Advertisement

ಸ್ವತಂತ್ರ ಸಂಸ್ಥೆಯಿಂದ ಪಾರದರ್ಶಕ ತನಿಖೆ

07:43 AM Jun 18, 2019 | Team Udayavani |

ಬೆಂಗಳೂರು: ಹೆಬ್ಟಾಳದ ಹೊರ ವರ್ತುಲದಲ್ಲಿ ನಿರ್ಮಾಣ ಹಂತದಲ್ಲಿದ್ದ 100 ಎಂಎಲ್‌ಡಿ ಸಾರ್ಮಥ್ಯದ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಚಾವಣಿ ಕುಸಿದ ಹಿನ್ನೆಲೆಯಲ್ಲಿ ಉದ್ದೇಶಿತ ಘಟಕದ ಕಾಮಗಾರಿಯನ್ನು ಮೂರನೇ ಸ್ವತಂತ್ರ ಸಂಸ್ಥೆಯ ತನಿಖೆಗೆ ಒಪ್ಪಿಸಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ಹೇಳಿದರು.

Advertisement

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾರದರ್ಶಕ ತನಿಖೆ ನಡೆಸುವ ಉದ್ದೇಶದಿಂದ ಮೂರನೇ ವ್ಯಕ್ತಿ (ತರ್ಡ್‌ ಪಾರ್ಟಿ) ಸಂಸ್ಥೆಗೆ ತನಿಖೆ ಜವಾಬ್ದಾರಿ ನೀಡಲಾಗುವುದು. ತನಿಖೆಯ ವರದಿ ಬಂದ ನಂತರ ಅದನ್ನು ಯಾರೂ ಪ್ರಶ್ನಿಸುವಂತಿರಬಾರದು. ಹೀಗಾಗಿ, ಕಾಮಗಾರಿ ತನಿಖೆಯನ್ನು ಚೆನ್ನೈನ ಸಿಎಸ್‌ಐಆರ್‌ (ಸ್ಟ್ರಕ್ಚರಲ್‌ ಎಂಜಿನಿಯರಿಂಗ್‌ ರಿಸರ್ಚ್‌ ಸೆಂಟರ್‌)ಗೆ ನೀಡುವುದರ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಿದರು.

ತ್ಯಾಜ್ಯ ಸಂಸ್ಕರಣಾ ಘಟಕದ ನಿರ್ಮಾಣವನ್ನು 360.77ಕೋಟಿ ರೂ. ವೆಚ್ಚದಲ್ಲಿ ಎನ್‌ವೈರೋ ಕಂಟ್ರೋಲ್‌ ಎನ್ನುವ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ಇದು 30 ತಿಂಗಳ ಕಾಮಗಾರಿಯಾಗಿದ್ದು, 2017ರ ಜು.31ಕ್ಕೆ ಪ್ರಾರಂಭವಾಗಿದ್ದ ಕಾಮಗಾರಿ 2020ರ ಜ.30ಕ್ಕೆ ಮುಗಿಯಲಿತ್ತು. ಕಾಮಗಾರಿ ನಾಲ್ಕು ಡೈಜಸ್ಟರ್‌ಗಳನ್ನು ಹೊಂದಿದೆ. ನಾಲ್ಕನೇ ಡೈಜೆಸ್ಟರ್‌ನ ರೂಫ್ ಕಾಂಕ್ರೀಟ್‌ ( ಮೇಲ್ಛಾವಣಿ 65.5 ಕ್ಯೂಬಿಕ್‌ ಮೀಟರ್‌) ಕೆಲಸ ನಡೆಯುವಾಗ ಮೆಟ್ಟಿಲುಗಳ ಸಮೇತವಾಗಿ ಕಟ್ಟಡ ಕುಸಿದಿದೆ.

ಈ ಘಟಕದ ಮೂಲಕ ಗ್ಯಾಸ್‌ ಉತ್ಪತ್ತಿ ಮಾಡುವ ಯೋಜನೆ ರೂಪಿಸಲಾಗಿತ್ತು ಎಂದು ಮಾಹಿತಿ ನೀಡಿದರು. ದುರಂತದಲ್ಲಿ ಮೃತಪಟ್ಟವರಿಗೆ ಮತ್ತು ಗಾಯಾಳುಗಳಿಗೆ ಪರಿಹಾರವನ್ನು ಎನ್‌ವೈರೋ ಕಂಟ್ರೋಲ್‌ ಸಂಸ್ಥೆಯ ಕಡೆಯಿಂದಲೇ ಕೊಡಿಸಲಾಗುವುದು. ಸಂಸ್ಥೆ ಕೊಡುವಲ್ಲಿ ವಿಫ‌ಲವಾದರೆ, ಜಲ ಮಂಡಳಿಯೇ ಪರಿಹಾರ ಮೊತ್ತವನ್ನು ಭರಿಸಿ ಗುತ್ತಿಗೆ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಿದೆ ಹೇಳಿದರು.

