Advertisement

ಸಾರಿಗೆ ಡಿಪೋ, ಬಸ್‌ ನಿಲ್ದಾಣಕ್ಕೆ ಬಿಎಸ್‌ ಭೇಟಿ

07:47 AM Mar 03, 2019 | Team Udayavani |

ಶಿರಾ: ರಾಜ್ಯ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಶಾಸಕ ಬಿ.ಸತ್ಯನಾರಾಯಣ ಶನಿವಾರ ಇಲ್ಲಿನ ಸಾರಿಗೆ ಡಿಪೋಕ್ಕೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲನೆ ನಡೆಸಿದರು. ತಾಲೂಕಿನ ಜನಸಾಮಾನ್ಯರು ಸಾರಿಗೆ ವಿಷಯದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಮಗೆ ಅರಿವಿದ್ದು, ಅಲ್ಪ ಅವಧಿಯಲ್ಲೇ ಎಲ್ಲದಕ್ಕೂ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. 

Advertisement

ಅಹವಾಲು: ಬಸ್‌ ನಿಲ್ದಾಣದಲ್ಲಿನ ಸಮಸ್ಯೆಗಳನ್ನು ಸುದ್ದಿಗಾರರು ನೂತನ ಅಧ್ಯಕ್ಷರ ಮುಂದೆ ತೆರೆದಿಡುತ್ತಿದ್ದಂತೆ ಬಸ್‌ ನಿಲ್ದಾಣಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಪರಿಶೀಲನೆ ನಡೆಸುವ ಭರವಸೆ ನೀಡಿದ ಶಾಸಕ, ನಂತರ ಬಸ್‌ ನಿಲ್ದಾಣಕ್ಕೆ ಬಂದು ಜನಸಾಮಾನ್ಯರ, ವಿದ್ಯಾರ್ಥಿಗಳಿಂದ ಅಹವಾಲು ಆಲಿಸಿದರು.

ವಿದ್ಯಾರ್ಥಿಗಳು ದೂರು: ಗ್ರಾಮಾಂತರದ ಬಸುಗಳು ನಿಗದಿತ ಸಮಯಕ್ಕೆ ಸಂಚರಿಸುವುದೇ ಇಲ್ಲ. ಕೆಲವೊಮ್ಮೆ ಗಂಟೆಗಟ್ಟಲೆ ತಡವಾದರೆ, ಮತ್ತೂಮ್ಮೆ ನಿಗದಿತ ಸಮಯಕ್ಕೂ ಮುನ್ನವೇ ಹೊರಡುತ್ತವೆ. ಇದರಿಂದ ನಿತ್ಯ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ.

ಈಗ ಪಿಯು ಪರೀಕ್ಷೆ ನಡೆಯುತ್ತಿದ್ದು, ಮುಂದಿನ ಪರೀಕ್ಷೆಗಳಿಗೂ ತೊಂದರೆ ಆಗಲಿದೆ ಎಂದು ವಿದ್ಯಾರ್ಥಿಗಳು ದೂರಿದರು. ಮತ್ತೆ ಕೆಲವರು ಹುಳಿಯಾರು ಮಾರ್ಗದಲ್ಲಿ ಸಾರಿಗೆ ಬಸುಗಳ ಓಡಾಟವೇ ಇಲ್ಲ. ಹಾಗೆಯೇ ರಾಜ್ಯದ ವಿವಿಧ ಪುಣ್ಯ ಕ್ಷೇತ್ರಗಳಿಗೆ ನಗರದಿಂದ ನೇರ ಬಸ್‌ ಸೌಕರ್ಯ ಕಲ್ಪಿಸಿ ಎಂದು ಮನವಿ ಮಾಡಿದರು.

ಟೆಂಡರ್‌ದಾರನ ವಿರುದ್ಧ ಕ್ರಿಮಿನಲ್‌ ಕೇಸ್‌ ಹಾಕಲು ಸಲಹೆ: ಬಸ್‌ ನಿಲ್ದಾಣದಲ್ಲಿನ ದ್ವಿಚಕ್ರ ವಾಹನ ಪಾರ್ಕಿಂಗ್‌ ಪ್ರದೇಶದಲ್ಲಿ ಹಗಲು ದರೋಡೆ ನಡೆಯುತ್ತಿದ್ದು, ಕಠಿಣ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರನ್ನು ಜನಸಾಮಾನ್ಯರು, ಮಾಧ್ಯಮಗಳು ಒತ್ತಾಯಿಸಿದ ಹಿನ್ನೆಲೆಯಲ್ಲಿ ಗುತ್ತಿಗೆದಾರನನ್ನು ಸ್ಥಳಕ್ಕೆ ಕರೆಯಿಸಿದ ಬಿಎಸ್‌ ಆತನಿಂದ ವಸೂಲಾತಿ ರಶೀದಿ ಪುಸ್ತಕ ತರಿಸಿ ಪರಿಶೀಲಿಸಿದರು.

Advertisement

ಈ ವೇಳೆ ಅಧಿಕೃತವಾಗಿ 30 ರೂ.ಗಳ ರಶೀದಿ ನೀಡುತ್ತಿದ್ದ ಗುತ್ತಿಗೆದಾರನಿಂದ ಟೆಂಡರ್‌ ದರದ ಬಗ್ಗೆ ವಿಚಾರಿಸಿದರೆ, ಆತನಿಂದ ಏನೊಂದೂ ಉತ್ತರ ಬರಲಿಲ್ಲ. ಸ್ಥಳದಲ್ಲಿದ್ದ ಡಿಪೋ ವ್ಯವಸ್ಥಾಪಕ ಆತನಿಗೆ ಒಂದರಿಂದ ನಾಲ್ಕು ಗಂಟೆ ಅವಧಿಯವರೆಗೆ 8 ರೂ.ಗಳನ್ನು ಹಾಗೂ 24 ಗಂಟೆ ಅವಧಿಗೆ 16 ರೂ. ವಸೂಲಿ ಮಾಡುವಂತೆ ದರ ನಿಗದಿಪಡಿಸಲಾಗಿದೆ ಎಂದು ವಿವರಿಸಿದರು. 

