Advertisement

ಸಾರಿಗೆ: ಹುಬ್ಬಳ್ಳಿ ವಿಭಾಗಕ್ಕೆ 23 ಕೋಟಿ ನಷ್ಟ

10:19 AM May 06, 2020 | Suhan S |

ಹುಬ್ಬಳ್ಳಿ: ಲಾಕ್‌ಡೌನ್‌ನಿಂದ ಸಾರ್ವಜನಿಕ ಸಾರಿಗೆ ಸ್ಥಗಿತಗೊಂಡಿದ್ದರಿಂದ ಮಾರ್ಚ್‌ ಹಾಗೂ ಏಪ್ರಿಲ್‌ ತಿಂಗಳಲ್ಲಿ ವಾಕರಸಾಸಂ ಹುಬ್ಬಳ್ಳಿ ವಿಭಾಗಕ್ಕೆ ಅಂದಾಜು 23 ಕೋಟಿ ರೂ.ಗಳಷ್ಟು ಸಾರಿಗೆ ಆದಾಯ ನಷ್ಟ ಉಂಟಾಗಿದೆ.

Advertisement

ಹುಬ್ಬಳ್ಳಿ ವಿಭಾಗದಲ್ಲಿ ನಾಲ್ಕು ಬಸ್‌ ಘಟಕಗಳಲ್ಲಿ ಒಟ್ಟು 462 ಬಸ್‌ಗಳು ಹಾಗೂ 2173 ಸಿಬ್ಬಂದಿಗಳಿದ್ದಾರೆ. ವಿಭಾಗದ ಬಸ್‌ಗಳು ಪ್ರತಿದಿನ 1.90 ಲಕ್ಷ ಕಿ.ಮೀ. ಕ್ರಮಿಸಿ ವಿವಿಧ ರಿಯಾಯಿತಿ ಪಾಸು ಪ್ರಯಾಣಿಕರು ಸೇರಿದಂತೆ 1.45 ಲಕ್ಷಗಳಷ್ಟು ಸಾರ್ವಜನಿಕ ಪ್ರಯಾಣಿಕರು ಹಾಗೂ 45 ಸಾವಿರಗಳಷ್ಟು ವಿದ್ಯಾರ್ಥಿಗಳಿಗೆ ಅಗತ್ಯ ಸಾರಿಗೆ ವ್ಯವಸ್ಥೆ ಕಲ್ಪಿಸುವ ಮೂಲಕ ಸಂಸ್ಥೆಗೆ 45ರಿಂದ 50 ಲಕ್ಷ ರೂ. ಸಾರಿಗೆ ಆದಾಯ ಸಂಗ್ರಹಣೆ ಆಗುತ್ತಿತ್ತು.

ಮಾರ್ಚ್‌ 9ರ ವರೆಗೆ ಬಸ್‌ಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಿರಲಿಲ್ಲ. ಆ ಸಮಯದಲ್ಲಿ ಆದಾಯ ಸಂಗ್ರಹಣೆ ನಿರೀಕ್ಷೆಯಂತಿತ್ತು. ನಂತರದಲ್ಲಿ ಕೋವಿಡ್ 19 ವೈರಸ್‌ ವ್ಯಾಪಕತೆ ಹೆಚ್ಚಾಗುತ್ತಿದ್ದಂತೆ ಪ್ರಯಾಣಿಕರ ಸಂಖ್ಯೆ ಕುಸಿಯತೊಡಗಿತು. ತತ್ಪರಿಣಾಮವಾಗಿ ಮಾ.22 ರವರೆಗೆ ಬಸ್‌ಗಳ ಸಂಖ್ಯೆಯೂ ಸಹ ದಿನದಿಂದ ದಿನಕ್ಕೆ ಕಡಿಮೆಯಾಗತೊಡಗಿತು. ಮಾ.23 ರಿಂದ ಶೂನ್ಯಕ್ಕಿಳಿಯಿತು. ಮಾರ್ಚ್‌ ತಿಂಗಳಲ್ಲಿ ಭಾಗಶಃ ಬಸ್‌ ಕಾರ್ಯಾಚರಣೆಯಾಗಿದ್ದರಿಂದ ನಿರೀಕ್ಷಿತ ಆದಾಯದಲ್ಲಿ 5.50

ಕೋಟಿ ಗಳಷ್ಟು ಕೊರತೆಯಾಗಿತ್ತು. ಆದರೆ ಏಪ್ರಿಲ್‌ ತಿಂಗಳಲ್ಲಿ ಯಾವುದೇ ಬಸ್‌ ರಸ್ತೆಗಿಳಿಯದ್ದರಿಂದ 17.50 ಕೋಟಿ ರೂ. ಆದಾಯ ನಷ್ಟ ಉಂಟಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್‌.ರಾಮನಗೌಡರ್‌ ತಿಳಿಸಿದ್ದಾರೆ. ಲಾಕ್‌ಡೌನ್‌ ಅವಧಿ ಯಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿದ್ದರೂ ಸಹ ಬಸ್‌ಗಳ ತುರ್ತು ನಿರ್ವಹಣೆ ಮತ್ತು ಸಂಸ್ಥೆಯ ಆಸ್ತಿಗಳ ರಕ್ಷಣಾ ಕಾರ್ಯಗಳನ್ನು ನಿರಂತರ ನಿರ್ವಹಿಸಲಾಗುತ್ತಿದೆ. ವಿಭಾಗೀಯ ಕಚೇರಿ ಹಾಗೂ ಘಟಕ ಪೆಟ್ರೋಲಿಂಗ್‌ ತಂಡದ ಅಧಿಕಾರಿಗಳು ಪ್ರತಿದಿನ ಎಲ್ಲಾ ಘಟಕಗಳು ಮತ್ತು ಪ್ರಮುಖ ಬಸ್‌ ನಿಲ್ದಾಣಗಳ ಗಸ್ತು ನಡೆಸುತ್ತಿದ್ದಾರೆ. ಘಟಕದಲ್ಲಿ ತುರ್ತುನಿರ್ವಹಣಾ ತಂಡದಲ್ಲಿ ಮೂರು ಪಾಳಿಯದಲ್ಲಿ ಇಬ್ಬರು-ಮೂವರಂತೆ ಚಾಲಕರು, ತಾಂತ್ರಿಕ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ನಿರಂತರ ಎಲ್ಲಾ ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಸಾರ್ವಜನಿಕ ಸಾರಿಗೆ ಪುನರಾರಂಭಿಸಲು ಸರ್ಕಾರದ ಆದೇಶ ಬಂದ ಕೂಡಲೇ ಮಾರ್ಗಸೂಚಿ ನಿರ್ದೇಶನಗಳ ಪ್ರಕಾರ ಎಲ್ಲಾ ಮುಂಜಾಗೃತೆ ಕ್ರಮಗಳೊಂದಿಗೆ ಬಸ್‌ಗಳನ್ನು ರಸ್ತೆಗಿಳಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್‌. ರಾಮನಗೌಡರ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next