Advertisement
ಈ ಬಗ್ಗೆ ವಿಧಾನಸಭೆಯಲ್ಲಿ ನಡೆದಿದ್ದ ಚರ್ಚೆ ವೇಳೆ ವಿಪಕ್ಷಗಳು ಕೇಳಿದ್ದ ಪ್ರಶ್ನೆಗಳಿಗೆ ಗುರುವಾರ ಉತ್ತರಿಸಿದ ಅವರು, ತನಿಖೆಯಲ್ಲಿ ನಾನು ತಪ್ಪಿತಸ್ಥ ಎಂದು ತಿಳಿದು ಬಂದರೆ ನಾನೂ ಕ್ರಮ ಎದುರಿಸಲು ಸಿದ್ಧ ಎಂದರು.
Related Articles
Advertisement
ಬಿಜೆಪಿ ಸಭಾತ್ಯಾಗ
ಸಚಿವ ದಿನೇಶ್ ಗುಂಡೂರಾವ್ ಉತ್ತರ ನೀಡಿದರೂ ಪಟ್ಟು ಬಿಡದ ವಿಪಕ್ಷ ಬಿಜೆಪಿ ಸದಸ್ಯರು ಸಚಿವ ಸ್ಥಾನದಿಂದ ದಿನೇಶ್ ಗುಂಡೂರಾವ್ ಅವರನ್ನು ಕೈಬಿಡಬೇಕೆಂದು ಬಾವಿಗಿಳಿದು ಧರಣಿ ನಡೆಸಿದರು. ಅಷ್ಟರಲ್ಲಿ ಉತ್ತರ ಕರ್ನಾಟಕದ ಚರ್ಚೆಗೆ ಉತ್ತರಿಸಲು ಸಿಎಂ ಮುಂದಾಗುತ್ತಿದ್ದಂತೆ, “ಕೊಲೆಗಡುಕ ಸರಕಾರದ ಉತ್ತರ ಬೇಕಿಲ್ಲ’ ಎನ್ನುತ್ತ ಸಭಾತ್ಯಾಗ ಮಾಡಿದರು.
ಪ್ರಯೋಗಾಲಯಗಳ ಮೇಲೆಯೇ ಅನುಮಾನ!
ಮಾರ್ಚ್- ಎಪ್ರಿಲ್‌ನಲ್ಲಿ ಪಶ್ಚಿಮ್ ಬಂಗಾ ಕಂಪೆನಿ ಪೂರೈಸಿದ್ದ ದ್ರಾವಣದಿಂದ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಹಲವರಿಗೆ ಚಳಿ, ನಡುಕ ಆರಂಭವಾಗಿತ್ತು. ಗುಂಡ್ಲುಪೇಟೆ ಆಸ್ಪತ್ರೆಯಲ್ಲೂ ಸಮಸ್ಯೆ ಆಗಿತ್ತು. ರಾಷ್ಟ್ರೀಯ ಮಾನ್ಯತೆ ಪಡೆದ (ಎನ್‌ಎಬಿಎಲ್) ಪ್ರಯೋಗಾಲಯ ಹಾಗೂ ವೈದ್ಯಕೀಯ ಸರಬರಾಜು ನಿಗಮದ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಿದಾಗ ಕಳಪೆ ಗುಣಮಟ್ಟದ್ದೆಂದು ವರದಿ ಬಂದಿತ್ತು. ಹೀಗಾಗಿ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ, ಕಾರಣ ಕೇಳಿ ನೋಟಿಸ್ ಕೊಟ್ಟು 192 ಬ್ಯಾಚ್ ಐವಿ ದ್ರಾವಣಗಳ ಮೇಲೆ ನಿರ್ಬಂಧ ವಿಧಿಸಿದ್ದೆವು.
ಇದನ್ನೆಲ್ಲ ಪ್ರಶ್ನಿಸಿ ಕಂಪೆನಿಯು ನ್ಯಾಯಾಲಯದ ಮೊರೆ ಹೋಗಿತ್ತಲ್ಲದೆ, ಕೇಂದ್ರೀಯ ಪ್ರಯೋಗಾಲಯದಿಂದ “ಗುಣಮಟ್ಟದ ದ್ರಾವಣ’ ಎಂಬ ಪ್ರಮಾಣಪತ್ರ ಪಡೆದಿತ್ತು. ಹೀಗಾಗಿ ನಾವೂ ಮೇಲ್ಮನವಿ ಸಲ್ಲಿಸಲಿಲ್ಲ. ಬದಲಿಗೆ ನಿರ್ಬಂಧವನ್ನು ಮುಂದುವರಿಸಿದ್ದೆವು.