ಇದರಿಂದ ಕೆಂಡಾಮಂಡಲವಾದ ಸಾರಿಗೆ ಸಂಸ್ಥೆ ಅಧ್ಯಕ್ಷರು, ನಿತ್ಯ ಸಾವಿರಾರು ವಾಹನ ಬಂದು ಹೋಗುವ ಜಾಗದಲ್ಲಿ ವಾಹನಕ್ಕೆ 30 ರೂ. ಎಂದರೆ ಎಷ್ಟು ಆಗುತ್ತದೆ ಗೊತ್ತಿದೆಯೇ? ತಿಂಗಳಿಗೆ, ವರ್ಷಕ್ಕೆ ಲೆಕ್ಕ ಹಾಕಿದರೆ ನೀನು ದೋಚುತ್ತಿರುವ ಮೊತ್ತ ಜನರಿಗೆ ಮೋಸ ಮಾಡಿ ಸಂಪಾದಿಸುತ್ತಿರುವುದು, ಅದೂ ನಮ್ಮ ಸಾರಿಗೆ ಸಂಸ್ಥೆ ಹೆಸರಿನಲ್ಲಿ. ನಿನ್ನ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಏಕೆ ಹಾಕಬಾರದು? ಎಂದು ಪ್ರಶ್ನಿಸಿದರು.

ಸುಲಿಗೆ ಮಾಡಲು ಅಧಿಕಾರ ಕೊಟ್ಟವರು ಯಾರು?: ತನಗೆ ನಷ್ಟವಾಗುತ್ತದೆ ಎಂದು ಸಮರ್ಥಿಸಿಕೊಳ್ಳಲು ಯತ್ನಿಸಿದ ಗುತ್ತಿಗೆದಾರನಿಗೆ, ನಿನಗೆ ನಷ್ಟವಾಗುತ್ತಿದೆ ಎಂದು ಜನರನ್ನು ಸುಲಿಗೆ ಮಾಡಲು ಅಧಿಕಾರ ಕೊಟ್ಟವರು ಯಾರು? ಕಷ್ಟವಾದರೆ ಟೆಂಡರ್‌ ನಿರ್ವಹಣೆ ಸಾಧ್ಯವಿಲ್ಲ ಎಂದು ಬಿಟ್ಟುಹೋಗುವ ಸ್ವಾತಂತ್ರ ನಿನಗಿದೆ ಎಂದ ಸತ್ಯನಾರಾಯಣ, ವರ್ಷಕ್ಕೆ ಆತ ಸುಲಿಗೆ ಮಾಡುವ ಮೊತ್ತ ಲೆಕ್ಕಹಾಕಿ, ಕೇಸ್‌ ಹಾಕುವಂತೆ ಡಿಪೋ ವ್ಯವಸ್ಥಾಪಕ ವಿನೋದ್‌ ಅಮ್ಮನಗಿ ಅವರಿಗೆ ಸೂಚಿಸಿದರು. ಚಿತ್ರದುರ್ಗ ವಿಭಾಗ ನಿಯಂತ್ರಕರೂ ಸೇರಿದಂತೆ ವಿವಿಧ ಅಧಿಕಾರಿಗಳು, ಜೆಡಿಎಸ್‌ ಪಕ್ಷದ ಸ್ಥಳೀಯ ಮುಖಂಡರು ಮತ್ತಿರರರಿದ್ದರು.

ತುಮಕೂರು ವಿಭಾಗಕ್ಕೆ ವರ್ಗಾಯಿಸಿ: ಬೆಳಗ್ಗೆ ಮತ್ತು ಸಂಜೆ ಶಿರಾಕ್ಕೆ ಬರುವ ಬಸುಗಳು ಬೈಪಾಸ್‌ ಮೂಲಕವೇ ಓಡಾಟ ನಡೆಸುವುದರಿಂದ ಶಿರಾಕ್ಕೆ ಬೆಂಗಳೂರು ಮತ್ತಿತರೆ ಪ್ರದೇಶಗಳಿಂದ ಬರುವ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ಶಿರಾಕ್ಕೆ ಬಸ್‌ ಬರುವುದನ್ನು ಕಡ್ಡಾಯ ಮಾಡಿ, ಬಸ್‌ ನಿಲ್ದಾಣದಲ್ಲಿ ಮುಚ್ಚಿಹೋಗಿರುವ ಹೋಟೆಲ್‌ ಆರಂಭಿಸಿ, ಕುಡಿಯುವ ನೀರಿನ ಸೌಕರ್ಯ ಕಲ್ಪಿಸಿ. ಹಾಗೆಯೇ ಚಿತ್ರದುರ್ಗ ವಿಭಾಗಕ್ಕೆ ಸೇರಿಸಲಾಗಿರುವ ಡಿಪೋವನ್ನು ಮರಳಿ ತುಮಕೂರು ವಿಭಾಗಕ್ಕೆ ವರ್ಗಾಯಿಸಿ ಎನ್ನುವ ಅಹವಾಲುಗಳು ವಿದ್ಯಾರ್ಥಿಗಳಿಂದ ಕೇಳಿಬಂದವು.

Advertisement

Udayavani is now on Telegram. Click here to join our channel and stay updated with the latest news.

Next