡಬಹುದಾದ ಜಾಗದಲ್ಲಿ ಅನಗತ್ಯವಾಗಿ ಚೌಕಿಗಳನ್ನು ಇರಿಸಿ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ.

ಕಲ್ಸಂಕ ಜಂಕ್ಷನ್‌ನಲ್ಲಿ ನಿತ್ಯ ಒಂದಿಬ್ಬರು ಸಂಚಾರ ಪೊಲೀಸರು ಇಲ್ಲಿ ಕಾರ್ಯನಿರ್ವಹಿಸುತ್ತಾರೆ.

ಅಚ್ಚರಿ ಎಂದರೆ ಇದರಲ್ಲಿ ಒಂದು ಚೌಕಿಯನ್ನೂ ಪೊಲೀಸರು ಬಳಸುವುದಿಲ್ಲ! ಟ್ರಾಫಿಕ್‌ ಇಲ್ಲದ ಸಂದರ್ಭದಲ್ಲಿ ರಿಕ್ಷಾ ನಿಲ್ದಾಣದ ಸಮೀಪದ ಸಣ್ಣ ಶೆಡ್‌ನ‌ಲ್ಲಿ ಪೊಲೀಸರು ಕುಳಿತಿರುತ್ತಾರೆ. ಸಂಚಾರ ದಟ್ಟಣೆ ಉಂಟಾಗಲು ಪೊಲೀಸ್‌ ಚೌಕಿಗಳು ಕೂಡಾ ಕಾರಣವಾಗುತ್ತಿವೆ.!

ಪುನಃ ಅವೈಜ್ಞಾನಿಕ ಕ್ರಮ
ನಗರದ ಕಲ್ಸಂಕ ಜಂಕ್ಷನ್‌ ಸಮಸ್ಯೆ ಇನ್ನು ಕೂಡ ಬಗೆಹರಿದಿಲ್ಲ. ವಾಹನಗಳ ದಟ್ಟನೆಯನ್ನು ಗಮನಿಸಿಕೊಂಡು ಮತ್ತೆ ಈ ಹಿಂದಿನಂತೆಯೇ ಬದಲಾವಣೆಗಳನ್ನು ತರಲಾಗಿದೆ. ಗುಂಡಿಬೈಲಿನಿಂದ ಹಾಗೂ ಉಡುಪಿ ನಗರದಿಂದ ಶ್ರೀಕೃಷ್ಣ ಮಠಕ್ಕೆ ತೆರಳುವವರು ಕಡಿಯಾಳಿಯವರೆಗೆ ಹೋಗಿ ಯೂಟರ್ನ್ ಮಾಡಿ ಬರಬೇಕಿದೆ. ಕಲ್ಸಂಕ ಜಂಕ್ಷನ್‌ನಲ್ಲಿ ಬ್ಯಾರಿಕೇಡ್‌ಗಳನ್ನು ಇರಿಸಿ ನೇರವಾಗಿ ಶ್ರೀಕೃಷ್ಣ ಮಠಕ್ಕೆ ತೆರಳುವ ಮಾರ್ಗವನ್ನು ಬಂದ್‌ ಮಾಡಲಾಗಿದೆ.

Advertisement

ಪ್ರವಾಸಿಗರಿಗೆ ಗೊಂದಲ
ಗೂಗಲ್‌ ಮ್ಯಾಪ್‌ ಸಹಿತ ನಗರದೆಲ್ಲೆಡೆ ಅಳವಡಿಕೆ ಮಾಡಿರುವ ಫ‌ಲಕಗಳಲ್ಲಿ ಶ್ರೀಕೃಷ್ಣ ಮಠದ ರಸ್ತೆ ಎಂದು ನಮೂದಿಸಲಾಗಿದೆ. ಇದನ್ನೇ ಗಮನಿಸಿಕೊಂಡು ಬರುವ ಸವಾರರು ಜಂಕ್ಷನ್‌ಗೆ ಬಂದು ಗೊಂದಲಕ್ಕೀಡಾಗುತ್ತಾರೆ. ಕೆಲವು ಹೊತ್ತು ವಾಹನಗಳನ್ನು ರಸ್ತೆಯ ನಡುವೆಯೇ ನಿಲ್ಲಿಸುವ ಕಾರಣ ಮತ್ತೆ ಸಂಚಾರ ದಟ್ಟನೆ ಕಂಡುಬರುತ್ತಿದೆ. ಬೆಳಗ್ಗೆ 9ರಿಂದ 1 ಗಂಟೆಯವರೆಗೆ ಒಬ್ಬರೇ ಪೊಲೀಸ್‌ ಸಿಬಂದಿ ಇಲ್ಲಿ ಕರ್ತವ್ಯ ನಿರ್ವಹಿಸುವ ಕಾರಣ ವಾಹನಗಳನ್ನು ನಿಯಂತ್ರಿಸಲು ಹರಸಾಹಸಪಡುವಂತಾಗಿದೆ.

ತಡೆಬೇಲಿ ಅಳವಡಿಕೆ
ಕಲ್ಸಂಕದಿಂದ ಶ್ರೀಕೃಷ್ಣ ಮಠಕ್ಕೆ ತೆರಳುವಾಗ ಸಿಗುವ ಇಂದ್ರಾಳಿ ತೋಡಿನ ಎರಡೂ ಬದಿಗಳಲ್ಲಿ ಯಾವುದೇ ತಡೆಬೇಲಿಗಳಿಲ್ಲದೆ ಜೂನ್‌ ತಿಂಗಳಲ್ಲಿ ಆಟೋರಿಕ್ಷಾ ಪಲ್ಟಿಯಾಗಿ ಬಿದ್ದು, ಸವಾರರು ಗಾಯಗೊಂಡಿದ್ದರು. ಉದಯವಾಣಿ ಈ ಬಗ್ಗೆ ವರದಿ ಪ್ರಕಟಿಸಿದ ಬಳಿಕ ಈಗ ತಡೆಬೇಲಿ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದೆ.

ಬದಲಾವಣೆ ಅನಿವಾರ್ಯ
ವಾಹನಗಳ ದಟ್ಟಣೆ ಹೆಚ್ಚಿರುವಂತಹ ಸಂದರ್ಭದಲ್ಲಿ ಇಂತಹ ಬದಲಾವಣೆಗಳನ್ನು ಮಾಡುವುದು ಅನಿವಾರ್ಯವಾಗುತ್ತಿದೆ. ದಟ್ಟಣೆ ಇಲ್ಲದ ಸಂದರ್ಭದಲ್ಲಿ ವಾಹನಗಳು ಹಿಂದಿನಂತೆಯೇ ಸಂಚರಿಸಲು ಅನುವು ಮಾಡಿಕೊಡಲಾಗುವುದು.
-ಪ್ರಕಾಶ್‌ ಸಾಲ್ಯಾನ್‌, ಪೊಲೀಸ್‌ ಉಪ ನಿರೀಕ್ಷಕರು, ಸಂಚಾರ ಪೊಲೀಸ್‌ ಠಾಣೆ

Advertisement

Udayavani is now on Telegram. Click here to join our channel and stay updated with the latest news.

Next