ನಗರದಲ್ಲಿ 51 ನೀರು ಶೇಖರಣ ಘಟಕಗಳಿದ್ದು, ಇವುಗಳಲ್ಲಿ ಅರ್ಧದಷ್ಟು ಬಳಕೆಯಾಗುತ್ತಿಲ್ಲ. ಎರಡು ಬೃಹತ್‌ ಗಾತ್ರದ ನೀರು ಶೇಖರಣಾ ಘಟಕಗಳ ಬಗ್ಗೆ ದೂರು ದಾಖಲಾಗಿದ್ದು, ಅವುಗಳನ್ನು ಕೂಡಲೇ ಕೆಡವಲಾಗುವುದು ಮತ್ತು ಬಳಕೆಯಲ್ಲಿ ಇಲ್ಲದ ಹಾಗೂ ಸಮಸ್ಯೆಯಿಂದ ಕೂಡಿರುವ ಘಟಕಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮತೆಗೆದುಕೊಳ್ಳಲಾಗುವುದು ಎಂದರು.

Advertisement

ಈ ಪ್ರಕರಣದಲ್ಲಿ ಜಲ ಮಂಡಳಿಯ ಲೋಪವನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿ, ನಿರ್ಮಾಣ ಘಟಕದ ಕಾರ್ಯನಿರ್ವಾಹಕ ಎಂಜಿನಿಯರ್‌ ಸಿಎಂ ವೆಂಕಟಶಿವರೆಡ್ಡಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಮಹ್ಮದ್‌ ಹನೀಫ್ ಯತ್ನಟ್ಟಿ ಮತ್ತು ಸಹಾಯಕ ಎಂಜಿನಿಯರ್‌ ಕೆ.ವಿ ಭಾಗ್ಯಲಕ್ಷ್ಮೀ ಅವರನ್ನು ಅಮಾನತು ಮಾಡಲಾಗಿದೆ. ಕಾಮಗಾರಿ ನಡೆಯುವಾಗ ಸ್ಥಳದಲ್ಲಿ ಅಧಿಕಾರಿಗಳು ಇಲ್ಲದೆ ಇರುವುದನ್ನು ಗಂಭೀರವಾಗಿ ಪರಿಗಣಿಸಿ ಅಮಾನತ್ತು ಮಾಡಲಾಗಿದೆ ಎಂದರು.

ಕಡಿಮೆ ಸಮಯ ನೀಡಿದ್ದು ಕಾರಣವಲ್ಲ: ಕೆಲವು ಘಟಕಗಳ ನಿರ್ಮಾಣಕ್ಕೆ 36 ತಿಂಗಳು ಮತ್ತು 37 ತಿಂಗಳ ಕಾಲಾವಕಾಶವನ್ನು ನೀಡಲಾಗಿತ್ತು. ಆದರೆ, ಹೆಬ್ಟಾಳದ ಸಂಸ್ಕರಣಾ ಘಟಕದ ನಿರ್ಮಾಣಕ್ಕೆ 30ತಿಂಗಳ ಕಾಲಾವಕಾಶ ನೀಡಲಾಗಿತ್ತು. ಕಡಿಮೆ ಕಾಲಾವಧಿಯೂ ಕುಸಿತಕ್ಕೆ ಕಾರಣ ಎನ್ನುವ ಅನುಮಾನ ಮೂಡಿತ್ತು. ಇದರ ಬಗ್ಗೆ ಸ್ಪಷ್ಟನೆ ನೀಡಿರುವ ಜಲ ಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌, ದುರಂತಕ್ಕೆ 30ತಿಂಗಳ ಕಾಲಾವಧಿ ಕಾರಣವಲ್ಲ. ಸಾರ್ಮಥ್ಯ ಮತ್ತು ಗಾತ್ರಕ್ಕೆ ಅನುಗುಣವಾಗಿ ಸಮಯ ನಿಗದಿ ಮಾಡಲಾಗಿದೆ. 30ತಿಂಗಳ ನಿರ್ಮಾಣವಾದರೂ, ಇದರ ನಿರ್ಮಾಣದಲ್ಲಿ ರಾಜಿ ಮಾಡಿಕೊಳ್ಳುಂತಿಲ್ಲ. ತನಿಖೆಯ ನಂತರ ಕಟ್ಟುನಿಟ್ಟಿನಿ ಕ್ರಮತೆಗೆದು ಕೊಳ್ಳಲಾಗುವುದು ಎಂದು ಹೇಳಿದರು.

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಪ್ರಾಧ್ಯಾಪಕರ ಮೇಲೆ ಕಾರ್ಯದ ಒತ್ತಡ ಹೆಚ್ಚಾಗಿರುವ ಕಾರಣ, ಈ ಕುರಿತು ತನಿಖೆ ನಡೆಸುವಂತೆ ಚೆನ್ನೈನ ಸ್ಟ್ರಕ್ಚರಲ್‌ ಎಂಜಿನಿಯರಿಂಗ್‌ ರಿಸರ್ಚ್‌ ಸೆಂಟರ್‌ಗೆ ಪತ್ರ ಬರೆಯಲಾಗುವುದು.
-ತುಷಾರ್‌ ಗಿರಿನಾಥ್‌, ಜಲಮಂಡಳಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next