ಜೂನ್ ತಿಂಗಳ ವೇಳೆಗೆ ರಾಜ್ಯದಲ್ಲಿ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣಕ್ಕೆ ಬೇಡಿಕೆ ಹೆಚ್ಚಾಯಿತು. ಆಗ ಪಶ್ಚಿಮ್ ಬಂಗಾ ಕಂಪೆನಿಯ ಐವಿ ದ್ರಾವಣದ 192 ಬ್ಯಾಚ್‌ಗಳ ಗುಣಮಟ್ಟವನ್ನು ಮತ್ತೂಮ್ಮೆ ಪರಿಶೀಲಿಸಿ, 22 ಬ್ಯಾಚ್‌ಗಳನ್ನು ಕಳಪೆ ಎಂದು ತಡೆಹಿಡಿದು ಉಳಿದ ಬ್ಯಾಚ್‌ಗಳ ಐವಿ ದ್ರಾವಣವನ್ನು ಆಸ್ಪತ್ರೆಗಳಿಗೆ ಸರಬರಾಜು ಮಾಡಿದೆವು. ಆಗಸ್ಟ್, ಸೆಪ್ಟಂಬರ್, ಅಕ್ಟೋಬರ್‌ನಲ್ಲಿ ಐವಿ ದ್ರಾವಣದ ಯಾವುದೇ ಅಡ್ಡ ಪರಿಣಾಮಗಳು ಕಂಡು ಬಂದಿಲ್ಲ. ಈ ಹಿನ್ನೆಲೆಯಲ್ಲಿ ನ. 9ರಂದು ಬಳ್ಳಾರಿ ಆಸ್ಪತ್ರೆಗೆ ಪಶ್ಚಿಮ್ ಬಂಗಾ ಕಂಪೆನಿ ಪೂರೈಸಿದ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣ ಪೂರೈಕೆಯಾಗಿದೆ. ಅನಂತರ ಸರಣಿ ಬಾಣಂತಿಯರ ಸಾವು ಸಂಭವಿಸಿದೆ. ಕೂಡಲೇ ಈ ಐವಿ ದ್ರಾವಣವನ್ನು ಎನ್‌ಎಬಿಎಲ್ ಲ್ಯಾಬ್‌ಗಳಲ್ಲಿ 6 ಬಾರಿ ಪರೀಕ್ಷೆಗೆ ಒಳಪಡಿಸಿದ್ದು, 5 ಬಾರಿ ಗುಣಮಟ್ಟದ್ದು ಎಂದೇ ವರದಿ ಬಂದಿತ್ತು. ಕೊನೆಯ ಬಾರಿ ಪರೀಕ್ಷೆ ನಡೆಸಿದಾಗ ಗುಣಮಟ್ಟವಿಲ್ಲ ಎಂದು ವರದಿ ಬಂದಿದ್ದು, ಹೈದರಾಬಾದ್ ಲ್ಯಾಬ್ ವರದಿಯಲ್ಲಿ ಮಾತ್ರ ಐವಿ ದ್ರಾವಣದಲ್ಲಿ ಎಂಡೋ ಟಾಕ್ಸಿಕ್ ಅಂಶ ಇರುವುದಾಗಿ ಪತ್ತೆಯಾಗಿದೆ ವಿವರಿಸಿದರು.
ಬಾಣಂತಿಯರ ಸಾವು ಆಗಬಾರದಿತ್ತು. ಇದು ಗಂಭೀರ ಸ್ವರೂಪದ ಪ್ರಕರಣ ಎಂದು ಸರಕಾರ ಪರಿಗಣಿಸಿದೆ. ತನಿಖೆಗೆ ಒಪ್ಪಿಸುತ್ತೇವೆ. ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ. ಬಾಣಂತಿಯರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡುತ್ತೇವೆ. -ಸಿದ್ದರಾಮಯ್ಯ, ಮುಖ್ಯಮಂತ್ರಿ
ಬಾಣಂತಿಯರ ಸಾವು ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಹಾಲಿ ನಾಯಾಧೀಶರ ಉಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆ ಆಗಬೇಕು. ಸಚಿವ ಸ್ಥಾನದಿಂದ ದಿನೇಶ್ ಗುಂಡೂರಾವ್ ಅವರನ್ನು ಕೈಬಿಡಬೇಕು. – ಆರ್. ಅಶೋಕ್, ವಿಪಕ್ಷ ನಾಯಕ
ಪಶ್ಚಿಮ ಬಂಗಾಲ ಕಂಪೆನಿಗೆ ರಾಜ್ಯ, ಕೇಂದ್ರ ಸರಕಾರದ ಅಧಿಕಾರಿಗಳು ತೆರಳಿ ಪರಿಶೀಲಿಸಿದ್ದು, ಔಷಧ ತಯಾರಿಕೆಗೆ ತಡೆ ವಿಧಿಸಲಾಗಿದೆ. ಕಂಪೆನಿಯಿಂದ ಪರಿಹಾರವನ್ನು ಕೊಡಿಸಿಯೇ ಕೊಡಿಸುತ್ತೇವೆ. – ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